ಜೈನಮುನಿ ಹಂತಕರ ಸೆರೆ

ಬೆಳಗಾವಿ,ಜು.೮-ಚಿಕ್ಕೋಡಿಯ ಹೀರೆಕುಡಿ ನಂದಿ ಪರ್ವತ ಆಶ್ರಮದಿಂದ ನಾಪತ್ತೆಯಾಗಿದ್ದ ಜೈನಮುನಿ ಬರ್ಬರ ಕೊಲೆಯಾಗಿದ್ದು, ಸುದ್ದಿ ತಿಳಿದ ಭಕ್ತರು ಸ್ವಾಮೀಜಿಯನ್ನು ನೆನೆದು ಕಣ್ಣೀರು ಹಾಕುತ್ತಿದ್ದಾರೆ.ಸ್ವಾಮಿಜಿ ಕೊಲೆಯಿಂದ ನಿತ್ಯ ಭಕ್ತರಿಂದ ತುಂಬಿ ತುಳುಕುತ್ತಿದ್ದ ಆಶ್ರಮದಲ್ಲಿ ಇಂದು ನೀರವ ಮೌನ ಆವರಿಸಿದೆ.ಈ ಮಧ್ಯೆ ಅನುಮಾನದ ಮೇಲೆ ಇಬ್ಬರು ಆರೋಪಿಗಳನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಕೊಲೆ ರಹಸ್ಯ ಬಯಲಾಗಿದೆ.ಕಳೆದ ಜುಲೈ ೬ರಂದು ಹೀರೆಕುಡಿಯ ಆಚಾರ್ಯ ಶ್ರೀ ೧೦೮ ಕಾಮಕುಮಾರ ನಂದಿ ಮಹಾರಾಜರು ನಂದಿ ಪರ್ವತ ಆಶ್ರಮದಿಂದ ನಾಪತ್ತೆಯಾಗಿದ್ದು, ಭಕ್ತರು ಆಶ್ರಮದ ಸುತ್ತಮುತ್ತ ಸ್ವಾಮೀಜಿಗಾಗಿ ಹುಡುಕಾಡಿದ್ದು, ಎಲ್ಲಿಯೂ ಪತ್ತೆಯಾಗದಿದ್ದರಿಂದ ಆತಂಕಗೊಂಡು ಚಿಕ್ಕೋಡಿ ಠಾಣಾ ಪೊಲೀಸರಿಗೆ ದೂರು ನೀಡಿದ್ದರು.ಪ್ರಕರಣ ದಾಖಲಿಸಿ ತನಿಖೆ ಕೈಗೊಂಡ ಪೊಲೀಸರು ಅನುಮಾನದ ಮೇಲೆ ಇಬ್ಬರು ಬಂಧಿಸಿ ವಿಚಾರಣೆ ನಡೆಸಿದಾಗ ಕೊಲೆ ರಹಸ್ಯ ಬಯಲಾಗಿದೆ.ಕಳೆದ ೧೫ ವರ್ಷಗಳಿಂದ ನಂದಿ ಪರ್ವತ ಆಶ್ರಮದಲ್ಲಿ ವಾಸವಿದ್ದ ಜೈನಮುನಿಗೆ ಅವರ ಸೇವಕಿ ಕುಸುಮಾ ಗೌರಾಜ್ ನಿತ್ಯ ಆಹಾರದ ವ್ಯವಸ್ಥೆ ಮಾಡುತ್ತಿದ್ದರು. ಸ್ವಾಮೀಜಿಯ ಹತ್ಯೆಯ ಸುದ್ದಿ ಬಳಿಕ ಕುಸುಮಾ ಗೌರಾಜ್ ಅವರನ್ನು ನೆನೆದು ಬಿಕ್ಕಿ ಬಿಕ್ಕಿ ಅಳುತ್ತಿದ್ದಾರೆ. ಇತ್ತ ಕೊಲೆ ರಹಸ್ಯ ಬಾಯ್ಬಿಟ್ಟ ಆರೋಪಿಗಳು ಸ್ವಾಮಿಜಿಯ ಶವವನ್ನು ರಾಯಬಾಗ ತಾಲೂಕಿನ ಖಟಕಬಾವಿ ಗ್ರಾಮದ ಹೊರವಲಯದ ತೆರೆದ ಕೊಳವೆ ಬಾವಿಗೆ ಹಾಕಿರುವುದಾಗಿ ಮಾಹಿತಿ ನೀಡಿದ್ದಾರೆ. ಮಾಹಿತಿ ದೊರೆತ ಹಿನ್ನೆಲೆ ಪೊಲೀಸರು ಸ್ಥಳಕ್ಕೆ ಧಾವಿಸಿ ಮೃತದೇಹಕ್ಕಾಗಿ ಪರಿಶೀಲನೆ ನಡೆಸುತ್ತಿದ್ದಾರೆ.
ರಸ್ತೆ ಸಂಪರ್ಕ ಕಡಿತ:
ರಾಯಬಾಗ ತಾಲೂಕಿನ ಖಟಕಬಾವಿ ಗ್ರಾಮದಲ್ಲಿ ಶೋಧ ನಡೆಯುತ್ತಿರುವ ಹಿನ್ನೆಲೆಯಲ್ಲಿ ಗದ್ದೆಗೆ ತೆರಳುವ ಎರಡೂ ಬದಿಯಲ್ಲಿ ಬ್ಯಾರಿಕೇಡ್ ಹಾಕಿ ರಸ್ತೆ ಸಂಪರ್ಕವನ್ನು ಕಡಿತಗೊಳಿಸಲಾಗಿದೆ.ಖಟಕಬಾವಿ ಮುಗಳಖೋಡ ರಸ್ತೆಯನ್ನು ಬಂದ್ ಮಾಡಿರುವ ಪೊಲೀಸರು ಶೋಧ ಮುಂದುವರಿಸಿದ್ದಾರೆ.
ಕಾರ್ಯಾಚರಣೆ ಸ್ಥಳದಲ್ಲಿ ಸಾರ್ವಜನಿಕರು ಮತ್ತು ಮಾಧ್ಯಮಗಳಿಗೆ ನಿರ್ಬಂಧ ಹೇರಿದ್ದು, ಎಸ್‌ಪಿ ಡಾ.ಸಂಜೀವ್ ಪಾಟೀಲ್ ಸ್ಥಳದಲ್ಲೇ ಮೊಕ್ಕಾಂ ಹೂಡಿದ್ದಾರೆ.
ಆರೋಪಿಗಳ ವಿಚಾರಣೆ:
ದುರ್ಘಟನೆಯ ಮಾಹಿತಿ ನೀಡಿದ ಎಸ್ಪಿ ಸಂಜೀವ್ ಪಾಟೀಲ್,ಕಳೆದ ಮೂರು ದಿನಗಳಿಂದ ಸ್ವಾಮೀಜಿ ಕಾಣೆಯಾಗಿರುವ ಬಗ್ಗೆ ನಿನ್ನೆ ಭಕ್ತರು ದೂರು ನೀಡಿದ್ದರು. ಭಕ್ತರ ದೂರಿನ ಮೇರೆಗೆ ತನಿಖೆ ಕೈಗೊಂಡು ಹಿಂದಿನ ದಿನಗಳ ಘಟನಾವಳಿಗಳ ಬಗ್ಗೆ ತಾಳೆ ಹಾಕಿದೆವು. ತನಿಖೆ ವೇಳೆ ಆಶ್ರಮಕ್ಕೆ ಯಾರು ಬಂದು ಹೋಗಿದ್ದರೆಂಬುದರ ಬಗ್ಗೆ ವಿಚಾರಣೆ ನಡೆಸಲಾಯಿತು.ಸ್ವಾಮೀಜಿಗೆ ಪರಿಚಯವಿದ್ದ ವ್ಯಕ್ತಿಯ ವಿಚಾರಣೆಗೊಳಪಡಿಸಿದೆವು. ಆ ವ್ಯಕ್ತಿ ಆಶ್ರಮದಲ್ಲಿ ಮಹಾರಾಜರನ್ನು ಕೊಲೆ ಮಾಡಿ ಬೇರೆಡೆ ಶವ ಬಿಸಾಕಿದ ಬಗ್ಗೆ ಮಾಹಿತಿ ನೀಡಿದ್ದಾನೆ. ಈ ಕೃತ್ಯಕ್ಕೆ ಸಹಕಾರ ನೀಡಿದ್ದ ಓರ್ವನನ್ನು ಸೇರಿ ಇಬ್ಬರು ಆರೋಪಿಗಳನ್ನು ಬಂಧಿಸಿದ್ದೇವೆ.
ಹಣ ಕೇಳಿದ್ದಕ್ಕೆ ಕೊಲೆ:
ಸ್ವಾಮೀಜಿ ನೀಡಿದ್ದ ಹಣ ವಾಪಸ್ ಕೇಳಿದ್ದಕ್ಕೆ ಕೊಲೆ ಮಾಡಿದ್ದಾಗಿ ತಪ್ಪು ಒಪ್ಪಿಕೊಂಡಿದ್ದಾನೆ ಎಂದು ಮಾಹಿತಿ ನೀಡಿದ್ದಾರೆ.ಗ್ರಾಮಸ್ಥರು ಹಾಗೂ ಮಾಧ್ಯಮಗಳಿಗೆ ಮನವಿ ಮಾಡುತ್ತೇನೆ. ಮೃತದೇಹ ಶೋಧಕಾರ್ಯ ಸ್ಥಳಕ್ಕೆ ಯಾರಿಗೂ ಪ್ರವೇಶವಿಲ್ಲ. ಸಾಕ್ಷ್ಯಾಧಾರ ಕಲೆಹಾಕಿ ನ್ಯಾಯಾಲಯಕ್ಕೆ ನೀಡಬೇಕಿರುವ ಹಿನ್ನೆಲೆ ಸದ್ಯಕ್ಕೆ ಕಾರ್ಯಾಚರಣೆ ಸ್ಥಳದಲ್ಲಿ ಯಾರಿಗೂ ಪ್ರವೇಶವಿಲ್ಲ.ಪ್ರಕರಣದ ತನಿಖೆ ಮುಂದುವರಿದಿದೆ. ಬೇರೆ ವ್ಯವಹಾರ ಏನಾದರೂ ಇತ್ತಾ ಎಂಬ ಬಗ್ಗೆಯೂ ತನಿಖೆ ನಡೆಯುತ್ತಿದೆ. ವೈಯಕ್ತಿಕ ಕಾರಣಕ್ಕೆ ಹತ್ಯೆ ನಡೆದಿದೆ ಎಂದು ತಿಳಿಸಿದರು. ಆರೋಪಿಗೆ ನೀಡಿದ ಹಣವನ್ನು ಸ್ವಾಮೀಜಿ ವಾಪಸ್ ಕೇಳಿದ್ದಕ್ಕೆ ಹತ್ಯೆ ಮಾಡಲಾಗಿದೆ. ಆರೋಪಿಗಳು ಹೇಳಿದ ಹಲವು ಪ್ರದೇಶಗಳಲ್ಲಿ ಶೋಧ ಮಾಡಿದ್ದೇವೆ ಎಂದು ಎಸ್‌ಪಿ ಸಂಜೀವ್ ಪಾಟೀಲ್ ಮಾಹಿತಿ ನೀಡಿದರು.