ಜೇವರ್ಗಿ ಸರ್ಕಾರಿ ಪಿಯು ಕಾಲೇಜಿನಲ್ಲಿ ವನಮಹೋತ್ಸವ

ಕಲಬುರಗಿ:ಆ.12: ಜೇವರ್ಗಿ ಪಟ್ಟಣದ ಬಸವೇಶ್ವರ ವೃತ್ತದ ಸಮೀಪವಿರುವ ಸರ್ಕಾರಿ ಪಿಯು ಕಾಲೇಜಿನ ಎನ್.ಎಸ್.ಎಸ್ ಘಟಕದ ವತಿಯಿಂದ ಶನಿವಾರ ಕಾಲೇಜು, ಪ್ರೌಢಶಾಲೆ, ಮೌಲಾನಾ ಆಜಾದ್ ಪ್ರೌಢಶಾಲೆ ಮತ್ತು ಕನ್ಯಾ ಪ್ರೌಢಶಾಲೆಯ ಆವರಣದಲ್ಲಿ ಸಾಕಷ್ಟು ಗಿಡಗಳನ್ನು ನೆಡುವುದುರ ಮೂಲಕ ವನಮಹೋತ್ಸವ ಆಚರಿಸಲಾಯಿತು.
ಚಾಲನೆ ನೀಡಿ ಮಾತನಾಡಿದ ಪ್ರಾಚಾರ್ಯ ಮಹಮ್ಮದ್ ಅಲ್ಲಾಉದ್ದೀನ್ ಸಾಗರ, ನಮ್ಮ ಭಾಗದಲ್ಲಿ ಭೂಮಿಯ ಉಷಾಂಶ ಪ್ರಮಾಣ ಹೆಚ್ಚಾಗಿರುವುದುರಿಂದ ಭೂಮಿಯಲ್ಲಿನ ತೇವಾಂಶ ಪ್ರಮಾಣ ಕಡಿಮೆಯಿದೆ. ಆದ್ದರಿಂದ ಗಿಡ-ಮರಗಳು ನೀರಿನ ಕೊರತೆಯಿಂದ ಒಣಗುವ ಸಂಭವವಿರುವದರಿಂದ ಗಿಡಗಳನ್ನು ನೆಡುವುದರ ಜೊತೆಗೆ ಆಗಾಗ್ಗೆ ಅವುಗಳಿಗೆ ನೀರುಣಿಸುವ ಮೂಲಕ ಸಂರಕ್ಷಿಸಬೇಕಾಗಿದೆ ಎಂದು ಹೇಳಿದರು.
ಎನ್.ಎಸ್.ಎಸ್ ಅಧಿಕಾರಿ ಎಚ್.ಬಿ.ಪಾಟೀಲ ಮಾತನಾಡಿ, ಅರಣ್ಯಗಳ ಪ್ರಮಾಣ ಕಡಿಮೆಯಾಗಿ ಸೂಕ್ತ ಕಾಲಕ್ಕೆ ಮಳೆ-ಬೆಳೆಯಾಗದೆ ಪರಿಸರದಲ್ಲಿ ಏರು-ಪೇರುಗಳಾಗಿ ನೈಸರ್ಗಿಕ ಅವಘಡಗಳಾಗುತ್ತಿವೆ. ಪ್ರತಿಯೊಂದು ಜೀವರಾಶಿ ಉಳಿಯಬೇಕಾದರೆ ಪರಿಸರದ ಸಂರಕ್ಷಣೆ ಅಗತ್ಯ. ಅಭಿವೃದ್ಧಿ ಹೊಂದಿದ ರಾಷ್ಟ್ರಗಳಲ್ಲಿ ಅರಣ್ಯಗಳ ಪ್ರಮಾಣ ಹೆಚ್ಚಾಗಿದೆ ಎಂದರೆ, ಅಭಿವೃದ್ಧಿ ಮತ್ತು ಅರಣ್ಯಗಳ ಪ್ರಮಾಣಕ್ಕೂ ನೇರವಾದ ಸಂಬಂಧವಿದೆ ಎಂದರ್ಥವಾಗಿದೆ. ಅರಣ್ಯಗಳಿಂದ ಸಾಕಷ್ಟು ಪ್ರಯೋಜನೆಗಳಿವೆ. ನಮ್ಮ ಜಿಲ್ಲೆಯಲ್ಲಿರುವ ಅರಣ್ಯದ ಪ್ರಮಾಣದ ಹೆಚ್ಚಾಗಬೇಕಾದರೆ, ಎಲ್ಲೆಡೆ ವ್ಯಾಪಕವಾಗಿ ಗಿಡ ನೆಟ್ಟು ಪೋಷಿಸುವ ಕಾರ್ಯವಾಗಬೇಕಾಗಿದೆ ಎಂದರು.
ಕಾಲೇಜಿನ ಉಪನ್ಯಾಸಕರಾದ ರವೀಂದ್ರಕುಮಾರ ಬಟಗೇರಿ, ನಯಿಮಾ ನಾಹಿದ್, ರೇಣುಕಾ ಚಿಕ್ಕಮೇಟಿ, ಜಮೀಲ್ ಅಹಮ್ಮದ್, ರಂಜಿತಾ ಠಾಕೂರ್, ಸಮೀನಾ ಬೇಗಂ, ನಾಗಮ್ಮ, ಸಾಹೇಬಗೌಡ ಪಾಟೀಲ, ಪ್ರ.ದ.ಸ ನೇಸರ ಎಂ.ಬೀಳಗಿಮಠ ಹಾಗೂ ಸ್ವಯಂ ಸೇವಕರು ಭಾಗವಹಿಸಿದ್ದರು.