
ಅಥಣಿ : ಜು.21:ಹಿರೇಕೊಡಿಯ ನಂದಿ ಪರ್ವತ ಆಶ್ರಮದ ಜೈನ ಮುನಿ ಶ್ರೀ ಕಾಮಕುಮಾರ ನಂದಿ ಮಹಾರಾಜರ ಬರ್ಬರ ಹತ್ಯೆಯನ್ನು ವಿಶೇಷ ಪ್ರಕರಣ ಎಂದು ಪರಿಗಣಿಸಿ ಆರೋಪಿಗಳ ವಿಚಾರಣೆಗಾಗಿ ವಿಶೇಷ ನ್ಯಾಯಾಲಯ ಸ್ಥಾಪಿಸಿ ಅತೀ ಶೀಘ್ರದಲ್ಲಿಯೇ ಆರೋಪಿಗಳಿಗೆ ಗಲ್ಲು ಶಿಕ್ಷೆ ನೀಡಬೇಕು ಎಂದು ಹಿರಿಯ ನ್ಯಾಯವಾದಿ, ಜೈನ್ ಸಮಾಜದ ಮುಖಂಡ ಕೆ.ಎ.ವಣಜೋಳ ರಾಜ್ಯ ಸರಕಾರವನ್ನು ಒತ್ತಾಯಿಸಿದರು.
ಅವರು ಅಥಣಿ ಪಟ್ಟಣದ ಜೈನ ಬಸದಿಯ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಶ್ರದ್ಧಾಂಜಲಿ ಸಭೆ ಹಾಗೂ ಮೌನ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದರು. ನಮ್ಮ ಜೈನ ಮುನಿಗಳ ಹತ್ಯೆಯ ಪ್ರಕರಣದ ಆರೋಪಿಗಳನ್ನು ಪತ್ತೆ ಹಚ್ಚುವಲ್ಲಿ ಅಥಣಿ ಡಿಎಸ್ಪಿ ಶ್ರೀಪಾದ ಜಲ್ದೆ ಹಾಗೂ ಸಿಪಿಐ ರವೀಂದ್ರ ನಾಯ್ಕೋಡಿ ಇವರ ಪ್ರಾಥಮಿಕ ತನಿಖೆಯಿಂದಲೇ ಮೊಟ್ಟ ಮೊದಲ ಬಾರಿಗೆ ಮುನಿ ಮಹಾರಾಜರ ಕೊಲೆ ರಹಸ್ಯ ಬಯಲಾಗಿದೆ. ಈಗಾಗಲೇ ಆರೋಪಿಗಳನ್ನು ಬಂಧಿಸಿ ನ್ಯಾಯಾಂಗಕ್ಕೆ ಒಪ್ಪಿಸಲಾಗಿದೆ. ಕೊಲೆಯಾದ ಶ್ರೀ ಕಾಮಕುಮಾರ ಮಹಾರಾಜರ ಪೂರ್ವಾಶ್ರಮದ ಗ್ರಾಮ ಅಥಣಿ ತಾಲೂಕಿನ ಕವಟಕೊಪ್ಪ. ಹೀಗಾಗಿ ಅವರ ಕೊಲೆ ಅಥಣಿ ತಾಲೂಕಿನ ಜೈನ್ ಸಮುದಾಯ ಬಾಂಧವರಲ್ಲಿ ಆಕ್ರೋಶ ವ್ಯಕ್ತವಾಗುತ್ತಿದೆ. ಸರಕಾರ ವಿಶೇಷ ನ್ಯಾಯಾಲಯದ ಮೂಲಕ ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಆಗ್ರಹಿಸಿದರು.
ಮುನಿ ಮಹಾರಾಜರ ಕೊಲೆ ಪ್ರಕರಣದ ಕುರಿತಾಗಿ ಅಥಣಿ ಶಾಸಕ ಲಕ್ಷ್ಮಣ ಸವದಿ ಸೇರಿದಂತೆ ಅನೇಕ ಶಾಸಕರು ವಿಧಾನ ಮಂಡಲ ಅಧಿವೇಶನದಲ್ಲಿ ಪ್ರಸ್ತಾಪಿಸಿ ಸದನದ ಗಮನ ಸೆಳೆದಿದ್ದಲ್ಲದೆ ವಿಶೇಷ ತಂಡ ರಚಿಸಿ ಕೊಲೆ ರಹಸ್ಯ ಬಯಲು ಮಾಡಬೇಕು ಎಂದು ಸರಕಾರವನ್ನು ಆಗ್ರಹಿಸಿದ್ದಾರೆ. ಮುನಿ ಮಹಾರಾಜರ ಹತ್ಯೆ ಖಂಡಿಸಿ ಇಡೀ ದೇಶದಲ್ಲಿ ಮೌನ ಮೆರವಣಿಗೆ ನಡೆಸಲಾಗುತ್ತಿದೆ ಎಂದರು.
ಸಭೆಯಲ್ಲಿ ಕಾಂಗ್ರೆಸ್ ಮುಖಂಡ ಗಜಾನನ ಮಂಗಸೂಳಿ, ಜೈನ್ ಸಮುದಾಯದ ಅರುಣ ಯಲಗುದ್ರಿ, ಅಮರ ದುರ್ಗಣ್ಣವರ, ಜಿನಗೌಡ ಪಾಟೀಲ, ಡಿ. ಡಿ. ಮೇಕನಮರಡಿ ಸೇರಿದಂತೆ ಅನೇಕರು ಮಾತನಾಡಿ ಆರೋಪಿಗಳಿಗೆ ಸಾರ್ವಜನಿಕವಾಗಿ ಶಿಕ್ಷೆ ವಿಧಿಸಬೇಕು ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಶ್ರೀ 1008 ಆದಿನಾಥ ದಿಗಂಬರ ಜೈನ ಸಮಿತಿ, ಅಥಣಿ ತ್ರಿಶಲಾದೇವಿ ಮಹಿಳಾ ಮಂಡಳ ಹಾಗೂ ಅಥಣಿ ತಾಲೂಕಾ ಸಮಸ್ತ ಜೈನ ಸಮಾಜದಿಂದ ಗ್ರೇಡ್ 2 ತಹಶಿಲ್ದಾರ ಬಿ.ಜಿ.ಕುಲಕರ್ಣಿ ಅವರ ಮೂಲಕ ಮನವಿ ಸಲ್ಲಿಸಿ ರಾಜ್ಯ ಸರಕಾರವನ್ನು ಆಗ್ರಹಿಸಿದರು. ಈ ಸಂದರ್ಭದಲ್ಲಿ ಸಮಸ್ತ ಜೈನ್ ಸಮಾಜದ ಶ್ರಾವಕ, ಶ್ರಾವಕಿಯರು ಉಪಸ್ಥಿತರಿದ್ದರು.