ಜೈನಮುನಿ ಹತ್ಯೆ:ಆರೋಪಿಗಳಿಗೆ ಕಠಿಣ ಶಿಕ್ಷೆಗೆ ಆಗ್ರಹ

ಮುದ್ದೇಬಿಹಾಳ:ಜು.11: ಪ್ರಸ್ತುತ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲ್ಲೂಕಿನ ಹಿರೆಕೋಡಿ ಗ್ರಾಮದ ನಂದಿಪರ್ವತ ಆಶ್ರಮದಲ್ಲಿನ ಜೈನ ಮಂದಿರದ ಮುನಿ ಆಚಾರ್ಯ ಶ್ರೀ 108 ಕಾಮಕುಮಾರನಂದಿ ಮಹಾರಾಜರು ನಾಪತ್ತೆಯಾಗಿ ಹತ್ಯೆಯಾಗಿರುವುದು ಅತ್ಯಂತ ದುಖಃದ ವಿಷಯವಾಗಿದೆ. ಮುನಿಮಹಾರಾಜರನ್ನು ತೀವ್ರ ಹಿಂಸಾತ್ಮಕ ರೀತಿಯಲ್ಲಿ ಮತ್ತು ಬರ್ಬರವಾಗಿ ಅಂಗಾಂಗಳನ್ನು ಕತ್ತರಿಸಿ ಕೊಲೆ ಮಾಡಿರುವುದು ಖಂಡನೀಯ ಮತ್ತು ಇಂತಹ ಅಹಿತಕರ ಘಟನೆಗಳು ನಾಗರೀಕ ಸಮಾಜದ ಮೇಲೆ ದುಷ್ಪರಿಣಾಮ ಬೀರುತ್ತವೆ. ಮುನಿಶ್ರೀಗಳ ಹತ್ಯೆ ಮಾಡಿದ ಆರೋಪಿಗಳಿಗೆ ಅತ್ಯಂತ ಕಠಿಣ ಶಿಕ್ಷೆಯಾಗಬೇಕು, ಇಡೀ ಜೈನ ಸಮಾಜ ದುಖಃದಲ್ಲಿ ಮುಳಗಿದೆ ಎಂದು ಅರಿಹಂತ ಚಾರಿಟೇಬಲ್ ಟ್ರಸ್ಟನ ಅಧ್ಯಕ್ಷರಾದ ಮಹಾವೀರ ಸಗರಿ ಹಾಗೂ ತಾಲೂಕಿನ ದಿಗಂಬರ ಜೈನ ಸಮಾಜದ ಗಣ್ಯರು ಅಗ್ರಹಿಸಿದ್ದಾರೆ.

ಆತ್ಮಕಲ್ಯಾಣಗೋಸ್ಕರ ಕಠಿಣ ವೃತಗಳು ಆಚರಿಸುವುದರ ಜೊತೆಗೆ ಸಲ್ಲೇಖನ ವೃತದತ್ತ ಮುಖ ಮಾಡಿರುವಆಧ್ಯಾತ್ಮ ಪ್ರವರ್ತಕರೂ, ಶಾಂತಿ ಪ್ರಿಯರೂ ಮತ್ತು ಸತ್ಯ, ತ್ಯಾಗ, ಅಹಿಂಸೆಯ ಪ್ರತಿಪಾದಕರೂ ಆಗಿರುವ ಎಲ್ಲ ಜೈನ ಮುನಿಗಳಿಗೆ ಇಂತಹ ಅಹಿತಕರ ಘಟನೆಗಳಿಂದ ತೊಂದರೆಯಾಗದಂತೆ ಭದ್ರತೆಯನ್ನು ನೀಡಬೇಕು ಮತ್ತು ಎಲ್ಲ ರೀತಿಯ ಸೂಕ್ತ ಮುಂಜಾಗ್ರತಾ ಕ್ರಮಗಳನ್ನು ಕರ್ನಾಟಕ ಸರ್ಕಾರದವರು ಕೈಗೊಂಡು ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡಬೇಕೆಂದು ಪತ್ರಿಕಾ ಪ್ರಕಟಣೆಯ ಮೂಲಕ ಒತ್ತಾಯಿಸಿದ್ದಾರೆ.