ಜೈದುಲ್ಲಾದ “ವಿರಾಫಿನ್’ ಲಸಿಕೆಗೆ ಡಿಜಿಸಿಐ ಅನುಮತಿ

ನವದೆಹಲಿ, ಏ.23- ದೇಶದಲ್ಲಿ ಕೊರೋನಾ‌ ಸೋಂಕು ನಿತ್ಯ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಎಲ್ಲರಿಗೂ ಲಸಿಕೆ ನೀಡುವ ಉದ್ದೇಶದಿಂದ ದೇಶದಲ್ಲಿ ಮತ್ತೊಂದು ಕೊರೋನಾ ಲಸಿಕೆ “ವಿರಾಫಿನ್ ” ಬಳಕೆಗೆ ಅನುಮತಿ ನೀಡಲಾಗಿದೆ.

ಜೈದುಲ್ಲಾ ಕ್ಯಾಡಿಲಾದ ” ವಿರಾಫಿನ್” ಲಸಿಕೆಯನ್ನು ತುರ್ತು ಬಳಕೆ ಮಾಡಲು ಭಾರತೀಯ ಔಷಧ ಮಹಾನಿಯಂತ್ರಕ- ಡಿಜಿಸಿಐ ಅನುಮತಿ ನೀಡಿದೆ.

ಈ ಮೂಲಕ ದೇಶದಲ್ಲಿ ಸದ್ಯ ಕೊರೋನೋ ಸೋಂಕಿಗೆ ಚಿಕಿತ್ಸೆ ನೀಡುವ 4 ನೇ ಲಸಿಕೆಗೆ ಅನುಮತಿ ನೀಡಿದಂತಾಗಿದೆ.

ಇತ್ತೀಚೆಗಷ್ಟೇ ಡಿಜಿಸಿಐ ರಷ್ಯಾದ ಸ್ಪುಟ್ನಿಕ್- ವಿ ಲಸಿಕೆ ತುರ್ತು ಬಳಕೆಗೆ ಅನುಮತಿ ನೀಡಿತ್ತು.ಇದೀಗ ಜೈದುಲ್ಲಾ ಕ್ಯಾಡೀಲ್ಲಾ ಸಂಸ್ಥೆ ಅಭಿವೃದ್ಧಿ ಪಡಿಸಿರುವ ಲಸಿಕೆ ” ವಿರಾಫಿನ್” ಗೆ ಅನುಮತಿ ನೀಡಲಾಗಿದೆ.

ವಿರಾಫಿನ್ ಲಸಿಕೆಯನ್ನು ಯುವ ಜನರಲ್ಲಿ ಕಡಿಮೆ ಸೋಂಕು ಇರುವ ಮಂದಿಗೆ ಚಿಕಿತ್ಸೆ ನೀಡುವ ಉದ್ದೇಶದಿಂದ ಅನುಮತಿ ದೊರೆತಿದೆ.

ದೇಶದಲ್ಲಿ ಈಗಾಗಲೇ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ ಮತ್ತು ಹೈದರಾಬಾದ್ ಮೂಲದ ಭಾರತ್ ಭಯೋಟೆಕ್ ಸಂಸ್ಥೆ ಜಂಟಿಯಾಗಿ ಅಭಿವೃದ್ಧಿಪಡಿಸಿರುವ ” ಕೋವಾಕ್ಸಿನ್‌” ಹಾಗು ಇಂಗ್ಲೆಂಡ್ ಆಕ್ಸ್‌ಫರ್ಡ್ ವಿಶ್ವವಿದ್ಯಾಲಯ ಮತ್ತು ಆಸ್ಟ್ರಾಝೆನೆಕಾ ಸಂಸ್ಥೆ ಅಭಿವೃದ್ಧಿ ಪಡಿಸಿರುವ ಲಸಿಕೆ ” ಕೋವಿಶೀಲ್ಡ್” ನೀಡಲಾಗುತ್ತಿದೆ.