ಜೈನಮುನಿಗಳ ರಕ್ಷಣೆಗೆ ಶ್ರೀಗುಣಧರನಂದಿ ಮಹಾರಾಜ ಆಗ್ರಹ

ಹುಬ್ಬಳ್ಳಿ,ಜು8: ರಾಜ್ಯದಲ್ಲಿ ಜೈನ ಮುನಿಗಳಿಗೆ ರಕ್ಷಣೆ ನೀಡುವವರೆಗೆ ತಾವು ಹನಿ ನೀರು ಮುಟ್ಟದೇ ಆಮರಣ ಉಪವಾಸ ಕೈಕೊಳ್ಳುವುದಾಗಿ ವರೂರಿನ ಜೈನಮುನಿ ಶ್ರೀ ಗುಣಧರನಂದಿ ಮಹಾರಾಜ ಸ್ವಾಮಿಜಿ ಹೇಳಿದರು.
ಬೆಳಗಾವಿ ಜಿಲ್ಲೆ ಚಿಕ್ಕೋಡಿ ತಾಲೂಕಿನ ಹಿರೇಕೋಡಿಯ ನಂದಿಪರ್ವತ ಜೈನ ಮುನಿ ಆಚಾರ್ಯ ಶ್ರೀ ಕಾಮಕುಮಾರ ನಂದಿ ಮಹಾರಾಜರ ಹತ್ಯೆ ಕುರಿತಂತೆ ಇಂದು ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡುತ್ತ ಮೇಲಿನಂತೆ ನುಡಿದರು.
ಜೈನ ಮುನಿಗಳಿಗೆ, ಜೈನಬಸ್ತಿಗಳಿಗೆ, ಜೈನ ಸಮಾಜಕ್ಕೆ ರಕ್ಷಣೆ ನೀಡುವ ಲಿಖಿತ ಭರವಸೆ ನೀಡುವವರೆಗೂ ತಾವು `ಸಲ್ಲೇಖನ’ ವೃತ ಕೈಕೊಳ್ಳುವುದಾಗಿ ತಿಳಿಸಿದರು.
ಜಿಯೋ, ಜೀನೇದೋ, ಎಂಬ ಭಗವಾನ್ ಮಹಾವೀರ ತತ್ವ ಪರಿಪಾಲನೆಯ ಜೈನಧರ್ಮದ ಮುನಿಗಳ ಈ ಹತ್ಯೆ ಘೋರವಾಗಿದ್ದು, ಘಟನೆ ನಡೆದು 24 ಗಂಟೆಗಳಾದರೂ ಮುಖ್ಯಮಂತ್ರಿಗಳು ಇದಕ್ಕೆ ಸಂವೇದಿಸಿಲ್ಲ ಎಂದು ಅವರು ನುಡಿದರು.
ನಮ್ಮ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕ ಮೇಲೆ ಇಂಥ ಬರ್ಬರ ಕೃತ್ಯ ನಡೆದಿರಲಿಲ್ಲ. ಅಹಿಂಸೆಯನ್ನು ಪ್ರತಿಪಾದಿಸುವವರಿಗೆ ಈ ರೀತಿ ಆಗುತ್ತದೆ ಅಂದುಕೊಂಡಿರಲಿಲ್ಲ ಎಂದು ಶ್ರೀಗಳು ಗದ್ಗದಿತರಾಗಿ ನುಡಿದರು.