ಜೈನಮುನಿ ಹತ್ಯೆ ರಾಜಕೀಯ ಲಾಭಕ್ಕೆ ಬಿಜೆಪಿ ಯತ್ನ

(ಸಂಜೆವಾಣಿ ಪ್ರತಿನಿಧಿಯಿಂದ)
ಬೆಂಗಳೂರು, ಜು. ೧೦- ಜೈನ ಮುನಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿಯವರು ರಾಜಕೀಯ ಬೆಳೆ ಬೇಯಿಸಿಕೊಳ್ಳುವ ಕೆಲಸ ಮಾಡುತ್ತಿದ್ದಾರೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ ಖರ್ಗೆ ಟೀಕಿಸಿದ್ದಾರೆ.ವಿಧಾನಸೌಧದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಶಾಸಕ ಸಿದ್ಧುಸವದಿ ಜೈನಮುನಿ ಅವರ ಹತ್ಯೆಯನ್ನು ಐಎಸ್‌ಐಎಸ್ ಉಗ್ರಗಾಮಿಗಳು ಮಾಡಿದ್ದಾರೆ ಎಂದು ಹೇಳಿದ್ದಾರೆ. ಇದನ್ನು ಬಹಿರಂಗವಾಗಿ ಹೇಳುವ ಬದಲು ಅವರ ಬಳಿ ಮಾಹಿತಿ ಇದ್ದರೆ ಪೊಲೀಸರಿಗೆ ನೀಡಲಿ. ರಾಜಕೀಯ ಕಾರಣಕ್ಕಾಗಿ ಏನೆನೋ ಮಾತನಾಡುವುದು ಸರಿಯಲ್ಲ ಎಂದರು.ಜೈನಮುನಿ ಹತ್ಯೆ ಪ್ರಕರಣವನ್ನು ರಾಜಕೀಯವಾಗಿ ಬೆಳೆಸಿಕೊಳ್ಳಲು ಹುನ್ನಾರ ನಡೆಸಿರುವ ಬಿಜೆಪಿಯವರು ವಿರೋಧ ಪಕ್ಷದ ನಾಯಕನನ್ನು ಆಯ್ಕೆ ಮಾಡಿಕೊಳ್ಳಲು ಆಗಿಲ್ಲ. ಬಜೆಟ್ ಮಂಡನೆಯಾಗಿದೆ. ವಿಧಾನಮಂಡಲದ ಅಧಿವೇಶನ ನಡೆಯುತ್ತಿದೆ. ಆದರೆ ವಿರೋಧ ಪಕ್ಷದ ನಾಯಕ ಎಲ್ಲಿದ್ದಾರೆ ಎಂದು ಅವರು ವ್ಯಂಗ್ಯವಾಡಿದರು.ವಿರೋಧ ಪಕ್ಷದ ನಾಯಕನಿಲ್ಲದೆ ಸದನ ನಡೆಯುತ್ತಿದೆ. ಈ ಮೂಲಕ ಬಿಜೆಪಿ ಸದನಕ್ಕೆ ಒಂದು ಕಪ್ಪು ಚುಕ್ಕಿ ಇಡುವ ಪ್ರಯತ್ನ ನಡೆಸಿದೆ ಎಂದು ಅವರು ದೂರಿದರು.
ನಮ್ಮ ಪೊಲೀಸರಿಂದಲೇ ತನಿಖೆ
ಜೈನಮುನಿ ಹತ್ಯೆ ಪ್ರಕರಣವನ್ನು ಸಿಬಿಐಗೆ ವಹಿಸಬೇಕು ಎಂಬ ಬಿಜೆಪಿ ನಾಯಕರ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಜೈನಮುನಿ ಹತ್ಯೆ ಪ್ರತಕಣದ ತನಿಖೆ ನಡೆಸಲು ನಮ್ಮ ಪೊಲೀಸರು ಸಮರ್ಥರಿದ್ದಾರೆ. ಸಿಬಿಐಗೆ ವಹಿಸಬೇಕು ಎಂದು ಬಿಜೆಪಿ ನಾಯಕರು ಹೇಳುವ ಮೂಲಕ ನಮ್ಮ ಪೊಲೀಸರ ಸಾಮರ್ಥ್ಯವನ್ನು ಪ್ರಶ್ನಿಸುತ್ತಿದ್ದಾರೆ. ಮೊದಲು ಬಿಜೆಪಿಯವರು ಅವರ ಬಳಿ ಇರುವ ಮಾಹಿತಿಯನ್ನು ಪೊಲೀಸರಿಗೆ ಕೊಡಲಿ. ರಾಜ್ಯ ಪೊಲೀಸರೇ ತನಿಖೆ ನಡೆಸಲು ಸಮರ್ಥರಿದ್ದಾರೆ ಎಂದು ಅವರು ಹೇಳಿದರು.