ಜೈನಮುನಿ ಅಮಾನುಷ ಹತ್ಯೆ ಎಫ್‌ಐಆರ್‌ನಲ್ಲಿ ಬಹಿರಂಗ

ಬೆಳಗಾವಿ,ಜು.೧೧-ಚಿಕ್ಕೋಡಿಯ ಹೀರೆಕುಡಿ ನಂದಿ ಪರ್ವತ ಆಶ್ರಮದ ಜೈನಮುನಿ ಕಾಮಕುಮಾರ ನಂದಿ ಮಹಾರಾಜರ ಬರ್ಬರ ಕೊಲೆಯನ್ನು ಎರಡನೇ ಆರೋಪಿ ಹಸನ್ ಡಾಲಾಯತ್ ಜೊತೆ ಸೇರಿ ನಾರಾಯಣ ಮಾಳಿ ಮಾಡಿರುವುದು ಪ್ರಾಥಮಿಕ ಮಾಹಿತಿ ವರದಿ (ಎಫ್‌ಐಆರ್)ಯಲ್ಲಿ ಬಯಲಾಗಿದೆ.
ಕರೆಂಟ್ ಶಾಕ್ ನೀಡಿ ಸ್ವಾಮೀಜಿಯ ಹತ್ಯೆಗೈದ ಹಂತಕರು ಬಳಿಕ ಅವರ ದೇಹವನ್ನು ತುಂಡು ತುಂಡು ಮಾಡಿ ಕೊಳವೆ ಬಾವಿಗೆ ಎಸೆದಿದ್ದರು. ಕೊಲೆ ಮಾಡಿದ್ದು ನಾರಾಯಣ ಮಾಳಿ ಮಾತ್ರ ಎಂದು ಬಿಂಬಿಸುವ ಕಾರ್ಯ ನಡೆದಿತ್ತು.ಆದರೆ ಎಫ್ ಐಆರ್ ನಲ್ಲಿ ಹಸನ್ ಡಾಲಾಯತ್ ಹಾಗೂ ನಾರಾಯಣ ಮಾಳಿ ಇಬ್ಬರು ಸೇರಿ ಕೊಲೆ ಮಾಡಿರುವುದು ಬಹಿರಂಗವಾಗಿದೆ.ಜೈನಮುನಿ ಕಾಮಕುಮಾರ ನಂದಿ ಅವರಿಗೆ ಕರೆಂಟ್ ಶಾಕ್ ಕೊಟ್ಟು ಚಿತ್ರ ಹಿಂಸೆ ನೀಡಿದರೂ ಅವರ ಪ್ರಾಣ ಪಕ್ಷಿ ಹಾರಿ ಹೋಗಿರಲಿಲ್ಲ.
ನಂತರ ಸ್ವಾಮೀಜಿಯ ಟವೆಲ್‌ನಿಂದಲೇ ಅವರನ್ನು ಕುತ್ತಿಗೆ ಬಿಗಿದು ಕೊಲೆ ಮಾಡಿದ್ದಾರೆ.ಹಣ ವಾಪಸ್ ನೀಡುವಂತೆ ಪದೇ ಪದೇ ಸ್ವಾಮೀಜಿ ಪೀಡಿಸುತ್ತಿದ್ದು, ಇದರಿಂದ ಕೋಪಗೊಂಡ ನಾರಾಯಣ ಮಾಳಿ ತನ್ನ ಸ್ನೇಹಿತ ಹಸನ್ ಡಾಲಾಯತ್ ಜೊತೆ ಸೇರಿ ಕೊಲೆ ಮಾಡಿದ್ದಾನೆ. ಕೋಣೆಯಲ್ಲಿ ಜೈನ ಮುನಿಗೆ ಮೊದಲು ಕರೆಂಟ್ ಶಾಕ್ ನೀಡಿ ಚಿತ್ರ ಹಿಂಸೆ ನೀಡಿದ್ದು, ಬಳಿಕ ಕೊಲೆ ಮಾಡಿ ಗೋಣಿ ಚೀಲದಲ್ಲಿ ಶವ ಸಾಗಿಸಿದ್ದಾರೆ.ಹೀರೆಕುಡಿಯಿಂದ ಖಟಕಬಾವಿಯವರೆಗೂ ಬೈಕ್ ಮೇಲೆ ಶವ ಸಾಗಾಟ ಮಾಡಿ ಖಟಕಬಾವಿಯ ಕೊಳವೆ ಬಾವಿ ಬಳಿ ದೇಹ ತುಂಡು ತುಂಡು ಮಾಡಿದ್ದಾರೆ.ತಲೆ ತೂರದ ಹಿನ್ನೆಲೆಯಲ್ಲಿ ಅದನ್ನು ಕತ್ತರಿಸಿ ನಂತರ ಕೊಳವೆ ಬಾವಿಯಲ್ಲಿ ಶವ ಎಸೆದು ಹೋಗಿರುವ ವಿಚಾರ ಎಫ್‌ಐಆರ್‌ನಲ್ಲಿ ಉಲ್ಲೇಖವಾಗಿದೆ.ಮರದ ಬೇರುಗಳು ಕೊಳವೆಬಾಯಿಯ ೨೫ ಅಡಿ ಆಳದಲ್ಲಿ ತಾಗಿದ್ದರಿಂದ ಮೃತದೇಹದ ತುಂಡುಗಳು ೪೦೦ಅಡಿಯ ಆಳಕ್ಕೆ ಇಳಿದಿರಲಿಲ್ಲ ಎನ್ನುವುದು ಬೆಳಕಿಗೆ ಬಂದಿದೆ.ಎಫ್‌ಐಆರ್‌ನ ಈ ವಿಚಾರಗಳನ್ನು ಗಮನಿಸಿದಾಗ ಆರೋಪಿಗಳಾದ ನಾರಾಯಣ ಮಾಳಿ ಮತ್ತು ಹುಸೇನ್ ದಲಾಯತ್ ಆರಂಭದಿಂದಲೇ ಈ ಕೊಲೆ ಸಂಚಿನಲ್ಲಿ ಭಾಗಿಯಾಗಿರುವುದು, ಸಂಪೂರ್ಣವಾಗಿ ತೊಡಗಿಕೊಂಡಿದ್ದು ಸ್ಪಷ್ಟವಾಗುತ್ತದೆ.ಆರೋಪಿಗಳು ಡೈರಿಯನ್ನು ಸುಟ್ಟು ಹಾಕಲು ಏನು ಕಾರಣ ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದು, ಅದರಲ್ಲಿ ಸ್ವಾಮೀಜಿ ಬರೆದಿಡುತ್ತಿದ್ದ ಅಂಶದ ಬಗ್ಗೆ ವಿಚಾರಣೆ ಮುಂದುವರಿದಿದೆ. ಸ್ವಾಮೀಜಿ ಬಳಿ ಇದ್ದ ಡೈರಿ ಸಿಕ್ಕಿದ್ದರೆ ಪ್ರಕರಣದ ತನಿಖೆಗೂ ಸಹಾಯ ಆಗುತ್ತಿತ್ತು ಎಂಬ ಅಭಿಪ್ರಾಯ ಪೊಲೀಸ್ ವಲಯದಲ್ಲಿದೆ.ಜೈನಮುನಿ ಶ್ರೀ ಕಾಮ ಕುಮಾರ ನಂದಿ ಮಹರಾಜ್ ಅವರ ನಾಪತ್ತೆಯ ಬಗ್ಗೆ ಪ್ರಕರಣ ದಾಖಲಾಗಿ ಹುಡುಕಾಟ ಆರಂಭವಾದ ಬೆನ್ನಲ್ಲೇ ಕೊಲೆ ಎಂದು ಬಯಲಾಗಿ ಆರೋಪಿಗಳನ್ನು ಬಂಧಿಸಲಾಗಿದೆ. ಆರಂಭದಲ್ಲಿ ಪ್ರಕರಣದಲ್ಲಿ ನಾರಾಯಣ ಮಾಳಿ ಒಬ್ಬನದೇ ಹೆಸರು ಕೇಳಿಬಂದಿತ್ತು.
ಬಳಿಕ ಹುಸೇನ್ ದಲಾಯತ್ ಹೆಸರು ಸೇರಿತ್ತು. ಆತ ಶವವನ್ನು ಕತ್ತರಿಸಿ ಎಸೆಯುವಲ್ಲಿ ಸಹಾಯ ಮಾಡಿದ್ದ ಎಂದು ಹೇಳಲಾಗಿತ್ತು. ಆದರೆ, ಈಗ ಆತನೂ ಕೊಲೆಯಲ್ಲಿ ಸಂಪೂರ್ಣ ಭಾಗಿದಾರ ಎನ್ನುವುದು ಸ್ಪಷ್ಟವಾಗಿದೆ.