ಜೇವರ್ಗಿಯಲ್ಲಿ ಜಾಗೃತಿ ರಥಕ್ಕೆ ಚಾಲನೆ

ಕಲಬುರಗಿ.ಏ.08:ತಾಲೂಕಾ ಆಡಳಿತ, ತಾಲೂಕಾ ಕಾನೂನು ಸೇವಾ ಸಮಿತಿ, ತಾಲೂಕಾ ನ್ಯಾಯವಾದಿಗಳ ಸಂಘ ಜೇವರ್ಗಿ ಹಾಗೂ ಜಿಲ್ಲಾ ಬಾಲಕಾರ್ಮಿಕ ಯೋಜನಾ ಸೊಸೈಟಿ ಕಲಬುರಗಿ ಇವುಗಳ ಸಂಯುಕ್ತಾಶ್ರಯದಲ್ಲಿ ಬಾಲಕಾರ್ಮಿಕ ಹಾಗೂ ಕಿಶೋರ ಕಾರ್ಮಿಕ ನೇಮಕಾತಿ ವಿರುದ್ಧ ಜಾಗೃತಿ ರಥಕ್ಕೆ ಜೇವರ್ಗಿ ನ್ಯಾಯಾಲಯ ಆವರಣದಲ್ಲಿ ಜೇವರ್ಗಿ ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ತಾಲೂಕಾ ಕಾನೂನು ಸೇವಾ ಸಮಿತಿ ಸದಸ್ಯ ಕಾರ್ಯದರ್ಶಿಗಳಾದ ರಮೇಶ ಡಿ. ಅವರು ಗುರುವಾರ ಚಾಲನೆ ನೀಡಿದರು.
ನಂತರ ಅವರು ಮಾತನಾಡಿ, 14 ವರ್ಷದೊಳಗಿನ ಮಕ್ಕಳನ್ನು ಯಾವುದೇ ಕೆಲಸಕ್ಕೆ ನೇಮಿಸಿಕೊಳ್ಳುವುದು ಶಿಕ್ಷಾರ್ಹ ಅಪರಾಧವಾಗಿದ್ದು, ಮಕ್ಕಳನ್ನು ಶಾಲೆಗೆ ಕಳುಹಿಸದೆ ಅವರನ್ನು ದುಡಿತಕ್ಕೆ ಹಚ್ಚಿದ್ದಲ್ಲಿ ಅಂತಹ ಮಕ್ಕಳನ್ನು ನೇಮಿಸಿಕೊಂಡ ಮಾಲೀಕರುಗಳು ರೂ. 50,000 ರೂ. ವರೆಗೆ ದಂಡ ಅಥವಾ ಎರಡು ವರ್ಷ ಜೈಲು ಶಿಕ್ಷೆಗೆ ಒಳಪಡುತ್ತಾರೆ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಜೇವರ್ಗಿ ತಹಶೀಲ್ದಾರ ಸುರೇಶ ವರ್ಮಾ ಮಾತನಾಡಿ, ಬಾಲಕಾರ್ಮಿಕ ಮುಕ್ತ ತಾಲೂಕವನ್ನಾಗಿ ಮಾಡಲು ಎಲ್ಲರ ಸಹಕಾರ ಅಗತ್ಯವಾಗಿದೆ ಎಂದರು. ಜೇವರ್ಗಿ ತಾಲೂಕಾ ಆರೋಗ್ಯಾಧಿಕಾರಿ ಸಿದ್ದು ಪಾಟೀಲ, ಸರಕಾರಿ ಸಹಾಯಕ ಅಭಿಯೋಜಕರಾದ ನಾಗವೇಣಿ ಡಿ., ಕಲಬುರಗಿ ರಾಷ್ಟ್ರೀಯ ಬಾಲಕಾರ್ಮಿಕ ಯೋಜನಾ ಸಂಘದ ಯೋಜನಾ ನಿರ್ದೇಶಕ ಸಂತೋಷ ಕುಲಕರ್ಣಿ ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.