ಜೆ.ಡಿ.ಎಸ್. ಪಕ್ಷದಿಂದ ಮಾತ್ರ ರಾಜ್ಯದ ಅಭಿವೃದ್ಧಿ ಸಾಧ್ಯ: ನಾಟೀಕಾರ

ಅಫಜಲಪುರ:ಮಾ.21: ರಾಜ್ಯದಲ್ಲಿ ಜೆಡಿಎಸ್ ಪಕ್ಷ ಅಧಿಕಾರದಲ್ಲಿದ್ದಾಗ 26 ಸಾವಿರ ಕೋಟಿ ರೂ. ರೈತರ ಸಾಲ ಮನ್ನಾ ಮಾಡುವ ಮೂಲಕ ಅನ್ನದಾತರಿಗೆ ನೆರವು ನೀಡಿದ ಏಕೈಕ ಪಕ್ಷವಾಗಿದೆ. ಅಲ್ಲದೇ ಕೆಳವರ್ಗದ, ಕೃಷಿಕಾರ್ಮಿಕರ, ಬಡವರ, ಶ್ರಮಿಕರ ಪಕ್ಷ ಜೆ.ಡಿ.ಎಸ್. ಪಕ್ಷವಾಗಿದೆ ಎಂದು ಜೆಡಿಎಸ್ ಮುಖಂಡ ಶಿವಕುಮಾರ ನಾಟೀಕಾರ ಹೇಳಿದರು.
ಪಟ್ಟಣದ ಜನಸಂಪರ್ಕ ಕಚೇರಿಯಲ್ಲಿ ಸುದ್ದಿಗೋಷ್ಠಿ ಕರೆದು ಮಾತನಾಡಿದ ಅವರು ಇಂದು ದೇಶದಲ್ಲಿ ಬೆಲೆ ಏರಿಕೆ ಮತ್ತು ಖಾಸಗೀಕರಣ ವಿರೋಧಿಸಿ ಜನಸಾಮಾನ್ಯರು ಕಷ್ಟದ ದಿನಗಳನ್ನು ಎದುರಿಸುವಂತಾಗಿದೆ. ಕಾಂಗ್ರೇಸ್ ಮತ್ತು ಬಿಜೆಪಿ ಪಕ್ಷದ ನಡೆಗೆ ಬೇಸತ್ತು ಜನತೆ ಜೆ.ಡಿ.ಎಸ್ ಪಕ್ಷದ ಕಡೆ ಮುಖ ಮಾಡುತ್ತಿದ್ದಾರೆ ಎಂದು ಜೆಡಿಎಸ್ ಮುಖಂಡ ಶಿವಕುಮಾರ ನಾಟೀಕಾರ ತಿಳಿಸಿದರು.
ಬರುವ ದಿನಗಳಲ್ಲಿ ಮಾಜಿ ಪ್ರಧಾನಿ ಹೆಚ್.ಡಿ ದೇವೆಗೌಡ ಹಾಗೂ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಯವರ ಮಾರ್ಗದರ್ಶನದಲ್ಲಿ ರೈತಪರ ಹಾಗೂ ಬಡವರ, ನಿರ್ಗತಿಕರ ಪರ ನಿಲುವು ಹೊಂದಿರುವ ಜೆಡಿಎಸ್ ಪಕ್ಷದ ಬಲವರ್ಧನೆಗೆ ತಾಲೂಕಿನಲ್ಲಿ ತಳಮಟ್ಟದಿಂದ ಪಕ್ಷವನ್ನು ಕಟ್ಟುತ್ತೇವೆ. ನಾಳೆ ಸೋಮವಾರ ಬೆಂಗಳೂರಿನಿಂದ ಜೆಡಿಎಸ್ ಪಕ್ಷದ ವೀಕ್ಷಕರು ಅಫಜಲಪುರಕ್ಕೆ ಆಗಮಿಸುತ್ತಿದ್ದು ಅಂದಿನ ದಿನ ಜನಸಂಪರ್ಕ ಕಚೇರಿಯನ್ನು ಜೆಡಿಎಸ್ ಕಚೇರಿಯನ್ನಾಗಿ ಉದ್ಘಾಟಿಸಲಾಗುವುದು ಎಂದರು.
ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷದ ನಡೆಗೆ ಬೇಸತ್ತು ಈಗಾಗಲೇ ಹಲವು ಮುಖಂಡರು ಜೆಡಿಎಸ್ ಪಕ್ಷದ ಸಂಘಟನೆಗೆ ಶಕ್ತಿ ತುಂಬಲು ಶೀಘ್ರದಲ್ಲೇ ಪಕ್ಷಕ್ಕೆ ಸೇರ್ಪಡೆಗೊಳ್ಳುವ ಮಾತನ್ನು ಹೇಳಿದ್ದಾರೆ. ಹೀಗಾಗಿ ಬರುವ ದಿನಗಳಲ್ಲಿ ತಾಲೂಕು ಪಂಚಾಯತ್ ಮತ್ತು ಜಿಲ್ಲಾ ಪಂಚಾಯತ್ ಚುನಾವಣೆಗೆ ಎಲ್ಲಾ ಕ್ಷೇತ್ರಗಳಿಂದ ಅಭ್ಯರ್ಥಿಗಳನ್ನು ಆಯ್ಕೆ ಮಾಡಿ ಚುನಾವಣಾ ಕಣಕ್ಕೆ ಇಳಿಸಲಾಗುವುದು ಎಂದು ಇಂಗಿತ ವ್ಯಕ್ತ ಪಡಿಸಿದರು.
ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದು ಭೀಮಾ ದಂಡೆಯಲ್ಲಿ ಪ್ರವಾಹ ಎದುರಾದ ಸಂದರ್ಭದಲ್ಲಿ ಸುಮಾರು 20,797 ರೈತರ ಕೃಷಿ ಜಮೀನುಗಳಿಗೆ ಹಾನಿ ಸಂಭವಿಸಿದ್ದು ಇನ್ನುವರೆಗೂ ಯಾವುದೇ ಪರಿಹಾರ ನೀಡದಿರುವುದು ದುರಂತವಾಗಿದೆ. ಅಲ್ಲದೆ ನೆರೆಯಿಂದ ಜಲಾವೃತಗೊಂಡ ಹಲವು ಹಳ್ಳಿಗಳ ಸ್ಥಳಾಂತರ ಮತ್ತು ಹಕ್ಕುಪತ್ರ ವಿತರಣೆ ಕಾರ್ಯಕ್ಕೆ ಮುಂದಾಗದಿರುವುದು ಸರ್ಕಾರದ ನಿರ್ಲಕ್ಷ್ಯತನ ತೋರಿಸುತ್ತದೆ ಎಂದು ಅಸಮಾಧಾನ ಹೊರ ಹಾಕಿದರು.
ಈ ಸಂದರ್ಭದಲ್ಲಿ ಅಮರಸಿಂಗ ರಜಪೂತ, ಶ್ರೀಕಾಂತ ದಿವಾಣಜಿ, ರಾಜೇಂದ್ರ ಚಿಕ್ಕವಲಗಿ, ಮಹಿಬೂಬ ಮುಲ್ಲಾ, ಶರಣಗೌಡ ಪಾಟೀಲ್ ಮಾಶಾಳ, ಜಮೀಲ ಗೌಂಡಿ ಸೇರಿದಂತೆ ಅನೇಕರಿದ್ದರು.