ಜೆ.ಡಿ.ಎಸ್ ಮೂಲ ಕಾರ್ಯಕರ್ತರಿಗೆ ಕಡೆಗಣನೆ

ಅಫಜಲಪುರ: ಎ.4:ಮತಕ್ಷೇತ್ರದ ಜೆಡಿಎಸ್ ಅಭ್ಯರ್ಥಿಯಾಗಿ ಘೋಷಣೆಯಾಗಿರುವ ಶಿವಕುಮಾರ ನಾಟೀಕಾರ ಅವರು ನಿರಂತರವಾಗಿ ಕಾರ್ಯಕರ್ತರಿಗೆ ಕಡೆಗಣನೆ ಮಾಡುತ್ತಿದ್ದಾರೆ. ಹೀಗಾಗಿ ತಕ್ಷಣ ಇವರಿಗೆ ಘೋಷಣೆ ಮಾಡಿರುವ ಟಿಕೆಟ್ ವಾಪಸ್ ಪಡೆಯಬೇಕು ಎಂದು ಜೆಡಿಎಸ್ ಮಾಜಿ ತಾಲೂಕು ಅಧ್ಯಕ್ಷ ರಾಜಕುಮಾರ ಬಡದಾಳ ತಿಳಿಸಿದರು.

ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕಳೆದ ಹಲವಾರು ವರ್ಷಗಳಿಂದ ಕ್ಷೇತ್ರದಲ್ಲಿ ಜೆಡಿಎಸ್ ಪಕ್ಷವನ್ನು ಕಟ್ಟಿ ಬೆಳೆಸಿದ್ದೇನೆ. ಆದರೆ ಚುನಾವಣೆ ಸಮೀಪ ಬಂದಾಗ ಹಲವಾರು ಜನ ಪಕ್ಷಕ್ಕೆ ಬಂದಿದ್ದಾರೆ. ಚುನಾವಣೆ ಮುಗಿದ ನಂತರ ಮತ್ತೆ ಬೇರೆ ಬೇರೆ ಪಕ್ಷಕ್ಕೆ ಹೋಗಿದ್ದಾರೆ. ಆದರೆ ನಾನೊಬ್ಬ ನಿಷ್ಠಾವಂತ ಕಾರ್ಯಕರ್ತನಾಗಿ ಪಕ್ಷ ಸಂಘಟನೆಯಲ್ಲಿ ನಿರಂತರವಾಗಿ ತೊಡಗಿಕೊಂಡಿದ್ದೇನೆ. ಇತ್ತೀಚೆಗೆ ಪಕ್ಷಕ್ಕೆ ಬಂದಿರುವ ಶಿವಕುಮಾರ ನಾಟೀಕಾರ ಮೂಲ ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಏಕ ಚಕ್ರಾಧಿಪತಿ ರೀತಿಯಲ್ಲಿ ವರ್ತಿಸುತ್ತಿದ್ದಾರೆ.

ಕ್ಷೇತ್ರದಲ್ಲಿ ಈ ಹಿಂದೆ 41 ಜನ ಜೆಡಿಎಸ್ ಬೆಂಬಲಿತ ಗ್ರಾಮ ಪಂಚಾಯಿತಿ ಸದಸ್ಯರು ಹೊಂದಿದ್ದು ಈಗ ಇವರ ದುರಾಡಳಿತಕ್ಕೆ ಬೇಸತ್ತು 10ಜನ ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆ. ಇದೇ ರೀತಿ ಮುಂದುವರೆದರೆ ಕ್ಷೇತ್ರದಲ್ಲಿ ಪಕ್ಷ ಹಾಳಾಗುತ್ತದೆ. ಆದ್ದರಿಂದ ತಕ್ಷಣ ಎಚ್ಚೆತ್ತುಕೊಂಡು ಘೋಷಣೆ ಮಾಡಿರುವ ಟಿಕೆಟ್ ರದ್ದುಪಡಿಸಿ ಮೂಲ ಜೆಡಿಎಸ್ ಕಾರ್ಯಕರ್ತರಿಗೆ ಟಿಕೆಟ್ ನೀಡಬೇಕೆಂದು ಲ ರಾಷ್ಟ್ರೀಯ ಅಧ್ಯಕ್ಷರಾದ ಎಚ್.ಡಿ.ದೇವೇಗೌಡ ಹಾಗೂ ರಾಜ್ಯಾಧ್ಯಕ್ಷ ಸಿ.ಎಂ ಇಬ್ರಾಹಿಂ ಅವರಿಗೆ ಪತ್ರ ಬರೆದಿರುವುದಾಗಿ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಬೈಲಪ್ಪ ಪಟ್ಟೇದಾರ, ಹನುಮಂತರಾವ್ ಬಿರಾದರ, ಸಾಗರ ರಾಠೋಡ ಉಪಸ್ಥಿತರಿದ್ದರು.