ಜೇವರಗಿ: ತಾಯಿ,ಮಕ್ಕಳ ಆಸ್ಪತ್ರೆ ನಿರ್ಮಾಣಕ್ಕೆಡಾ. ಅಜಯಸಿಂಗ್ ಭೂಮಿ ಪೂಜೆ

ಕಲಬುರಗಿ/ ಜೇವರಗಿ ಜು 28: ರಾಷ್ಟ್ರೀಯ ಆರೋಗ್ಯ ಅಭಿಯಾನ ಯೋಜನೆ ಅಡಿಯಲ್ಲಿ ಜೇವರ್ಗಿ ಪಟ್ಟಣದಲ್ಲಿ 2, 100 ಲಕ್ಷ ರೂ ಅಂದಾಜು ವೆಚ್ಚದಲ್ಲಿ 100 ಹಾಸಿಗೆಗಳ ನೂತನ ತಾಯಿ ಮತ್ತು ಮಕ್ಕಳ ಆಸ್ಪತ್ರೆ ನಿರ್ಮಾಣ ಮಾಡಲಾಗುತ್ತಿದೆ.ಇದಕ್ಕಾಗಿ ಧರಂಸಿಂಗ್ ಫೌಂಡೇಷನ್‍ನಿಂದ 2. 50 ಎಕರೆ ಭೂಮಿ ದಾನ ರೂಪದಲ್ಲಿ ಸರಕಾರಕ್ಕೆ ನೀಡಲಾಗಿದೆ, ಈ ಆಸ್ಪತ್ರೆ ನಿರ್ಮಾಣದಿಂದ ಜೇವರ್ಗಿ ತಾಲ್ಲೂಕಿನ ಜನತೆ ಸೇರಿದಂತೆ ಇಡೀ ಭಾಗದ ಜನರೆಲ್ಲರಿಗೂ ಗುಣಮಟ್ಟದ ಆರೋಗ್ಯ ಸೇವೆ ಒದಗಿಸಲು ಸಾಧ್ಯವಾಗುತ್ತದೆ ಎಂದು ಜೇವರ್ಗಿ ಶಾಸಕರು ಹಾಗೂ ವಿಧಾನಸಭೆ ವಿರೋಧ ಪಕ್ಷದ ಮುಖ್ಯ ಸಚೇತಕರೂ ಆಗಿರುವ ಡಾ. ಅಜಯಸಿಂಗ್ ಅವರು ಹೇಳಿದರು.
ಅವರು ಬುಧವಾರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ರಾಷ್ಟ್ರೀಯ ಆರೋಗ್ಯ ಅಭಿಯಾನ ಯೋಜನೆ ಅಡಿಯಲ್ಲಿ ತಾಯಿ ಮತ್ತು ಣಕ್ಕಳ ಆಸ್ಪತ್ರೆ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿದ ನಂತರ ಕಟ್ಟಿ ಸಂಗಾವಿಯ ಅತಿಥಿ ಗೃಹದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ಜೇವರ್ಗಿ ಸೇರಿದಂತೆ ಕಲಬುರಗಿ ಭಾಗದ ಜನತೆಗೆ ಅನುಕೂಲ ಕಲ್ಪಿಸುವ ಉದ್ದೇಶದಿಂದ ಮುಂಬರುವ 10 ತಿಂಗಳ ಅವಧಿಯಲ್ಲಿ ಆಸ್ಪತ್ರೆ ನಿರ್ಮಾಣ ಕಾಮಗಾರಿ ಪೂರ್ಣಗೊಳಿಸಲಾಗುವುದು. 2021 ರ ನವೆಂಬರ್ 6ರಂದು ರಾಜ್ಯ ಸರಕಾರ ಆಸ್ಪತ್ರೆ ನಿರ್ಮಾಣಕ್ಕೆ ಅನುಮೋದನೆ ನೀಡಿದೆ. ನಂತರದಲ್ಲಿ ತಾಂತ್ರಿಕವಾಗಿ ತುಂಬ ತೊಂದರೆಗಳು ಕಾಡಿದರೂ ಅವನ್ನೆಲ್ಲ ತಾವು ಮುಂದಾಗಿ ಮೆಟ್ಟಿ ನಿಂತಿರುದದಾಗಿ ಹೇಳಿದರು.
ಇಡೀ ರಾಜ್ಯದಲ್ಲಿಯೇ ಪ್ರಪ್ರಥಮವಾಗಿ ಜೇವರ್ಗಿ, ಕುಷ್ಟಗಿ, ಬೈಲಹೊಂಗಲ ಪಟ್ಟಣದಲ್ಲಿ ತಾಯಿ ಮಕ್ಕಳ ಆಸ್ಪತ್ರೆ ನಿರ್ಮಾಣಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಂಜೂರಾತಿ ನೀಡಿ ಅನುದಾನ ಬಿಡುಗಡೆಗೊಳಿಸಿದ್ದಾರೆ, ಮಂಜೂರಾದ ಮೂರು ಕಡೆಗಳಲ್ಲಿ ಜೇವರ್ಗಿಯಲ್ಲೇ ಆಸ್ಪತ್ರೆ ಯೋಜನೆಗೆ ನಿವೇಶನ ಲಭ್ಯವಾಗಿದೆ ಎಂದು ಡಾ. ಅಜಯಸಿಂಗ್ ಅವರು ಹೇಳಿದರು.
ರಾಷ್ಟ್ರೀಯ ಆರೋಗ್ಯ ಮಿಷನ್ ಯೋಜನೆ ನಿರ್ದೇಶಕ ಡಾ. ಶ್ರೀನಿವಾಸ ಮೂರ್ತಿ 7 ಆಸ್ಪತ್ರೆಗಳಿಗೆ ಭೇಟಿ ನೀಡಿ ಜೇವರ್ಗಿಗೆ ಬಂದು ಇಲ್ಲಿನ ಆಸ್ಪತ್ರೆ ಪರಿಶೀಲಿಸಿದ್ದು ಅತ್ಯುತ್ತಮ ಕಾರ್ಯನಿರ್ವಹಿಸುವ ಆಸ್ಪತ್ರೆ ಎಂದು ಬೆನ್ನು ತಟ್ಟಿದ್ದಾರೆ. ಹೀಗೆ ಜೇವರ್ಗಿ ಜನತೆಗೆ ಉತ್ತಮ ಆರೋಗ್ಯ ಸೇವೆ ನೀಡುವುದೋ ತಮ್ಮ ಉದ್ದೇಶವಾಗಿದೆ ಎಂದರು.
ಧರಂಸಿಂಗ್ ಅವರ ಸ್ಮರಣೆಯಲ್ಲಿ ಕಲ್ಯಾಣಮಂಟಪ ನಿರ್ಮಾಣ:
ಧರಂಸಿಂಗ್ ಫೌಂಡೇಷನ್ ಅಡಿಯಲ್ಲಿ ಈಗಾಗಲೇ ಮಾಜಿ ಸಿಎಂ ದಿ. ಧರಂಸಿಂಗ್ ಅವರ ಸ್ಮರಣೆ ಸದಾ ಹಸಿರಾಗಿರಲು ಕಲ್ಯಾಣ ಮಂಟಪ ನಿರ್ಮಾಣ ಮಾಡಲಾಗುತ್ತಿದೆ. ನವ್ಹೆಂಬರ್ ಒಳಗಾಗಿ ಅದು ಪೂರ್ಣಗೊಳ್ಳಲಿದೆ. ಡಿ. 25 ರಂದು ಇರುವ ಧರಂಸಿಂಗ್ ಜನ್ಮೋತ್ಸವದಂದು ಉಚಿತವಾಗಿ ಸಾಮೂಹಿಕ ವಿವಾಹ ಮಹೋತ್ಸವ ಏರ್ಪಡಿಸಲಾಗಿದ್ದು ಇದೇ ಸಂದರ್ಭದಲ್ಲಿ ಕಲ್ಯಾಣ ಮಂಟಪ ಉದ್ಘಾಟನೆ ಮಾಡಲಾಗುತ್ತಿದೆ ಎಂದು ಡಾ. ಅಜಯ್ ಸಿಂಗ್ ಹೇಳಿದ್ದಾರೆ.
ಈ ಭಾಗದ ಬಡಜನತೆಗೆ ಮದುವೆ, ಮತ್ತಿತರ ಕಾರ್ಯಕ್ರಮಗಳಿಗೆ ಅನುಕೂಲಕಲ್ಪಿಸುವ ಸದುದ್ದೇಶದಿಂದ ಉಚಿತವಾಗಿ ಕಲ್ಯಾಣ ಮಂಟಪ ನೀಡಲಾಗುವುದು. ಮಾಜಿ ಮುಖ್ಯಮಂತ್ರಿ ದಿ.ಧರ್ಮಸಿಂಗ್ ಅವರ 86 ನೇ ಜನ್ಮದಿನದ ನಿಮಿತ್ತ ವಿವಿಧ ಜನಪರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು. ಅದರ ಮೂಲಕ ಕಲ್ಯಾಣ ಮಂಟಪಕ್ಕೆ ಚಾಲನೆ ನೀಡಲಾಗುತ್ತದೆ ಎಂದರು. ಸಾಮೂಹಿಕ ವಿವಾಹಕ್ಕೆ ಡಿ. 5 ರೊಳಗಾಗಿ ತಮ್ಮ ಹೆಸರು ನೊಂದಾಯಿಸುವಂತೆ ಶಾಸಕರು ಮನವಿ ಮಾಡಿದರು. ಧರಂಸಿಂಗ್ ಫೌಂಡೇಷನ್ ಸಿಬ್ಬಂದಿಗಳಾದ ರಾಜೇಶ್ವರಿ- 7760436537, ಬಂದೇನವಾಜ- 9900186117, ಬಾಬೂರಾವ ಪಾಟೀಲ್ 92428 08862 ಇವರನ್ನು ಸಂಪರ್ಕಿಸಿ ಅಗತ್ಯ ದಾಖಲೆಗಳನ್ನು ಸಲ್ಲಿಸಿ ಹೆಸರು ನೋಂದಣಿ ಮಾಡಿ ಸಾಮೂಹಿಕ ವಿವಾಹ ಕಾರ್ಯಕ್ರಮದ ಸದುಪಯೋಗ ಜನತೆ ಪಡೆಯುವಂತೆ ಡಾ. ಅಜಯ್ ಸಿಂಗ್ ಕೋರಿದರು.
ಈ ಸಂದರ್ಭದಲ್ಲಿ ಮಾಜಿ ಎಂಎಲ್‍ಸಿ ವಿಜಯಸಿಂಗ್, ಡಾ. ಅಜಯಸಿಂಗ್, ವಿಧಾನ ಪರಿಷತ್ತು ಮಾಜಿ ಸದಸ್ಯ ಅಲ್ಲಮಪ್ರಭು ಪಾಟೀಲ, ಕಾಂಗ್ರೆಸ್ ಮುಖಂಡ ಸುಭಾಷ ರಾಠೋಡ, ಜೇವರ್ಗಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಿದ್ಧಲಿಂಗರೆಡ್ಡಿ ಇಟಗಿ, ಯಡ್ರಾಮಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರುಕುಂಪಟೇಲ್ ಇಜೇರಿ, ಮುಖಂಡರಾದ ಚಂದ್ರಶೇಖರ ಹರನಾಳ, ಗುರುಲಿಂಗಪ್ಪಗೌಡ ಆಂದೋಲಾ, ಮುನ್ನಾಪಟೇಲ್ ಯಾಳವಾರ, ಖಾಸಿಂಪಟೇಲ್ ಮುದವಾಳ, ರಾಜಶೇಖರ ಸೀರಿ, ಶಾಂತಪ್ಪ ಕೂಡಲಗಿ, ಚಂದ್ರಶೇಖರ ಪುರಾಣಿಕ, ಶಿವಶರಣಪ್ಪ ಕೋಬಾಳ, ಮಲ್ಹಾರರಾವ್ ಕುಲಕರ್ಣಿ ಯಡ್ರಾಮಿ, ಮಲ್ಲಿಕಾರ್ಜುನ ಸಾಹು ಆಲೂರ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಎಂಜಿನಿಯರಿಂಗ್ ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್ ಮಾಣಿಕ್ ಕನಕಟ್ಟೆ, ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ರಾಜಕುಮಾರ ಬಳಿ, ಸಹಾಯಕ ಎಂಜಿನಿಯರ್ ಜಗದೀಶ ಕಂಟಿಕಾರ, ಕಾಂಗ್ರೆಸ್ ಮುಖಂಡ ಹಣಮಂತರಾವ ಭೂಸನೂರ್, ತಾಲ್ಲೂಕು ಆರೋಗ್ಯಾಧಿಕಾರಿ ಡಾ. ಸಿದ್ದು ಪಾಟೀಲ, ಗುತ್ತಿಗೆದಾರ ಸುಬ್ಬಾರೆಡ್ಡಿ ಸೇರಿದಂತೆ ಆರೋಗ್ಯಇಲಾಖೆ ಅಧಿಕಾರಿಗಳು,ಸಾರ್ವಜನಿಕರು ಕಾರ್ಯಕ್ರಮದಲ್ಲಿ ಪಾಲ್ಗೊಂಡರು.