ಜೇವರ್ಗಿ ತಹಸಿಲ್ದಾರ್ ಅಮಾನತ್ತಿಗೆ ಆಂದೋಲಾ ಶ್ರೀ ಒತ್ತಾಯ

ಕಲಬುರಗಿ:ಮೇ.27: ನೆರೆ ಹಾವಳಿ ಬಂದಾಗ ಕುರಿ ಮರಿ ಹಿಡಿದು ರೀಲ್ಸ್ ಮಾಡಿ ಅಮಾನತ್ತು ಆಗಿದ್ದ, ಕೋವಿಡ್ ಸಂದರ್ಭದಲ್ಲಿ ನೆಲೋಗಿ ಪೋಲಿಸ್ ಠಾಣೆಯಲ್ಲಿ ಪಿಎಸ್‍ಐ ತಹಸಿಲ್ದಾರ್ ಮಲ್ಲಣ್ಣ ಯಲಗೋಡ್ ಅವರು ಹುಟ್ಟುಹಬ್ಬದಂದು ಅಭಿಮಾನಿಗಳಿಂದ ಹಾಲಿನ ಅಭಿಷೇಕ ಮಾಡಿಸಿಕೊಂಡು ಅಮಾನತ್ತು ಆಗಿದ್ದು, ಅಂತವರಿಗೆ ಶಾಸಕ ಡಾ. ಅಜಯಸಿಂಗ್ ಅವರು ಅದು ಹೇಗೆ ತಹಸಿಲ್ದಾರ್ ಆಗಿ ಕೂಡಿಸಿದ್ದಾರೆಯೋ ಗೊತ್ತಿಲ್ಲ. ಆದಾಗ್ಯೂ, ತಹಸಿಲ್ದಾರರು ಜೇವರ್ಗಿ ತಾಲ್ಲೂಕಿನಲ್ಲಿ ಅಕ್ರಮ ಮುರುಮ್ ಸಾಗಣೆ ತಡೆಯುವಲ್ಲಿ ವಿಫಲವಾಗಿದ್ದು, ಕೂಡಲೇ ಅವರನ್ನು ಅಮಾನತ್ತು ಇಲ್ಲವೇ ಸೇವೆಯಿಂದ ವಜಾಗೊಳಿಸಬೇಕು. ಇಲ್ಲದೇ ಹೋದಲ್ಲಿ ಕಾನೂನು ಹೋರಾಟ ಮಾಡಲಾಗುವುದು ಎಂದು ಶ್ರೀರಾಮ್ ಸೇನೆಯ ರಾಜ್ಯಾಧ್ಯಕ್ಷ ಸಿದ್ದಲಿಂಗ್ ಮಹಾಸ್ವಾಮೀಜಿ ಅವರು ಎಚ್ಚರಿಸಿದರು.
ನಗರದ ಪತ್ರಿಕಾ ಭವನದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜೇವರ್ಗಿ ತಾಲ್ಲೂಕಿನ ಹಾಲಗಡ್ಲಾ ಗ್ರಾಮದ ಸರ್ವೆ ನಂಬರ್ 60 ಮತ್ತು ಅವರಾದ್ ಸರ್ವೆ ನಂಬರ್ 226ರ ಸರ್ಕಾರಿ ಜಮೀನಿನಲ್ಲಿಯೇ ಅಕ್ರಮ ಮುರುಮ್ ಸಾಗಾಣಿಕೆ ಮಾಡುತ್ತಿದ್ದು, ಹಲವಾರು ಬಾರಿ ವಿಎಓ ಹಾಗೂ ಆರ್‍ಓ ಅವರಿಗೆ ಹಾಗೂ ತಹಸಿಲ್ದಾರ್ ಗಮನಕ್ಕೆ ತಂದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದರು.
ಸರ್ಕಾರಿ ಜಮೀನು ಪೂರ್ಣವಾಗಿ ಅಗೆದು ಹಾಳು ಮಾಡುತ್ತಿದ್ದಾರೆ. ಆದಾಗ್ಯೂ, ಏನೂ ನಡೆದೆಯೇ ಇಲ್ಲ ಎನ್ನುವಂತೆ ಅಧಿಕಾರಿಗಳು ವರ್ತಸುತ್ತಿದ್ದಾರೆ. ಅಕ್ರಮ ಸಾಗಾಣಿಕೆ ಕುರಿತು ಹಲವು ಬಾರಿ ಕಾಟಾಚಾರಕ್ಕೆ ತಹಸಿಲ್ ಕಚೇರಿಗೆ ವರದಿ ಸಲ್ಲಿಸಿ ಕೈ ತೊಳೆದುಕೊಂಡಿದ್ದಾರೆಯೇ ಹೊರತು ಯಾವುದೇ ಕ್ರಮ ಜರುಗಿಸಿಲ್ಲ ಎಂದು ಅವರು ದೂರಿದರು.
ನಿರಂತರ ಹೋರಾಟದ ಫಲವಾಗಿ ಜೇವರ್ಗಿ ತಾಲ್ಲೂಕಿನಲ್ಲಿ ಈಗ ಒಂದು ಮರಳು ತೆಗೆಯೋಕೆ ಆಗುತ್ತಿಲ್ಲ. ಮರಳು ದಂಧೆಕೋರರು ಹಿಡಿಶಾಪವನ್ನು ನಮ್ಮ ಮೇಲೆ ಹಾಕುತ್ತಿದ್ದಾರೆ. ಆದಾಗ್ಯೂ, ಕಳೆದ ಆರೇಳು ತಿಂಗಳಿನಿಂದ ಉತ್ತಮ ಗುಣಮಟ್ಟದ ಮುರುಮ್ ಜೇವರ್ಗಿ ತಾಲ್ಲೂಕಿನ ಹಾಲಗಡ್ಲಾ ಗ್ರಾಮ ಮತ್ತು ಶಖಾಪುರ- ಅವರಾದ್ ಮಧ್ಯದಲ್ಲಿ ಇರುವಂತಹ ಗುಡ್ಡದಲ್ಲಿ ನಿರಂತರವಾಗಿ ಅಕ್ರಮ ಮುರುಮ್ ಸಾಗಿಸುತ್ತಿದ್ದಾರೆ. ದುರಂತ ಎಂದರೆ ಪಟ್ಟಾ ಜಮೀನಿನಲ್ಲಿಯೂ ಸಹ ಪರವಾನಿಗೆ ತೆಗೆದುಕೊಳ್ಳದೇ ಲೂಟಿಯಾಗಿದೆ. ಅದರ ವಿರುದ್ಧ ಹರವಾಳ್ ಗ್ರಾಮದಲ್ಲಿ ಲೂಟಿ ಮಾಡಿದ್ದ ವಿಷಯವನ್ನು ಗಣಿ ಇಲಾಖೆ ಅಧಿಕಾರಿಗಳಿಗೆ ತಿಳಿಸಿದ್ದರಿಂದ 8.50 ಲಕ್ಷ ರೂ.ಗಳ ದಂಡ ಬಿದ್ದಿದೆ ಎಂದು ಅವರು ಹೇಳಿದರು.
ಹೊಲದ ಮಾಲಿಕನಿಗೆ, ಲೂಟಿ ಮಾಡಿದವರು ಗುತ್ತಿಗೆದಾರರು. ಚಾಣಾಕ್ಷತೆ ಎಷ್ಟು ಎಂದರೆ ಪರವಾನಿಗೆ ಪಡೆದುಕೊಂಡು ರಾಯಲ್ಟಿ ವಂಚಿಸಿ ಅಧಿಕಾರಿಗಳಿಗೆ ಪರವಾನಿಗೆ ಪತ್ರದ ಹೆಸರಿನಲ್ಲಿ ಲೂಟಿ ಮಾಡಿದ್ದರಿಂದ 8ವರೆ ಲಕ್ಷ ರೂ.ಗಳ ದಂಡ ಬಿದ್ದಿದೆ. ಈ ಕುರಿತು ಜೇವರ್ಗಿ ತಾಲ್ಲೂಕಿನ ಸರ್ಕಾರಿ ಜಮೀನು, ಇದು ಪಟ್ಟಾ ಜಮೀನು ಅಲ್ಲ. ನೂರಾರು ಎಕರೆ ಜಮೀನಿನಲ್ಲಿ ದೊಡ್ಡ, ದೊಡ್ಡ ಹಿಟಾಚೆ ಹಾಗೂ 20ಕ್ಕೂ ಹೆಚ್ಚು ಟಿಪ್ಪರ್ ಬಳಸಿ ಲೂಟಿ ಮಾಡುತ್ತಿದ್ದಾರೆ. ತಹಸಿಲ್ದಾರ್ ದೊಡ್ಡ ಖಳನಾಯಕ. ಎಲ್ಲರಿಗೂ ಅಭಯವನ್ನು ಕೊಟ್ಟು ಇಂತಿಷ್ಟು ಹಣವನ್ನು ಪಡೆದು ಲೂಟಿಗೆ ಸಹಕಾರ ನೀಡುತ್ತಿದ್ದಾರೆ ಎಂದು ಅವರು ಗಂಭೀರ ಆರೋಪ ಮಾಡಿದರು.
ದೂರುಗಳನ್ನು ಕೊಟ್ಟ ಮೇಲೆ ಆರ್‍ಐ ವರದಿ ಸಲ್ಲಿಸಿದ್ದಾರೆ. ತಾಲ್ಲೂಕು ದಂಡಾಧಿಕಾರಿ ಸ್ಥಳಕ್ಕೆ ಭೇಟಿ ಕೊಡದೇ ಕಾನೂನು ಕ್ರಮ ಜರುಗಿಸದೇ ಕಣ್ಣಿಗೆ ಬಟ್ಟೆ ಕಟ್ಟಿಕೊಂಡು, ಜೇವರ್ಗಿಯಲ್ಲಿ ಆಡಳಿತ ಮಾಡುತ್ತಿದ್ದಾರೆ. ಪಟ್ಟಾ ಜಮೀನು ಆದರೆ ಗಣಿ ಅಧಿಕಾರಿಗಳಿಗೆ ತಿಳಿಸುತ್ತಿದ್ದೆವು. ಅವರಿಗೆ ಅವಕಾಶ ಇಲ್ಲ. ತಹಸಿಲ್ದಾರ್ ಭೇಟಿ ಮಾಡಬೇಕು. ಅದನ್ನು ಮಾಡದೇ ಲೂಟಿಕೋರರಿಗೆ ಬೆಂಬಲ ಕೊಟ್ಟು ಸಹಾಯ ಮಾಡುತ್ತಿದ್ದಾರೆ ಎಂದು ಅವರು ಆಕ್ರೋಶ ಹೊರಹಾಕಿದರು.
ತಹಸಿಲ್ದಾರ್ ಹಿನ್ನೆಲೆ ನೋಡಬೇಕು. ಸುಮಾರು ವರ್ಷಗಳ ಹಿಂದೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಆಗಿದ್ದಾರೆ. ಆನಂತರ ಬಡ್ತಿ ಹೊಂದಿ ಪಿಎಸ್‍ಐ ಪರೀಕ್ಷೆ ಬರೆದು ನೆಲೋಗಿ ಪೋಲಿಸ್ ಠಾಣೆಗೆ ಪಿಎಸ್‍ಐ ಆದರು. ಆ ಪಿಎಸ್‍ಐ ರೀಲ್ ಮಾಡುತ್ತಾರೆ. ಎರಡು ಕೈಗಳಲ್ಲಿ ಪಿಸ್ತೂಲ್‍ಗಳು, ಪಕ್ಕಕ್ಕೆ ಸಿಂಹವನ್ನು ಇಟ್ಟುಕೊಂಡು ಗುದ್ದುತ್ತಾರೆ. ಅಜಯಸಿಂಗ್ ಅವರಿಗೆ ಈ ಕುರಿತು ಜಾÐನವಿಲ್ಲವೇ? ಎಂದು ಪ್ರಶ್ನಿಸಿದ ಅವರು, ಕುರಿ ಮರಿಗಳನ್ನು ಹಿಡಿದು ಪ್ರವಾಹದಲ್ಲಿ ಪ್ರಚಾರಕ್ಕಾಗಿ ರೀಲ್ ಮಾಡಿದರು. ಕೋವಿಡ್ ಸಂದರ್ಭದಲ್ಲಿ ಪೋಲಿಸ್ ಠಾಣೆಯಲ್ಲಿ ಅಭಿಮಾನಿಗಳಿಂದ ಹಾಲಿನ ಅಭಿಷೇಕ ಮಾಡಿಕೊಂಡರು. ತಾಲ್ಲೂಕು ದಂಡಾಧಿಕಾರಿಯನ್ನಾಗಿ ಮಾಡಿದ್ದು ದುರಂತ ಎಂದು ಕಳವಳ ವ್ಯಕ್ತಪಡಿಸಿದರು.
ಪ್ರಕರಣವನ್ನು ಸಹಾಯಕ ಆಯುಕ್ತರಿಗೆ ದೂರು ಸಲ್ಲಿಸಿದ್ದೇವೆ. ಅವರೂ ಸಹ ಯಾವುದೇ ಕ್ರಮ ಕೈಗೊಂಡಿಲ್ಲ. ಉಸ್ತುವಾರಿ ಸಚಿವರು ಗಡಿಪಾರು ಮಾಡಲು ಹೇಳುತ್ತಾರೆ. ಅದರಲ್ಲಿಯೇ ಅವರ ಸಮಯ ವ್ಯರ್ಥ ಮಾಡುತ್ತಾರೆ ಎಂಧು ಸಹಾಯಕ ಆಯುಕ್ತರ ವಿರುದ್ಧವೂ ಟೀಕೆ ಮಾಡಿದ ಅವರು, ರಾಷ್ಟ್ರೀಯ ಸಂಪತ್ತು ರಕ್ಷಿಸಲು ಜಿಲ್ಲಾಧಿಕಾರಿಗಳು, ಸಹಾಯಕ ಅಧಿಕಾರಿಗಳು ಸಂಪೂರ್ಣ ವಿಫಲವಾಗಿದ್ದಾರೆ. ತಹಸಿಲ್ದಾರ್ ಅಮಾನತ್ತು ಮಾಡಬೇಕು. ಸಣ್ಣ ಮನುಷ್ಯನಿಂದ ದೊಡ್ಡ ಮನುಷ್ಯನವರೆಗೆ ನಾಡಿ ಮಿಡಿತ ಅರಿತಿರುವ ತಹಸಿಲ್ದಾರರು ಯಥೇಚ್ಛವಾಗಿ ಇಂತಹ ಕೃತ್ಯ ಮಾಡುತ್ತಿದ್ದಾರೆ. ಅವರನ್ನು ಅಮಾನತ್ತುಗೊಳಿಸದೇ ಹೋದಲ್ಲಿ ನ್ಯಾಯಾಲಯದ ಮೊರೆ ಹೋಗಲಾಗುವುದು ಎಂದು ಎಚ್ಚರಿಸಿದರು.
ಏನೇ ಆರೋಪ ಮಾಡಿದರೂ ಉಸ್ತುವಾರಿ ಸಚಿವರು ದೂರು ಸಲ್ಲಿಸಲು ಹೇಳುತ್ತಾರೆ. ನಮ್ಮ ದೂರುಗಳು ಕಸದ ಪುಟ್ಟಿಗೆ ಹೋಗುತ್ತಿವೆ. ಅದಕ್ಕಾಗಿ ಉಸ್ತುವಾರಿ ಸಚಿವರಿಗೆ ಕೇಳುತ್ತೇವೆ. ಪೂರ್ವಾಗ್ರಹ ಪೀಡಿತರಾಗಿ ಮಾತನಾಡುತ್ತಿದ್ದಾರೆ. ಅವರಷ್ಟು ಕೀಳು ಮಟ್ಟಕ್ಕೆ ಹೋಗುವುದಿಲ್ಲ. ನಾನು ಮೈಮೇಲೆ ಎಣ್ಣೆ ಹಚ್ಚಿಕೊಂಡಿದ್ದೇನೆ ಎಂದು ಸಚಿವರೇ ಹೇಳುತ್ತಾರೆ. ಆ ಎಣ್ಣೆ ಆರಿ ಹೋಗುತ್ತದೆ. ಅವರು ಮೈಗೆ ಗ್ರೀಸ್ ಹಚ್ಚಿಕೊಂಡಿದ್ದಾರೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಅವರ ವಿರುದ್ಧ ಮತ್ತೆ ಕಿಡಿಕಾರಿದರು.
ಸಚಿವ ಎಂ.ಬಿ. ಪಾಟೀಲ್ ಅವರಿಗೆ ನಾನೇ ಮಾತನಾಡಿದ್ದೇನೆ ಎಂದು ಅವರು ಹೇಳುತ್ತಾರೆ. ನಾವು ನಮ್ಮ ಶಾಸಕರಿಗೆ ಮಾತನಾಡುವುದಿಲ್ಲ ಎಂದು ಆಕ್ರೋಶ ಹೊರಹಾಕಿದ ಅವರು, ಸಚಿವ ಖರ್ಗೆಯವರು ನನಗೆ ಕಿಡಿ ಹಚ್ಚುವರು, ಬೆಂಕಿ ಹಚ್ಚುವುದು ಎಂದು ಹೇಳುತ್ತಾರೆ. ಎಲ್ಲಿ ಕಸ ಇರುತ್ತದೆಯೋ ಅಲ್ಲಿ ನಾವು ಬೆಂಕಿ ಹಚ್ಚುತ್ತೇವೆ. ಅಹಂಕಾರ, ದುರಹಂಕಾರಕ್ಕೆ ಬೆಂಕಿ ಹಚ್ಚುತ್ತೇವೆ. ಅದು ಒಳ್ಳೆಯದು. ನಮ್ಮ ಚಿಂತೆ ತೆಗೆದುಕೊಂಡು ಅವರೇನು ಮಾಡುತ್ತಾರೆ. ಊರು ಉಸಾಬರಿಗೆ ಮುಲ್ಲಾ ಸೊರಗಿದನಂತೆ. ನಾವು ಏಕೆ ಅವರನ್ನು ಕೇಳಿ ಹೋಗಬೇಕು. ನಾನು ಕಲಬುರ್ಗಿ ಜಿಲ್ಲೆ ಬಿಟ್ಟು ಹೋಗದಂತೆ ಆದೇಶವಾಗಿದೆ. ಇನ್ನೊಂದು ಆದೇಶ ಮಾಡಲಿ ಎಂದು ಅವರು ಸವಾಲು ಹಾಕಿದರು.
ಲಾಡಮುಗಳಿಯಲ್ಲಿ ಆತ್ಮಹತ್ಯೆ ನಾವು ಮಾಡಿದ್ದೇವೆಯೇ?, ಬೆತ್ತಲೆ ಮಾಡಿ ಅವಮಾನಿಸಿದ್ದು ನಾವೇ ಮಾಡಿದೆವೆಯಾ?, ಎಲ್ಲಿ ಕೋಮು ಗಲಭೆ ಆಗಿದೆ ಎಲ್ಲಿದೆ ಹೇಳಿ, 49, 39 ಪ್ರಕರಣಗಳು ನನ್ನ ಮೇಲೆ ಇವೆ ಎಂದು ಹೇಳುತ್ತಾರೆ. ಜವಾಬ್ದಾರಿಯಲ್ಲಿರುವ ಸಚಿವರು ಸರಿಯಾದ ಮಾಹಿತಿ ಪಡೆದುಕೊಂಡು ಪ್ರಜೆಗಳಿಗೆ ತಲುಪಿಸಬೇಕು. ಸರಿಯಾದ ಮಾಹಿತಿ ಇಲ್ಲ. ಜನರಿಗೆ ತಪ್ಪು ಸಂದೇಶ ಕೊಡುವುದು ಅಪರಾಧ. ಕೇವಲ ದೊಡ್ಡ ಸಭೆಯಲ್ಲಿ ಮಾಡಿದರೆ ಪ್ರಚೋದನೆ. ಸುದ್ದಿಗೋಷ್ಠಿಯಲ್ಲಿ ಪ್ರಚೋದನೆ ಮಾಡುವುದು ಕಾನೂನಿಗೆ ವಿರುದ್ಧವಾಗಿದೆ ಎಂದು ಅವರು ಆಕ್ರೋಶ ಹೊರಹಾಕಿದರು.
ಅಲ್ಲೂರ್ ಗ್ರಾಮದಲ್ಲಿ ಚರಂಡಿ ನೀರು ಮನೆಗಳಿಗೆ ಹೋಗಿದೆ. ಅಲ್ಲಿಗೆ ಕ್ಷೇತ್ರದ ಶಾಸಕರಾಗಿರುವ ಜಿಲ್ಲಾ ಉಸ್ತುವಾರಿ ಸಚಿವರು ಹೋಗಿಲ್ಲ. ಬಿಜೆಪಿಯವರಿಗೆ ಮನೆದೇವರು ಎನ್ನುತ್ತಾರೆ. ನನ್ನ ಹೆಸರು ತೆಗೆದುಕೊಳ್ಳದಿದ್ದರೆ ಅವರಿಗೆ ಸಮಾಧಾನ ಇಲ್ಲ ಎಂದು ಸಚಿವ ಖರ್ಗೆಯವರಿಗೆ ತೀವ್ರ ತರಾಟೆಗೆ ತೆಗೆದುಕೊಂಡ ಶ್ರೀಗಳು, ಒಬ್ಬ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯಿತಿರಾಜ್ ಖಾತೆಯ ಸಚಿವರಾಗಿ ಮಾದರಿ ಗ್ರಾಮಗಳನ್ನಾಗಿ ಮಾಡಿ ತೋರಿಸಿ, ಬಯಲು ಶೌಚ ಮುಕ್ತ ಮಾಡಿ ತೋರಿಸಿ ಎಂದರಲ್ಲದೇ ಅವರಿಗೆ ಬೈದೆ, ಇವರಿಗೆ ಬೈದೆ, ಒದ್ದು ಒಳಗೆ ಹಾಕಿ ಇದನ್ನೇ ಮಾಡುತ್ತಾರೆ. ಹತ್ತು ಗ್ರಾಮಗಳನ್ನು ಮಾದರಿಯನ್ನಾಗಿ ಮಾಡಿದ್ದೇನೆ. ಶುದ್ಧ ಕುಡಿಯುವ ನೀರು ಕೊಟ್ಟಿದ್ದೇನೆ ಎಂಬುದರ ಕುರಿತು ಹೇಳಲಿ. ಜಲಜೀವನ್ ಮಿಷನ್ ಕಾರ್ಯಕ್ರಮ ಪೂರ್ಣಗೊಂಡಿಲ್ಲ ಎಂದು ಸಚಿವರ ಕಾರ್ಯವೈಖರಿಯ ಕುರಿತು ಅಸಮಾಧಾನ ಹೊರಹಾಕಿದರು.
ಪ್ರಕರಣವೊಂದರಲ್ಲಿ ಪೋಲಿಸ್ ಠಾಣೆಗೆ ಹಾಜರಾಗಿ ತೊಟ್ಟಿಲು ಕಾರ್ಯಕ್ರಮಕ್ಕೆ ಹೋದೆ. ಅಲ್ಲಿ ಶಾಸಕ ಅಲ್ಲಮಪ್ರಭು ಪಾಟೀಲ್ ಇದ್ದರು. ಅವರನ್ನೇ ಕೇಳಿ. ನಮಗೆ ಧಕ್ಕೆ ತರಲು ಸಚಿವರು ನನ್ನ ವಿರುದ್ಧ ಆರೋಪ ಮಾಡುತ್ತಿದ್ದಾರೆ. ಪ್ರಶ್ನಾತೀತ ನಾಯಕರಾಗಲು ಹೊರಟಿದ್ದಾರೆ. ನಿಂದಿಸುವುದನ್ನು ಸಹ ತಾಳ್ಮೆಯಿಂದ ಕೇಳಬೇಕು. ಅವರ ಮಟ್ಟಕ್ಕೆ ಇಳಿದು ಮಾತನಾಡಲು ನನಗೆ ಆಗುವುದಿಲ್ಲ ಎಂದು ಅವರು ಹೇಳಿದರು.
ಅವಹೇಳನಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ಧರಾಮಯ್ಯ ಎಂದಿಲ್ಲ. ಆದಾಗ್ಯೂ, ಸಚಿವ ಖರ್ಗೆ ಅವರು ಆಂದೋಲಾ ಸ್ವಾಮಿ ಎಂದು ಅವರೇ ಮಾತನಾಡುತ್ತಾರೆ. ಈಗ ನಾನು ಹೇಳ್ತಿನಿ ಇಷ್ಟು ಸಣ್ಣ ಮಟ್ಟದಲ್ಲಿ ವಿಚಾರ ಮಾಡುತ್ತೀರಿ. ಮುಖ್ಯಮಂತ್ರಿ, ಗೃಹ ಸಚಿವರಿಗೆ ಟೀಕೆ ಸಾಮಾನ್ಯ. ಸಿದ್ಧರಾಮಯ್ಯ ಎಂದರೆ ಯಾರು ಎಂಬುದು ಬೇಕಲ್ಲ. ಮುಖ್ಯಮಂತ್ರಿಗಳ ಮೇಲೆ ಗೌರವ ಇದೆ. ಅವರು ಆ ರೀತಿ ಅಂದುಕೊಳ್ಳಬಾರದು ಎಂದು ಛೇಡಿಸಿದರು.