ಜೇನು ಸಾಕಾಣಿಕೆ ಸಾವಯವ, ಪರಿಸರ ಸ್ನೇಹಿ ಮಾರ್ಗ


ಧಾರವಾಡ (ಅಳ್ನಾವರ), ಮಾ.26: ಜೇನು ಸಾಕಾಣಿಕೆಯಿಂದ ಕೇವಲ ಜೇನುತುಪ್ಪ ಮಾತ್ರವಲ್ಲ; ಜೇನು ದುಂಬಿಗಳಿಂದ ನಡೆಯುವ ಪರಾಗಸ್ಪರ್ಷಕ್ರಿಯೆ ಕೃಷಿ ಬೆಳೆಗಳ ರುಚಿ, ಬಣ್ಣ ಮತ್ತುಗಾತ್ರ ಮತ್ತು ವೈವಿಧ್ಯತೆ ಕಾಪಾಡುವಲ್ಲಿ ಸಹಕಾರಿ. ಇಳುವರಿಯನ್ನೂ ಹೆಚ್ಚಿಸಿಕೊಳ್ಳುವ ಸಾವಯವ ಮತ್ತು ಪರಿಸರ ಸ್ನೇಹಿ ಮಾರ್ಗ ಎಂದು ಜೇನು ಕೃಷಿ ಸಹಾಯಕಜೇನು ವೆಂಕಟೇಶ ಎಂ.ಅಭಿಪ್ರಾಯಪಟ್ಟರು.
ಧಾರವಾಡಜಿಲ್ಲಾ ಪಂಚಾಯ್ತಿ ಸುಪರ್ದಿಯ, ತೋಟಗಾರಿಕೆ ಇಲಾಖೆಯ ಜೇನು ಕೃಷಿ ಕಾರ್ಯನಿರತ ಪ್ರದರ್ಶಿನಿ ಅಳ್ನಾವರದ `ಮಧು ವನ’ದಲ್ಲಿ ಕೃಷಿಕರು ಮತ್ತು ಜೇನು ಕೃಷಿ ಆಸಕ್ತರಿಗಾಗಿ ಧಾರವಾಡ ಕೃಷಿ ವಿಶ್ವವಿದ್ಯಾಲಯ ಮತ್ತು ಐ.ಸಿ.ಎ.ಆರ್.ಕೃಷಿ ವಿಜ್ಞಾನಕೇಂದ್ರ ಸೈದಾಪುರ ಫಾರ್ಮ್, ಧಾರವಾಡ ಹಾಗೂ ರಾಷ್ಟ್ರೀಯ ಜೇನು ಮಂಡಳಿ, ನವ ದೆಹಲಿ ಆಶ್ರಯದಲ್ಲಿ ಆಯೋಜಿಸಿದ ಒಂದು ವಾರದಜೇನು ಸಾಕಾಣಿಕೆ ವೈಜ್ಞಾನಿಕ ತರಬೇತಿ ಕಾರ್ಯಾಗಾರದಲ್ಲಿ, ಸಂಪನ್ಮೂಲ ವ್ಯಕ್ತಿಗಳಾಗಿ ಪಾಲ್ಗೊಂಡು, ಅವರು ಪ್ರಾತ್ಯಕ್ಷಿಕೆ ಮೂಲಕ ವಿವರಿಸಿದರು.
ಹೆಜ್ಜೇನು (ಎಪಿಎಸ್‍ಡೊರ್ಸೆಟಾ), ಕೋಲು ಜೇನು (ಎಪಿಎಸ್ ಫ್ಲೋರಿಯಾ), ತುಡುವೆಜೇನು (ಎಪಿಎಸ್ ಸೆರೆನಾಇಂಡಿಕಾ) ಮತ್ತು ವಿದೇಶಿ ತಳಿ (ಎಪಿಎಸ್ ಮೆಲ್ಲಿಫೆರಾ) ಜೇನು ಕುಟುಂಬಗಳನ್ನು ತೋರಿಸಿ, ನಿರ್ವಹಣೆ ವಿಧಾನ ಮತ್ತು ಬೇಕಿರುವ ಉಪಕರಣಗಳ ಮಾಹಿತಿ ನೀಡಿದಜೇನು ವೆಂಕಟೇಶ್ ಎಂ. ಅವರು, ವಿರಾಮಕಾಲದ ಅತ್ಯುತ್ತಮ ಹವ್ಯಾಸವಾಗಿರುವ ಜೇನು ಸಾಕಾಣಿಕೆಯಿಂದ ಮನೆಯಲ್ಲಿ ಪರಿಶುದ್ಧವಾದ ಜೇನುತುಪ್ಪ ಉತ್ಪಾದಿಸಿಕೊಳ್ಳಲು ಸಾಧ್ಯವಿದೆ.ನೈಸರ್ಗಿಕ ವರವಾದಜೇನು ಸಂತತಿಯನ್ನುಕಾಪಾಡುವುದರೊಂದಿಗೆ, ಸ್ವಯಂಉದ್ಯೋಗ ಕಂಡುಕೊಳ್ಳಬಹುದು.ಜೇನು ಪೆಟ್ಟಿಗೆ, ಉಪಕರಣತಯಾರಿ, ಉತ್ಪನ್ನಗಳ ಮಾರಾಟ, ಪರಾಗಸ್ಪರ್ಷ ಸೇವೆ ಇತ್ಯಾದಿಗಳಲ್ಲಿ ಯುವಜನತೆಗೆ ಉತ್ತಮ ಉದ್ಯೋಗಾವಕಾಶಗಳಿವೆ ಎಂದರು.
ನಿಸರ್ಗದಲ್ಲಿನ ಜೇನು ಸಂತತಿಯ ನಾಶ ಮನುಕುಲದ ವಿನಾಶ. ಜೇನು ದುಂಬಿಗಳಿರದ ಈ ಭೂಮಿಯಲ್ಲಿ ಮನುಷ್ಯನಆಯಸ್ಸು ಕೇವಲ ನಾಲ್ಕರಿಂದಐದು ವರ್ಷ ಮಾತ್ರ. ವಿನಾಶದಂಚಿನಲ್ಲಿರುವ ಜೇನು ಸಂತತಿಯನ್ನು ಉಳಿಸಿ, ಬೆಳೆಸುವುದರೊಂದಿಗೆ ಪರಿಸರ ಸಮತೋಲನ ಹಾಗೂ ಸಸ್ಯ ಸಂಪತ್ತನ್ನು ಅಭಿವೃದ್ಧಿಪಡಿಸಬಹುದು ಎಂದು ಜೇನು ವೆಂಕಟೇಶ ಹೇಳಿದರು.
ಗದಗ, ಕೊಪ್ಪಳ, ಹಾವೇರಿ, ಧಾರವಾಡ ಮತ್ತು ಬೆಳಗಾವಿ ಸೇರಿದಂತೆ ಉತ್ತರ ಕರ್ನಾಟಕದ ಹಲವು ಜಿಲ್ಲೆಗಳಿಂದ 25ಕ್ಕೂ ಹೆಚ್ಚು ಜನಜೇನು ಕೃಷಿ ಆಸಕ್ತಿ ಹೊಂದಿದವರು ಮತ್ತುರೈತರು, ತೋಟಗಾರರು ತರಬೇತಿಯಲ್ಲಿ ಪಾಲ್ಗೊಂಡಿದ್ದಾರೆ. ಐ.ಸಿ.ಎ.ಆರ್. ಕೃಷಿ ವಿಜ್ಞಾನಕೇಂದ್ರದ ಸಸ್ಯ ಸಂರಕ್ಷಣೆ ವಿಭಾಗದ ವಿಜ್ಞಾನಿ ಡಾ.ಕಲಾವತಿ ಕೆ. ಕಂಬಳಿ ಹಾಗೂ ತೋಟಗಾರಿಕೆ ವಿಭಾಗದ ವಿಜ್ಞಾನಿ ಡಾ.ಅಕ್ಕಮಹಾದೇವಿ ಅಗಸೀಮನಿ ಪಾಲ್ಗೊಂಡಿದ್ದರು. ಹಿರಿಯ ವಿಜ್ಞಾನಿ ಹಾಗೂ ಕೆ.ವಿ.ಕೆ.ಸೈದಾಪೂರ ಫಾರ್ಮ್ ಮುಖ್ಯಸ್ಥಡಾ.ಎಸ್.ಎ. ಬಿರಾದಾರ ಈ ಶಿಬಿರವನ್ನು ಸಂಘಟಿಸಿದ್ದಾರೆ.