ಜೆ ಜೆ ಎಂ ಮೆಡಿಕಲ್ ಕಾಲೇಜಿನ ವಿದ್ಯಾರ್ಥಿ ಸಂಘದ ಉದ್ಘಾಟನೆ

ಸಂಜೆವಾಣಿ ವಾರ್ತೆ

ದಾವಣಗೆರೆ. ಜು.,೫; ಜಗತ್ತಿನ ಯಾವುದೇ ಭಾಗಕ್ಕೆ ನಾನು ಹೋದರೂ ಜೆಜೆಎಮ್ ಮೆಡಿಕಲ್ ಕಾಲೇಜಿನ ಒಬ್ಬ ವಿದ್ಯಾರ್ಥಿ ನನಗೆ ಸಿಕ್ಕೇ ಸಿಗುತ್ತಾರೆ, ಬಂದು ಆತ್ಮೀಯತೆಯಿಂದ ನನ್ನನ್ನು ಮಾತನಾಡಿಸುತ್ತಾರೆ, ಉತ್ತಮ ವೈದ್ಯಕೀಯ ಸೇವೆಯನ್ನು ನೀಡುತ್ತಾ ಹೆಸರುವಾಸಿಯಾಗಿ ಅವರುಗಳು ಜೆಜೆಎಮ್ ಮೆಡಿಕಲ್ ಕಾಲೇಜಿನ ಹಾಗೂ ಭಾರತದ ಹೆಸರನ್ನು ಬೆಳಗಿಸುತ್ತಿರುತ್ತಾರೆ ಎಂದು ಬಾಪೂಜಿ ವಿದ್ಯಾ ಸಂಸ್ಥೆಯ ಶೈಕ್ಷಣಿಕ ನಿರ್ದೇಶಕ ಡಾ. ಎಂಜಿ ಈಶ್ವರಪ್ಪ  ಹೇಳಿದರು.ಜೆಜೆಎಂ ಮೆಡಿಕಲ್ ಕಾಲೇಜಿನ ವಿದ್ಯಾರ್ಥಿ ಸಂಘದ ಉದ್ಘಾಟನೆಯನ್ನು ಮಾಡಿ ಮಾತನಾಡಿದ ಅವರು ನಾರಾಯಣ ಹೃದಯಾಲಯದ ಡಾ. ದೇವಿ ಶೆಟ್ಟಿ ಹಾಗೂ ಜಯದೇವ ಹೃದ್ರೋಗ ಆಸ್ಪತ್ರೆಯ ಡಾ. ಮಂಜುನಾಥರಂತೆ ಸೇವೆಯಲ್ಲಿ ಅತ್ಯುನ್ನತ ಮಟ್ಟಕ್ಕೆ ತಲುಪಬೇಕು ಎಂದರು. ಕೇವಲ ಓದುವುದಕ್ಕೆ ತಮ್ಮನ್ನು ಸೀಮಿತಗೊಳಿಸಿಕೊಳ್ಳದೆ ಪಠ್ಯೇತರ ಚಟುವಟಿಕೆಗಳಲ್ಲಿಯೂ ಸಕ್ರಿಯವಾಗಿ ಪಾಲ್ಗೊಳ್ಳಬೇಕು ಎಂದು ಹೇಳಿದರು.ಇದೇ ವೇಳೆ ಫಾರ‍್ಮಕಾಲಜಿ ಪ್ರಾಧ್ಯಾಪಕರಾದ ಡಾ.ಸಂತೋಷ್ ಕುಮಾರ್ ಎಂ  ಹೊಸ ಪಠ್ಯಕ್ರಮಕ್ಕನುಗುಣವಾಗಿ ಬರೆದ ಮೊದಲ ಪುಸ್ತಕ ವಾದ “ಔಷದ ಶಾಸ್ತ್ರ” ಎಂಬ ಪುಸ್ತಕವನ್ನು ಬಿಡುಗಡೆ ಮಾಡಿ ಈ ಪುಸ್ತಕದ ಸದುಪಯೋಗವನ್ನು ವಿದ್ಯಾರ್ಥಿಗಳು ಪಡೆದುಕೊಳ್ಳಬೇಕು, ಇದನ್ನು ಬರೆದ ಡಾ.ಸಂತೋಷ್ ಕುಮಾರ್ ಎಂ ಅವರ ಈ ಪುಸ್ತಕ ವೈದ್ಯಕೀಯ ವಿದ್ಯಾರ್ಥಿ ಕೌಶಲ್ಯ ಅಭಿವೃದ್ಧಿಗೆ ಅತ್ಯವಶ್ಯಕವಾದದ್ದು ಎಂದರು.ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಪುಸ್ತಕದ ಲೇಖಕರಾದ ಡಾ. ಸಂತೋಷ್ ಕುಮಾರ್ ಎಂ, ಜೆಜೆಎಮ್ ಮೆಡಿಕಲ್ ಕಾಲೇಜಿನ ಡಾ.ಮಂಜುನಾಥ್ ಆಲೂರ್, ಪ್ರಾಂಶುಪಾಲರಾದ ಡಾ.ಎಸ್ ಬಿ ಮುರುಗೇಶ್, ವಿದ್ಯಾರ್ಥಿ ಸಂಘದ ಕೋ ಆರ್ಡಿನೇಟರ್  ಡಾ.ಅನುರೂಪ, ವಿದ್ಯಾರ್ಥಿ ಸಂಘದ ಸಾಮಾನ್ಯ ಚಟುವಟಿಕೆಗಳ ಅಧ್ಯಕ್ಷರಾದ ಡಾ. ಅಶ್ವಿನಿ,  ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.೨೦೨೧ ೨೨ನೇ ಸಾಲಿನ “ಮಂಥನ” ಎಂಬ ಕಾಲೇಜ್ ಮ್ಯಾಗಜಿನ್ ಹಾಗೂ ಕಾಲೇಜಿನ ವಿದ್ಯಾರ್ಥಿ ಚಟುವಟಿಕೆಯ ನ್ಯೂಸ್ ಲೆಟರ್ ಆದಂತ “ಜೆಜೆಎಂಎಂಸಿ ಪಲ್ಸ್” ಕೂಡ ಬಿಡುಗಡೆ ಮಾಡಲಾಯಿತು.ಕಾಲೇಜಿನ ಡೀನ್ ಡಾ.ಮಂಜುನಾಥ್ ಆಲೂರವರು  ಸಂಘ ಉದ್ದೇಶಿಸಿ ನಿಮ್ಮ ಸಂಘದ ಎಲ್ಲಾ ಕಾರ‍್ಯಗಳು ಯಶಸ್ವಿಯಾಗಲಿ, ವಿದ್ಯಾರ್ಥಿ ಬೆಳವಣಿಗೆಗೆ ಪೂರಕವಾದ ಕಾರ‍್ಯಗಳನ್ನು ಆಯೋಜಿಸಿ ನಾವು ಸದಾ ನಿಮ್ಮೊಂದಿಗೆ ಇರುತ್ತೇವೆ ಎಂದರು.ಕಾಲೇಜಿನ ಪ್ರಾಂಶುಪಾಲರಾದ ಡಾ.ಎಸ್ ಬಿ ಮುರುಗೇಶ್  ವಿದ್ಯಾರ್ಥಿ ಸಂಘದ ಪದಾಧಿಕಾರಿಗಳನ್ನು ಅಭಿನಂದಿಸಿ ಹೊಸ ಹಾಗೂ ವಿಶಿಷ್ಟವಾದ ಯೋಜನೆಗಳನ್ನು ರೂಪಿಸಿ ಉತ್ತಮವಾದ ಕಾರ‍್ಯಗಳನ್ನು ಮಾಡಿ,  ಪಠ್ಯ ಹಾಗೂ ಪಠ್ಯೇತರ ಚಟುವಟಿಕೆಗಳಲ್ಲಿ ಎಲ್ಲರೂ ತಮ್ಮನ್ನು ತೊಡಗಿಸಿಕೊಳ್ಳುವ ಹಾಗೆ ಮಾಡುವುದು ನಿಮ್ಮ ಕರ್ತವ್ಯ, ನಾವು ಸದಾ ನಿಮ್ಮ ಹಿಂದೆ ಇರುತ್ತೇವೆ ಎಂದರು.ಡಾ ಸಂತೋಷ್ ಕುಮಾರ್ ಎಂ ಪುಸ್ತಕದ ಬಗ್ಗೆ ಮಾತನಾಡುತ್ತಾ ಎಲ್ಲಾ ವಿದ್ಯಾರ್ಥಿಗಳು ಇಂತಹ ಒಂದು ಒಳ್ಳೆಯ ಪುಸ್ತಕದ ಪ್ರಯೋಜನವನ್ನು ಪಡೆದು ನಿಮ್ಮ ಕೌಶಲ್ಯವನ್ನು ಹೆಚ್ಚಿಸಿಕೊಳ್ಳಿ ಹೆಚ್ಚು  ಸಂಶೋಧನೆ ಗಳನ್ನು ಮಾಡಿ ಎಂದು ಹರಸಿದರು.