ಕೋಲಾರ,ಜು,೧೨- ಟಿ.ನರಸೀಪುರದಲ್ಲಿ ಹಿಂದೂ ಸಂಘಟನೆ ಕಾರ್ಯಕರ್ತನ ಹತ್ಯೆ ಹಾಗೂ ಚಿಕ್ಕೋಡಿಯಲ್ಲಿ ಜೈನಮುನಿಗಳ ಹತ್ಯೆ ಖಂಡಿಸಿ ಬಜರಂಗದಳ ಸೇರಿದಂತೆ ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ಹಾಗೂ ಜೈನ ಸಮುದಾಯದ ಮುಖಂಡರು ನಗರದ ತಾಲ್ಲೂಕು ಕಚೇರಿ ಮುಂದೆ ಪ್ರತಿಭಟನೆ ನಡೆಸಿ ಪ್ರಕರಣದಲ್ಲಿ ನ್ಯಾಯ ಸಿಗಲು ಸಿಬಿಐ ತನಿಖೆಗೆ ಒಳಪಡಿಸಬೇಕು ಎಂದು ಆಗ್ರಹಿಸಿ ತಹಸೀಲ್ದಾರ್ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಬಜರಂಗದಳ ಮುಖಂಡ ಬಾಲಾಜಿ ಮಾತನಾಡಿ, ಸರ್ವಸಂಗ ಪರಿತ್ಯಾಗಿಗಳಾದ ಜೈನ ಮುನಿಗಳನ್ನು ಹತ್ಯೆ ಮಾಡಲಾಗಿದೆ, ಈ ಎರಡೂ ಹತ್ಯೆಗಳು ಸಮಾಜದ ಸ್ವಾಸ್ಥ್ಯವನ್ನು ಹಾಳು ಮಾಡುವ ಹುನ್ನಾರವಾಗಿದ್ದು, ಸರ್ಕಾರ ಕೂಡಲೇ ಈ ಎರಡು ಪ್ರಕರಣಗಳ ಕುರಿತು ಗಂಭೀರವಾಗಿ ಪರಿಗಣಿಸಬೇಕು, ಆರೋಪಿಗಳನ್ನು ಬಂಧಿಸಬೇಕು ಹಿಂದೂ ಸಮಾಜಕ್ಕೆ ನ್ಯಾಯ ಒದಗಿಸಬೇಕು ಎಂದು ಒತ್ತಾಯಿಸಿದರು.
ಬಜರಂಗದಳ ಜಿಲ್ಲಾ ಸಂಚಾಲಕ ಬಾಬು, ಕಾಂಗ್ರೆಸ್ ಸರ್ಕಾರ ಬಂದ ನಂತರ ಹಿಂದೂಗಳ ರಕ್ಷಣೆಗೆ ಕಂಟಕ ಎದುರಾಗಿದೆ, ಹಿಂದೆ ಇದೇ ಸರ್ಕಾರ ಇದ್ದಾಗಲೂ ಅನೇಕ ಹಿಂದೂ ಕಾರ್ಯಕರ್ತರು ಹತ್ಯೆಯಾಗಿದ್ದನ್ನು ಮರೆಯುವಂತಿಲ್ಲ ಎಂದರು.
ಟಿ ನರಸೀಪುರದಲ್ಲಿ ಹಿಂದೂ ಸಂಘಟನೆಗಳ ಕಾರ್ಯಕರ್ತ ವೇಣುಗೋಪಾಲರನ್ನು ಅತ್ಯಂತ ಬರ್ಬರವಾಗಿ ಹತ್ಯೆ ಮಾಡಲಾಗಿದೆ ಈ ಘಟನೆ ಬಹುಸಂಖ್ಯಾತ ಹಿಂದೂಗಳಲ್ಲಿ ಭಯೋತ್ಪಾದನೆಯ ದುರುದ್ದೇಶ ಹೊಂದಿದೆ ಇದನ್ನು ಸಮಸ್ತ ಹಿಂದೂ ಸಮುದಾಯ ಖಂಡಿಸುತ್ತದೆ, ಸರ್ಕಾರ ಕೂಡಲೇ ಆರೋಪಿಗಳನ್ನು ಬಂಧಿಸಬೇಕು, ಇಂತಹ ಘಟನೆಗಳು ಮರುಕಳಿಸದಂತೆ ಎಚ್ಚರವಹಿಸಬೇಕು ಎಂದು ಒತ್ತಾಯಿಸಿದರು.
ಜೈನ ಸಮುದಾಯದ ಮುಖಂಡರಾದ ಜಯಂತಿಲಾಲ್ ಮಾತನಾಡಿ, ಸಾಧುಸಂತರಿಗೆ ರಾಜ್ಯದಲ್ಲಿ ರಕ್ಷಣೆ ಇಲ್ಲವಾಗಿದೆ,ಸರ್ಕಾರ ಇಂತಹ ಘಟನೆಗಳನ್ನು ಗಂಭೀರವಾಗಿ ಪರಿಗಣಿಸದಿದ್ದಲ್ಲಿ ಸಮಾಜದಲ್ಲಿ ಶಾಂತಿ ನಾಶಕ್ಕೆ ಕಾರಣವಾಗುತ್ತದೆ, ಆದ್ದರಿಂದ ಇಂತಹ ದುಷ್ಕೃತ್ಯಗಳಿಗೆ ಕಾರಣವಾಗಿ ಇಡೀ ಜೈನ ಸಮುದಾಯಕ್ಕೆ ನೋವುಂಟು ಮಾಡಿರುವ ಈ ಪ್ರಕರಣದ ಸಮಗ್ರ ತನಿಖೆ ಹಾಗೂ ತಪ್ಪಿತಸ್ಥರಿಗೆ ಶಿಕ್ಷೆಯಾಗಲು ಕೂಡಲೇ ಸಿಬಿಐಗೆ ಒಪ್ಪಿಸಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ನಮೋ ಬ್ರಿಗೇಡ್‌ನ ಓಂ ಪ್ರಕಾಶ್, ನಗರಸಭಾ ಸದಸ್ಯ ಕಾಶಿ ವಿಶ್ವನಾಥ್, ಬಜರಂಗದಳದ ಅಡಿಕೆ ನಾಗ, ಮಂಜುನಾಥ್,ಸಾಯಿಮೌಳಿ, ವಿಶ್ವನಾಥ್, ರವಿ, ನಾಗರಾಜ್, ಜೈನ ಸಮುದಾಯದ ಮುಖಂಡರಾದ ಜಯಂತಿಲಾಲ್, ಲಾಲ್ ಚಂದ್, ಧೀರಜ್, ದಿಲೀಪ್, ಸುರೇಶ್, ಕಮಲ್ ಸೇರಿದಂತೆ ಹಿಂದೂ ಮುಖಂಡರು ಹಾಗೂ ಕಾರ್ಯಕರ್ತರು ಭಾಗವಹಿಸಿದ್ದರು.