ಜೈನಮುನಿ ಹತ್ಯೆ ತೀವ್ರ ಖಂಡನೆ

ಅಥಣಿ :ಜು.10: ಚಿಕ್ಕೋಡಿಯ ಹಿರೇಕೊಡಿ ಗ್ರಾಮದ ನಂದಿ ಪರ್ವತ ಆಶ್ರಮದ ಜೈನ ಮುನಿ ಶ್ರೀ 108 ಕಾಮಕುಮಾರ ನಂದಿ ಮಹಾರಾಜರ ಹತ್ಯೆಯ ಸುದ್ದಿಯು ತೀವ್ರ ಆಘಾತವನ್ನುಂಟು ಮಾಡಿದೆ, ಮನಸ್ಸನ್ನು ಅತೀವ ಘಾಸಿಗೊಳಿಸಿದೆ, ಸಮಾಜಕ್ಕೆ ಶಾಂತಿ ಮಂತ್ರ ಸಾರುವ, ಜೈನ ಮುನಿಗಳ ಅಮಾನವೀಯ ಹತ್ಯೆ ಖೇದಕರ.
ನಾನು ಇದನ್ನು ತೀವ್ರವಾಗಿ ಖಂಡಿಸುತ್ತೇನೆ ಎಂದು ಮಾಜಿ ಶಾಸಕ ಶಹಾಜಹಾನ ಡೊಂಗರಗಾಂವ ಹೇಳಿದರು,
ಅವರು ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಸಾಧು, ಸಂತರು, ಮುನಿಗಳು ಶಾಂತಿ ಪ್ರೀಯರು. ದೇಶದ ಒಳಿತು, ಸಂಸ್ಕಾರ, ಧರ್ಮದ ವಿಚಾರವಾಗಿ ಮಾರ್ಗದರ್ಶನ ನೀಡುವವರು. ಅಂತಹ ಸಾಧು ಸಂತರನ್ನೆ ಈ ರೀತಿ ಹೇಯವಾಗಿ ಕ್ರತ್ಯವೆಸಗಿ ಕೊಲೆ ಮಾಡಿರುವುದನ್ನು ನಾಗರೀಕ ಸಮಾಜ ಒಪ್ಪಲು ಸಾಧ್ಯವೇ ಇಲ್ಲ. ಹತ್ಯೆಯ ಕುರಿತು ಸರ್ಕಾರ ಸೂಕ್ತ ತನಿಖೆ ನಡೆಸಬೇಕು, ಈ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡು ಕೊಲೆಗಡುಕರಿಗೆ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಸರಕಾರವನ್ನು ಒತ್ತಾಯಿಸಿದ್ದಾರೆ.
ಇಂತಹ ಸಮಾಜಘಾತುಕ ದುಷ್ಕರ್ಮಿಗಳ ವಿರುದ್ಧ ಸರ್ಕಾರ ತಕ್ಷಣವೇ ಕಠಿಣ ಕ್ರಮ ಕೈಗೊಳ್ಳಬೇಕು, ಮತ್ತೊಮ್ಮೆ ಇಂಥ ಘಟನೆಗಳು ಮರುಕಳಿಸಬಾರದು. ಈ ದೇಶದ ಸಾಧು ಸಂತರಿಗೆ, ಮುನಿಗಳಿಗೆ, ಅನೇಕ ಮಠಗಳ ಪೂಜ್ಯರುಗಳಿಗೆ ಸೂಕ್ತವಾದ ರಕ್ಷಣೆಯನ್ನು ನೀಡುವಂತಾಗಬೇಕೆಂದು ಸರ್ಕಾರವನ್ನು ಆಗ್ರಹಿಸಿದ್ದಾರೆ,
ಪೂಜ್ಯ ಜೈನಮುನಿಗಳ ಅಗಲುವಿಕೆಯಿಂದ ಜೈನ ಸಮಾಜವಲ್ಲದೆ ಇಡೀ ನಾಡು ದು:ಖ ತಪ್ತವಾಗಿದ್ದು ಮುನಿಗಳ ಅಗಲುವಿಕೆಯ ನೋವು ಸಹಿಸುವ ಶಕ್ತಿಯನ್ನು ಭಗವಂತ ಅವರ ಅಪಾರ ಭಕ್ತಗಣಕ್ಕೆ ಹಾಗೂ ನಾಡಿನ ಜನತೆಗೆ ಕರುಣಿಸಲೆಂದು ಅವರು ಪ್ರಾರ್ಥಿಸಿದ್ದಾರೆ. ಮುನಿಗಳ ದಿವ್ಯಾತ್ಮಕ್ಕೆ ಭಾವಪೂರ್ಣ ಭಕ್ತಿಯ ನಮನಗಳನ್ನು ಸಲ್ಲಿಸಿದ್ದಾರೆ.