ಜೇವರ್ಗಿ: ಆಕ್ಸಿಜನ್ ಸಹಿತ 20 ಹಾಸಿಗೆ ಸಾಮರ್ಥ್ಯದ ಕೋವಿಡ್ ಕೇರ್ ಸೆಂಟರ್ ಗೆ ಚಾಲನೆ

ಕಲಬುರಗಿ,ಮೇ.14-ಕೊರೊನಾ ಎರಡನೇ ಅಲೆ ತೀವ್ರ ಆತಂಕ ಹುಟ್ಟು ಹಾಕಿರುವ ಈ ಸಂಧಿಗ್ಧ ಕಾಲದಲ್ಲಿ ಧರ್ಮಸಿಂಗ್ ಫೌಂಡೇಶನ್ ಜೇವರ್ಗಿಯಲ್ಲಿ ಆಕ್ಸೀಜನ್ ಸಹಿತ 20 ಬೆಡ್ ಗಳಿರುವ ಕೋವಿಡ್ ಕೇರ್ ಸೆಂಟರ್ ಆರಂಭಿಸುವ ಮೂಲಕ ಸೋಂಕಿತರತ್ತ ನೆರವಿನ ಹಸ್ತ ಚಾಚಿದೆ.
ಜಿಲ್ಲಾಡಳಿತದ ಸಹಯೋಗದಲ್ಲಿ ತಾಲೂಕು ಆಸ್ಪತ್ರೆಯಲ್ಲಿ ಆರಂಭಿಸಲಾಗಿರುವ ಈ ಕೇಂದ್ರವನ್ನು ವಿಧಾನಸಭೆ ವಿರೋಧ ಪಕ್ಷದ ಮುಖ್ಯ ಸಚೇತಕರು ಹಾಗೂ ಜೇವರ್ಗಿ ಶಾಸಕರಾಗಿರುವ ಡಾ. ಅಜಯ್ ಸಿಂಗ್ ಅವರು ಇಂದು ವಿದ್ಯುಕ್ತವಾಗಿ ಉದ್ಘಾಟಿಸಿದರು.
ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಡಾ.ಅಜಯಸಿಂಗ್ ಅವರು, ಜೇವರ್ಗಿಯಲ್ಲಿರುವ ಕೋವಿಡ್ ಸೋಂಕಿತ ಜನರ ಬವಣೆ ನೀಗಿಸಲು, ಅವರು ಎದುರಿಸುತ್ತಿರುವ ಆಕ್ಸೀಜನ್ ಬೆಡ್ ಕೊರತೆ ನೀಗಿಸಲು ಜಿಲ್ಲಾಡಳಿತದ ಸಹಯೋಗದಲ್ಲಿ ಧರಂಸಿಂಗ್ ಫೌಂಡೇಷನ್ ವತಿಯಿಂದ ಜೇವರ್ಗಿ ತಾಲೂಕಾಸ್ಪತ್ರೆಯಲ್ಲಿ 20 ಆಕ್ಸೀಜನ್ ಬೆಡ್ ಇರುವಂತಹ ಕೋವಿಡ್ ಕೇರ್ ಸೆಂಟರ್ ಆರಂಭಿಸಲಾಗಿದೆ. ಯಾವುದೇ ಕಾರಣಕ್ಕೂ ಇಲ್ಲಿ ಆಕ್ಸೀಜನ್, ಔಷಧಿಗಳ ಕೊರತೆ ಕಾಡದಂತೆ ನಿಗಾ ವಹಿಸಲಾಗುತ್ತದೆ. ಬರುವ ದಿನಗಳಲ್ಲಿ ಬೆಡ್ ಗಳ ಸಂಖ್ಯೆ ಇನ್ನೂ ಹೆಚ್ಚಿಸುವ ಚಿಂತನೆ ಇದೆ ಎಂದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಶರಣಬಸಪ್ಪ ಗಣಜಲಖೇಡ, ತಾಲ್ಲೂಕ ಆರೋಗ್ಯ ಅಧಿಕಾರಿ ಸೇರಿದಂತೆ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.