ಜೈನಮುನಿಯಿಂದ ೪೦ ಲಕ್ಷ ಸಾಲ ಪಡೆದಿದ್ದ ಆರೋಪಿ ಮಾಳಿ

ಬೆಳಗಾವಿ,ಜು.೧೫-ಚಿಕ್ಕೋಡಿಯ ಹಿರೇಕೋಡಿಯ ಜೈನ ಮುನಿ ಕಾಮಕುಮಾರ ನಂದಿ ಮಹಾರಾಜನ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ನಾರಾಯಣ ಮಾಳಿ ಮುನಿಗಳಿಂದ ತನ್ನ ಸ್ನೇಹಿತ ಹಾಗೂ ತನಗಾಗಿ ೩೦ರಿಂದ೪೦ ಲಕ್ಷ ರೂಗಳವರೆಗೆ ಸಾಲ ಪಡೆದಿರುವುದು ಪೊಲೀಸ್ ತನಿಖೆಯಿಂದ ಬೆಳಕಿಗೆ ಬಂದಿದೆ.
ಆರೋಪಿ ಮಾಳಿ ತನಗಾಗಿ ೫ ಲಕ್ಷ ರೂ ಸಾಲ ಪಡೆದಿದ್ದ ಮತ್ತು ತನ್ನ ಸ್ನೇಹಿತರಿಗೆ ನೀಡಿದ ಲಕ್ಷಾಂತರ ರೂ ಸಾಲಕ್ಕೆ ಜಾಮೀನು ನೀಡಿದ್ದಾನೆ ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ.ಈ ನಡುವೆ ಹಂತಕರು ಕೃತ್ಯದ ಮುನ್ನ ಬಳಿಕ ಯಾರಿಗೆಲ್ಲಾ ಮೊಬೈಲ್ ಕರೆ ಮಾಡಿದ್ದಾರೆ ಎನ್ನುವ ಮಾಹಿತಿಯನ್ನು ಪಡೆದು ನೋಟೀಸ್ ಜಾರಿಗೊಳಿಸಿದ್ದಾರೆ.
ಮಾಳಿಯು ಜೈನ ಮುನಿಗಳಿಂದ ಹಣವನ್ನು ಸಂಗ್ರಹಿಸಿ ಅದನ್ನು ಆತನ ಸ್ನೇಹಿತರಿಗೆ ನೀಡಿರಲಿಲ್ಲ ಎಂಬ ಅನುಮಾನ ವ್ಯಕ್ತವಾಗಿದೆ. ಕಳೆದ ಕೆಲವು ವಾರಗಳಿಂದ ಹಣವನ್ನು ಹಿಂದಿರುಗಿಸುವಂತೆ ಮುನಿಗಳು ತೀವ್ರ ಒತ್ತಡ ಹೇರುತ್ತಿದ್ದರು. ತಮ್ಮ ಬಳಿ ಅಷ್ಟೊಂದು ಹಣ ಇಲ್ಲದ ಕಾರಣ ಜೈನ ಮುನಿಗಳನ್ನು ಕೊಲೆ ಮಾಡಲು ನಿರ್ಧರಿಸಿದರು’ ಎಂದು ಮುಖ್ಯ ತನಿಖಾಧಿಕಾರಿ ತಿಳಿಸಿದ್ದಾರೆ.ಜೈನ ಮುನಿಯನ್ನು ಕೊಲ್ಲುವ ಮೊದಲು, ಮಾಳಿ ತನ್ನ ಸ್ನೇಹಿತರಿಗೆ ನೀಡಿದ ಹಣದ ಸಾಕ್ಷ್ಯ ನಾಶಮಾಡಲು ಅವರ ಡೈರಿಯನ್ನು ಸುಟ್ಟುಹಾಕಿದನು.’ನಾವು ಕೊಲೆಯ ಹಿಂದಿನ ಇತರ ಕೋನಗಳ ಬಗ್ಗೆಯೂ ತನಿಖೆ ನಡೆಸಲು ಪ್ರಯತ್ನಿಸಿದ್ದೇವೆ. ಆದರೆ, ಆರೋಪಿಯು ಹಣ ಹಿಂತಿರುಗಿಸುವಂತೆ ಮುನಿಗಳಿಂದ ಒತ್ತಡ ಹೆಚ್ಚಾದ ಹಿನ್ನೆಲೆಯಲ್ಲಿ ಅವರನ್ನು ಕೊಲ್ಲಲು ನಿರ್ಧರಿಸಿದ್ದರು’ ಎಂದು ಎಸ್ ಪಿ ಸಂಜೀವ್ ಪಾಟೀಲ ತಿಳಿಸಿದ್ದಾರೆ.
ಈ ನಡುವೆ ಆರೋಪಿಗಳು ಕೊಲೆ ಮಾಡಿದ ಬಳಿಕ ಮುನಿಗಳ ಶವವನ್ನು ತೆಗೆದುಕೊಂಡು ಹೋಗಿದ್ದ ಮೋಟಾರ್ ಬೈಕ್ ಅನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಮಾಳಿ ಮತ್ತು ಪ್ರಕರಣದ ಎರಡನೇ ಆರೋಪಿಯಾಗಿರುವ ಹಸನ್‌ಸಾಬ್ ಢಾಲಾಯತ್ ಅವರು ಕಟಕಭಾವಿ ಗ್ರಾಮಕ್ಕೆ ಕೊಂಡೊಯ್ದು, ಶವವನ್ನು ಹಲವಾರು ತುಂಡುಗಳಾಗಿ ಕತ್ತರಿಸಿ ನಂತರ ಬಾವಿಗೆ ಎಸೆದಿದ್ದರು.
ಹಲವರಿಗೆ ನೋಟೀಸ್:
ಜೈನಮುನಿ ಕೊಲೆ ಪ್ರಕರಣದ ತನಿಖೆಯನ್ನು ನಾನಾ ಕೋನಗಳಲ್ಲಿ ಮುಂದುವರಿಸಿರುವ ಪೊಲೀಸರು ಕೊಲೆಯ ಹಿಂದೆ ಮತ್ತು ಮುಂದೆ ಹಂತಕರು ಯಾರಿಗೆಲ್ಲ ಕರೆ ಮಾಡಿದ್ದಾರೆ ಎಂಬ ಅಂಶವನ್ನಿಟ್ಟುಕೊಂಡು ತನಿಖೆ ಮುಂದುವರಿಸಿದ್ದಾರೆ. ಹೀಗಾಗಿ ಹಂತಕರ ಫೋನ್ ಸಂಪರ್ಕದಲ್ಲಿ ಇದ್ದವರಿಗೆ ಡವಡವ ಶುರುವಾಗಿದೆ.
ಘಟನೆಗೂ ಮುನ್ನ, ಬಳಿಕ ಹಂತಕರಿಗೆ ಮೊಬೈಲ್ ಕರೆ ಮಾಡಿದವರಿಗೆ ವಿಚಾರಣೆಗೆ ಹಾಜರಾಗುವಂತೆ ಚಿಕ್ಕೋಡಿ ಪೋಲೀಸರು ನೋಟೀಸ್ ನೀಡುತ್ತಿದ್ದಾರೆ. ಕೊಲೆ ಘಟನೆಗೂ ಒಂದು ವಾರ ಮುನ್ನ ಯಾರೆಲ್ಲ ಕರೆ ಮಾಡಿದ್ದರು ಎಂಬ ಮಾಹಿತಿ ಕಲೆ ಹಾಕಿರುವ ಪೊಲೀಸರು ಘಟನೆ ಬಳಿಕ ಹಂತಕರ ಸಂಪರ್ಕದಲ್ಲಿ ಇದ್ದವರ ಮಾಹಿತಿಯೂ ಸಂಗ್ರಹಿಸುತ್ತಿದ್ದಾರೆ.
ಮೊಬೈಲ್ ಜಪ್ತಿ:
ಕಾಮಕುಮಾರ ನಂದಿ ಮಹಾರಾಜರ ಎರಡು ಮೊಬೈಲ್, ಆರೋಪಿಗಳ ತಲಾ ಒಂದು ಮೊಬೈಲ್ ಜಪ್ತಿ ಮಾಡಿರುವ ಪೊಲೀಸರು ಜೈನಮುನಿಗಳ ನಿಕಟ ಸಂಪರ್ಕದಲ್ಲಿ ಇದ್ದವರು ಯಾರು? ಹಂತಕರೊಂದಿಗೆ ಸಂಪರ್ಕದಲ್ಲಿ ಇದ್ದವರು ಯಾರು ಎಂಬ ಎಲ್ಲಾ ಮಾಹಿತಿ ಕಲೆ ಹಾಕಿದ್ದಾರೆ.
ಕೊಲೆಗೂ ಮುನ್ನ ಜೈನಮುನಿಗಳು ಯಾರನ್ನು ಸಂಪರ್ಕಿಸಿದ್ದರು ಎಂಬ ಅಂಶದ ಮೇಲೂ ತನಿಖೆ ಸಾಗುತ್ತಿದೆ. ಜೈನಮುನಿಗಳ ಸಂಪರ್ಕಿಸಿದವರ ಮಾಹಿತಿಯನ್ನೂ ಸಹ ಕಲೆ ಹಾಕಿ ವಿಚಾರಣೆ ನಡೆಸಲು ನಿರ್ಧಾರ ಮಾಡಲಾಗಿದೆ. ಸದ್ಯಕ್ಕೆ ಟೆಕ್ನಿಕಲ್ ಎವಿಡೆನ್ಸ್ ಆಧಾರದಲ್ಲಿ ತನಿಖೆ ಚುರುಕುಗೊಂಡಿದೆ.
ಸಚಿವರು ಭೇಟಿ ಭರವಸೆ:
ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಹಿರೇಕೋಡಿಯಲ್ಲಿರುವ ಕಾಮಕುಮಾರ ನಂದಿ ಮಹಾರಾಜರ ಆಶ್ರಮಕ್ಕೆ ಭೇಟಿ ನೀಡಿ, ಹಂತಕರಿಗೆ ಕಠಿಣ ಶಿಕ್ಷೆ ವಿಧಿಸಲು ಸರ್ಕಾರ ಕ್ರಮ ಕೈಗೊಳ್ಳುತ್ತಿದೆ ಎಂದು ಜೈನ ಸಮುದಾಯ ಹಾಗೂ ಆಶ್ರಮದ ಭಕ್ತರಿಗೆ ಭರವಸೆ ನೀಡಿದರು. ಪೊಲೀಸರು ಕ್ಷಿಪ್ರ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ. ರಾಜ್ಯ ಪೊಲೀಸರು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದು, ಸಿಬಿಐ ತನಿಖೆಯ ಅಗತ್ಯವಿಲ್ಲ ಎಂದು ಅವರು ಹೇಳಿದರು.