
ರಾಯಚೂರು,ಮಾ.೧೬- ಶಿಕ್ಷಕರು ಹೇಳಿದ ಪ್ರತಿಯೊಂದು ಅಂಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಶ್ರದ್ಧೆಯಿಂದ ಅಭ್ಯಾಸ ಮಾಡಿದರೆ ಖಂಡಿತ ನಿಮ್ಮ ಗುರಿಯನ್ನು ತಲುಪಬಹುದು ಎಂದು ಕರ್ನಾಟಕ ರಾಜ್ಯ ಪ್ರೌ.ಶಾ. ಸ. ಶಿ.ಸಂಘದ ತಾಲೂಕ ಘಟಕದ ಅಧ್ಯಕ್ಷರಾದ ಮೊಯಿನುಲಹಕ್ ನುಡಿದರು.
ಅವರಿಂದು ರಾಯಚೂರು ತಾಲೂಕಿನ ಸರ್ಕಾರಿ ಪ್ರೌಢಶಾಲೆ ಜೇಗರಕಲ್‌ನಲ್ಲಿ ಏರ್ಪಡಿಸಿದ ಬಿಳ್ಕೊಡುಗೆ ಸಮಾರಂಭದ ಮುಖ್ಯ ಅತಿಥಿಗಳಾಗಿ ಮಾತನಾಡುತ್ತಾ, ೧೦ನೇ ತರಗತಿ ಜೀವನದಲ್ಲಿ ಮಹತ್ತರವಾದ ಘಟ್ಟ ನಿಮ್ಮ ತಂದೆ ತಾಯಿಗಳು ನಿಮ್ಮ ಮೇಲೆ ಉನ್ನತ ಕನಸುಗಳನ್ನು ಕಂಡು ಶಾಲೆಗೆ ಕಳಿಸುತ್ತಿದ್ದಾರೆ. ನಮ್ಮ ಮಕ್ಕಳು ಭವಿಷ್ಯದಲ್ಲಿ ಉತ್ತಮವಾಗಿ ಬಾಳಬೇಕು ಎನ್ನುವ ಕನಸನ್ನು ನನಸಾಗಿ ಮಾಡುವ ಈ ಸಮಯ ತಾವುಗಳು ಉನ್ನತ ಗುರಿಯನ್ನು ಇಟ್ಟುಕೊಂಡು ಪರೀಕ್ಷೆ ಕೇವಲ ಹದಿನಾಲ್ಕು ದಿನಗಳು ಮಾತ್ರ ಉಳಿದಿದ್ದು ಉತ್ತಮವಾಗಿ ಅಭ್ಯಾಸ ಮಾಡಿ ಶಾಲೆಗೆ ಪಾಲಕರಿಗೆ ಶಿಕ್ಷಕರಿಗೆ ಹಾಗೂ ಊರಿಗೆ ಕೀರ್ತಿಯನ್ನು ತರಬೇಕೆಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಇನ್ನೊಬ್ಬ ಅತಿಥಿಗಳಾದ ಆಂಜನೇಯ ಕಾವಲಿ ಕ.ರಾ. ಪ್ರೌ.ಶಾ.ಸ. ಶಿಕ್ಷಕರ ಸಂಘದ ಕಾರ್ಯದರ್ಶಿಗಳು ಮಾತನಾಡುತ್ತಾ, ವಿದ್ಯಾರ್ಥಿಗಳು ಇದುವರೆಗೂ ತಾವು ಹುಡುಗಾಟದಲ್ಲಿ ಬೆಳೆದು ದೊಡ್ಡವರಾಗಿದ್ದೀರಿ ಇನ್ನು ಮುಂದೆ ಬದುಕಿನಾಟ ಶುರುವಾಗುತ್ತದೆ. ಬದುಕಿನಾಟದಲ್ಲಿ ನೀವು ಯಾರ ಆಶ್ರಯವಿಲ್ಲದೆ ಸ್ವತಂತ್ರವಾಗಿ ಸ್ವಚ್ಛಂದವಾಗಿ ಹಾರಾಡುವ ಈ ಸಮಯದಲ್ಲಿ ಜವಾಬ್ದಾರಿ ಹೆಚ್ಚಾಗುತ್ತದೆ. ಹಾಗಾಗಿ ಮುಂದಿನ ವಿದ್ಯಾಭ್ಯಾಸವನ್ನು ಕಠಿಣವಾದರೂ ಇಷ್ಟಪಟ್ಟು ಓದಿದರೆ ಖಂಡಿತ ನೀವು ಅಂದುಕೊಂಡಂತ ಗುರಿಯನ್ನು ತಲುಪುವುದು ಸುಲಭವಾಗುತ್ತದೆ.
ನಿಮ್ಮೊಳಗೆ ಒಬ್ಬ ಉತ್ತಮ ಸ್ನೇಹಿತ ಅಡಗಿದ್ದಾನೆ ಅವನ ಸ್ನೇಹವನ್ನು ಮಾಡಿ ನಿಮ್ಮನ್ನು ದಾರಿ ತಪ್ಪಿಸುವ ಗೆಳೆಯರ ಸ್ನೇಹ ಮಾಡಬೇಡಿ ಸಜ್ಜನರ ಸ್ನೇಹದಿಂದ ನಿಮ್ಮ ಜೀವನಕ್ಕೆ ಬದುಕಿಗೆ ಒಳ್ಳೆಯ ದಾರಿಯಾಗುತ್ತದೆ ಈ ಬದುಕಿನಲ್ಲಿ ಸಮಾಜಕ್ಕೆ ಮಾದರಿ ವ್ಯಕ್ತಿಗಳಾಗಿ ಬಾಳಿ ಬದುಕಿ ತೋರಿಸುವುದು ಬಹಳ ಮಹತ್ವ ತಂದೆ ತಾಯಿಗಳು ನಮ್ಮ ವಿದ್ಯಾಭ್ಯಾಸಕ್ಕಾಗಿ ಏನೆಲ್ಲಾ ಕಷ್ಟ ಪಡುತ್ತಾರೆ ಎಲ್ಲವನ್ನು ತ್ಯಾಗ ಮಾಡಿ ನಮ್ಮ ಬೇಕು ಬೇಡಗಳನ್ನು ಈಡೇರಿಸುವ ತಂದೆ ತಾಯಿಗಳಿಗೆ ಉತ್ತಮ ನಾಗರಿಕರಾಗಿ ಬಾಳಿ ಬದುಕಿ ತೋರಿಸುವುದು ಅದೊಂದು ನಾವು ಕೊಡುವ ಬಹು ದೊಡ್ಡ ಕೊಡುಗೆ ಎಂದು ತಿಳಿಸಿದರು.
ರೂಪಾದೇವಿ ಶಿಕ್ಷಕರು ಮಾತನಾಡಿದರು. ಇದೇ ಸಂದರ್ಭದಲ್ಲಿ ವಿದ್ಯಾರ್ಥಿನಿಯರಾದ ಐಶ್ವರ್ಯ, ಸರಸ್ವತಿ, ವೈಶಾಲಿ, ಚನ್ನವೀರ, ಮಮತಾ, ವೈ.ವನಿತಾ, ಸುದೀಪ್, ಮುರುಳಿ, ಮಮತಾ ಎಚ್, ಎಂ.ವೆಂಕಟೇಶ್, ರಾಧಿಕಾ ಶಾಲೆಯ ಬಗ್ಗೆ ಹಾಗೂ ಗುರುಗಳ ಬಗ್ಗೆ ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು. ಶಾಲೆ ಹಾಗೂ ಶಿಕ್ಷಕರ ಬಗ್ಗೆ ಹಾಡಿದ ರೂಪದಲ್ಲಿ ಮಮತಾ, ವೈಶಾಲಿ, ಭೀಮವ್ವ, ಮಹೇಶ್ವರಿ, ಚನ್ನವೀರ ಹಾಡಿನ ರೂಪದ ಮೂಲಕ ಅತ್ಯುತ್ತಮವಾಗಿ ವ್ಯಕ್ತಪಡಿಸಿದರು.
ಇದೇ ಸಂದರ್ಭದಲ್ಲಿ ಎಲ್ಲಾ ಶಿಕ್ಷಕರ ಮಿಮಿಕ್ರಿಯನ್ನು ವಿದ್ಯಾರ್ಥಿಗಳು ಅತ್ಯುತ್ತಮವಾಗಿ ಮಾಡಿದರು. ಹಸಿನಾಬಾನು ಮುಖ್ಯ್ಯೊಪಾಧ್ಯಾಯರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿಮಾತನಾಡುತ್ತ, ಮೂರು ವರ್ಷಗಳ ಕಾಲ ಶಾಲೆಯಲ್ಲಿ ಏರ್ಪಡಿಸಿದ ಪ್ರತಿಯೊಂದು ಸಹ ಪಠ್ಯ ಚಟುವಟಿಕೆಗಳಲ್ಲಿ ಭಾಗವಹಿಸಿ ಶಾಲೆಗೆ ಕೀರ್ತಿ ತಂದಿದ್ದೀರಿ. ಹಾಗೆ ಉತ್ತಮ ಅಭ್ಯಾಸ ಮಾಡಿ ಹೆಚ್ಚಿನ ಅಂಕಗಳನ್ನು ಪಡೆಯಲು ಸತತವಾಗಿ ಓದಿನ ಕಡೆ ಗಮನ ನೀಡಲು ತಿಳಿಸಿದರು.
ಶಾಲೆಯಲ್ಲಿ ಎಲ್ಲಾ ವಿಷಯ ಶಿಕ್ಷಕರು ನಿಮಗೆ ಅತ್ಯುತ್ತಮ ಬೋಧನೆಯನ್ನು ನೀಡಿದ್ದು, ನಿಮ್ಮ ಪ್ರತಿ ಸಮಸ್ಯೆಗೆ ಪರಿಹಾರವನ್ನು ಶಿಕ್ಷಕರು ನೀಡಿದ್ದು ಶೇಕಡ ನೂರಕ್ಕೆ ನೂರರಷ್ಟು ಅಂಕಗಳನ್ನು ಪಡೆದು ಶಾಲೆಗೆ ಕೀರ್ತಿ ತರಬೇಕೆಂದು ತಿಳಿಸಿದರು. ಸುಷ್ಮಾ ಹಾಗೂ ಸೌಮ್ಯ ಪ್ರಾರ್ಥನೆ ಗೀತೆಯನ್ನು ನೆರೆವೇರಿಸಿದರು. ಸ್ವಾಗತವನ್ನು ಪ್ರಸನ್ನ ದೇವಿ ಶಿಕ್ಷಕರು ಮಾಡಿದರೆ, ಕಾರ್ಯಕ್ರಮ ನಿರೂಪಣೆಯನ್ನು ವಿಜಯಲಕ್ಷ್ಮಿ ಈ. ಶಿಕ್ಷಕರು ಮಾಡಿದರು, ಕೊನೆಯಲ್ಲಿ ಜೋತ್ಸ್ನಾದೇವಿ ವಂದಿಸಿದರು.
ಇದೇ ಸಂದರ್ಭದಲ್ಲಿ ವಿದ್ಯಾರ್ಥಿಗಳು ಎಲ್ಲಾ ಶಿಕ್ಷಕರಿಗೆ ಕಿರು ಕಾಣಿಕೆಗಳನ್ನು ನೀಡಿದರು. ವೇದಿಕೆ ಮೇಲೆ ಎಸ್‌ಡಿಎಂಸಿ ಅಧ್ಯಕ್ಷರಾದ ಜಿಂದಪ್ಪ, ಸದಸ್ಯರಾದ ಶಂಕರಗೌಡ, ಶಿಕ್ಷಕರಾದ ಪದ್ಮಾವತಿ, ಜೋಶ್ನಾ ದೇವಿ, ವಿಜಯಲಕ್ಷ್ಮಿ ಸಂಗೀತ ಶಿಕ್ಷಕರು, ರಾಮಣ್ಣ ಬೋಯೆರ್, ಆಂಜನೇಯ ಕೆ.ಆರ್, ನರಹರಿರಾವ್ ದೇವರು, ಎಂ. ಗಿರಿಯಪ್ಪ ದಿನ್ನಿ, ಹಾಜಿ ಹುಸೇನ್, ನವೀದ್, ರೇವತಿ, ಸಾಬೀರ್ ಪಾಷ ಉಪಸ್ಥಿತರಿದ್ದರು.