ಜೇವರ್ಗಿ ಮತಕ್ಷೇತ್ರದಲ್ಲಿ ಹೈನುಗಾರಿಕೆ ಅಭಿವೃದ್ಧಿ ಡಾ. ಅಜಯ್ ಸಿಂಗ್ ಸಂಕಲ್ಪ

ಜೇವರ್ಗಿ,ಏ.2-ಜೇವರ್ಗಿ ಮತಕ್ಷೇತ್ರದಲ್ಲಿ ಮುಂಬರುವ ದಿನಗಳಲ್ಲಿ ಹೈನುಗಾರಿಕೆಗೆ ಹೆಚ್ಚಿನ ಒತ್ತು ನೀಡುವುದಾಗಿ ಶಾಸಕರು, ವಿಧಾನಸಭೆ ವಿರೋಧ ಪಕ್ಷದ ಮುಖ್ಯ ಸಚೇತಕರೂ ಆಗಿರುವ ಡಾ. ಅಜಯ್ ಸಿಂಗ್ ಹೇಳಿದ್ದಾರೆ.
ಕೋನ ಹಿಪ್ಪರಗಾದಲ್ಲಿನ ತಮ್ಮ 3 ನೇ ಗ್ರಾಮ ವಾಸ್ತವ್ಯದ ಸಂದರ್ಭದಲ್ಲಿ ಸ್ವಸಹಾಯ ಸಂಘಗಳ ಹೆಣ್ಣುಮಕ್ಕಳ ಸಮೂಹದೊಂದಿಗೆ ವಿಸ್ತೃತ ಚರ್ಚೆ ಮಾಡಿದ ಡಾ. ಅಜಯ್ ಸಿಂಗ್ ಹೈನುಗಾರಿಕೆ ಉಪ ಕಸುಬು, ಇದನ್ನು ಆದಾಯದ ಮೂಲವಾಗಿ ರೈತ ಮಹಿಳೆಯರು ಬಳಸಿಕೊಂಡಲ್ಲಿ ಸಂಸಾರಗಳಿಗೆ ಅನುಕೂಲವಾಗಲಿದೆ ಎಂಬ ಮಾಹಿತಿ ನೀಡಿದರು.
ಕೃಷಿ ಅನೇಕ ಬಾರಿ ಬೆಲೆ ಇಲ್ಲದೆ, ಬೆಳೆ ಬಾರದೆ ಹಾನಿ ಸಂಭವಿಸುತ್ತದೆ, ಆಗ ಹೈನುಗಾರಿಕೆ ಉಪ ಕಸುಬಾಗಿದ್ದು ಹಸು, ಎಮ್ಮೆ ಜೊತೆಗಿದ್ದಲ್ಲಿ ಹಾನಿಯ ಬಿಸಿ ಸ್ವಲ್ಪ ಮಟ್ಟಿಗೆ ಶಮನ ಮಾಡಬಹುದು ಎಂದು ಹೆಣ್ಣುಮಕ್ಕಳೊಂದಿಗಿನ ಸಂವಾದದಲ್ಲಿ ಅವರು ಒತ್ತಿ ಹೇಳಿದರು.
ಜೇವರ್ಗಿ ಮತಕ್ಷೇತ್ರದಲ್ಲಿ ಬರುವ ಜೇವರ್ಗಿ ಹಾಗೂ ಯಡ್ರಾಮಿ ತಾಲೂಕಿನಲ್ಲಿ ಬರುವ ದಿನಗಳಲ್ಲಿ ಹೈನುಗಾರಿಕೆಗೆ ಪ್ರೋತ್ಸಾಹ ನೀಡುವ ದಿಶೆಯಲ್ಲಿ ತಾವು ಕಾರ್ಯಪ್ರವೃತ್ತರಾಗೋದಾಗಿ ಸಂಕಲ್ಪ ಮಾಡಿದ ಅವರು ಭೀಮಾನದಿ ತೀರವಿರೋದರಿಂದ ರೈತರು ಕೃಷಿಯೊಂದಿಗೆ ಹೈನುಗಾರಿಕೆಗೂ ಒತ್ತು ನೀಡಿದರೆ ಆದಾಯ ಹೆಚ್ಚಿಗೆ ಪಡೆಯಬಹುದು ಎಂದರು.
ಭೀಮಾನದಿ ಇಲ್ಲಿದೆ, ಜೊತೆಗೇ ಜೇವರ್ಗಿ ಶಾಖಾ ಕಾಲುವೆಯೂ ಇಲ್ಲಿದೆ. ಕೃಷ್ಣೆಯ ನೀರು ಇಲ್ಲಿಗೆ ಹರಿದು ಬಂದಿದ್ದರಿಂದ ಜೇವರ್ಗಿ ಸಮೃದ್ಧಿಯ ತಾಲೂಕು ಆಗಿದೆ. ಹೀಗಾಗಿ ಜೇವರ್ಗಿ ತಾಲೂಕು, ಯಡ್ರಾಮಿ ತಾಲೂಕುಗಳಲ್ಲಿ ನೀರಾವರಿ ಸೌಲಭ್ಯವಿದೆ. ಇದರಿಂದ ಹೈನುಗಾರಿಕೆಗೆ ಹೆಚ್ಚಿನ ಅನುಕೂಲವಿದೆ. ಕಲಬುರಗಿ ಹಾಲು ಒಕ್ಕೂಟದವರ ನೆರವು ಪಡೆದು ಬರುವ ದಿನಗಳಲ್ಲಿ ಹಳ್ಳಿಗಳಲ್ಲಿ ಹೆಣ್ಣುಮಕ್ಕಳೇ ಹೆಚ್ಚಿನ ಸಂಖ್ಯೆಯಲ್ಲಿ ಹಾಲು ಉತ್ಪಾದನೆಯಲ್ಲಿ ತೊಡಗುವಂತಾಗಲು ತಾವು ವ್ಯವಸ್ಥೆ ಮಾಡೋದಾಗಿ ಹೇಳಿದರು.
ಗ್ರಾಮ ವಾಸ್ತವ್ಯದಲ್ಲಿ ಡಾ. ಅಜಯ್ ಸಿಂಗ್ ಜೊತೆ ಅತಿಥಿಯಾಗಿ ಉಪಸ್ಥಿತರಿದ್ದ ಕಲಬುರಗಿ ಹಾಲು ಒಕ್ಕೂಟದ ನಿರ್ದೇಶಕ ಈರಣ್ಣ ಝಳಕಿ ಹೆಣ್ಣುಮಕ್ಕಳು ಹೈನುಗಾರಿಕೆಗೆ ಬಂದಲ್ಲಿ ಒಕ್ಕೂಟದಲ್ಲಿ ಅನೇಕ ಯೋಜನೆಗಳಿದ್ದು ಅವುಗಳಿಂದ ನೆರವು ನೀಡಬಹುದಾಗಿದೆ. ಮೊದಲು ಹಾಲು ಉತ್ಪಾದಕರ ಸ್ವಸಹಾಯ ಸಂಘ ಸ್ಥಾಪಿಸಿ ಹೈನುಗಾರಿಕೆಗೆ ಎಲ್ಲರು ತೊಡಗಿಸಿಕೊಂಡಲ್ಲಿ ಅದೇ ಆದಾಯದ ಮೂಲವಾಗುತ್ತದೆ ಎಂದರು. ಆಳಂದದಲ್ಲಿ 110 ಸಂಘಗಳಿವೆ, ಜೇವರ್ಗಿಯಲ್ಲಿ ಕೇವಲ 10 ಸಂಘಗಳಿದ್ದವು. ಅವೂ ಸಹ ಕೆಲಸ ಮಾಡುತ್ತಿಲ್ಲವೆಂದ ಅವರು ಬರುವ ದಿನಗಳಲ್ಲಿ ಹಾಲು ಒಕ್ಕೂಟ ಹೊಸ ಸಂಘ ಸ್ಥಾಪನೆಗೆ ಆಸಕ್ತಿ ಹೊಂದಿದ್ದರಿಂದ ಹಳ್ಳಿ ಹೆಣ್ಮಕ್ಕಳ ಸಹಕಾರ ಕೋರಿದರು.
ರೈತರಾದ ಆನಂದ, ಚಂದಪ್ಪ ಪೂಜಾರಿ, ಶರಣಬಸಪ್ಪ ಪೂಜಾರಿ, ಬಾಬೂರಾವ ಪೂಜಾರಿ, ಅಪ್ಪಾಸಾಹೇಬ್ ಪೂಜಾರಿ ಮತ್ತವರ ಕುಟುಂಬದವರು , ಕೋನ ಹಿಪ್ಪರಗಾ ಊರಿನ ಮಹಿಳೆಯರು ಹಾಜರಿದ್ದು ಹೈನುಗಾರಿಕೆಯ ಮಾಹಿತಿ ಪಡೆದರು.