ಜೆ.ಕೆ.ಮೈದಾನದಲ್ಲಿ ಪಟಾಕಿ ಮಳಿಗೆ ತೆರೆಯಲು ಭರದ ಸಿದ್ಧತೆ

ಮೈಸೂರು, ನ.8: ಕೊರೊನಾ ನಡುವೆಯೇ ಬೆಳಕಿನ ಹಬ್ಬ ದೀಪಾವಳಿಗೆ ಎಲ್ಲೆಡೆ ಸಿದ್ಧತೆ ನಡೆಸಿಕೊಳ್ಳಲಾಗುತ್ತಿದ್ದು, ನಗರದ ಜೆ.ಕೆ.ಮೈದಾನದಲ್ಲಿ ಪಟಾಕಿ ಮಳಿಗೆ ತೆರೆಯಲು ಸಕಲ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ.
ಕೊರೊನಾ ಹಿನ್ನೆಲೆಯಲ್ಲಿ ಮೊದಲಿಗೆ ಸರ್ಕಾರ ಎಲ್ಲ ರೀತೀಯ ಪಟಾಕಿ ಮಾರಾಟವನ್ನು ನಿಷೇಧಿಸಿತ್ತು. ಬಳಿಕ ಹಸಿರು ಪಟಾಕಿ ಬಳಕೆಗೆ ಮಾತ್ರ ಅನುಮತಿ ನೀಡಿದೆ. ಇದರಿಂದ ಪಟಾಕಿ ವ್ಯಾಪಾರಸ್ಥರು ಮಾರಾಟಕ್ಕೆ ಸಿದ್ಧತೆ ನಡೆಸುತ್ತಿದ್ದಾರೆ.
ಅದರಂತೆ ನಗರದ ಜೆ.ಕೆ.ಮೈದಾನದಲ್ಲಿ ವ್ಯಾಪಾರಸ್ಥರು ಈಗಾಗಲೇ ಪಟಾಕಿ ಮಳಿಗೆಗಳನ್ನು ಹಾಕುತ್ತಿದ್ದಾರೆ. ನಗರದ 8 ಕಡೆ ಪಟಾಕಿ ಮಳಿಗೆಗಳನ್ನು ಹಾಕಲು ಅನುಮತಿ ನೀಡಲಾಗಿದ್ದು, ಒಟ್ಟು 42 ಮಳಿಗೆಗಳನ್ನು ಹಾಕಲಾಗುತ್ತಿದೆ. ಜೆ.ಕೆ.ಮೈದಾನದಲ್ಲಿ 12 ಮಳಿಗೆಗಳನ್ನು ಹಾಕಲಾಗುತ್ತಿದೆ. ಅಲ್ಲದೆ, ವಿವೇಕಾನಂದ ಸರ್ಕಲ್, ಆಂದೋಲನ ಸರ್ಕಲ್, ಹೆಬ್ಬಾಳ್ ನಲ್ಲಿ ಎಸ್ ಬಿಐ ಬ್ಯಾಂಕ್ ಬಳಿಯ ಮಾರ್ಕೆಟ್ ನಲ್ಲಿ, ಸಿದ್ದಾರ್ಥ ಲೇಔಟ್, ಬಂದಂತಮ್ಮ ದೇವಸ್ಥಾನ ಬಳಿ, ಶ್ರೀರಾಂಪುರದಲ್ಲಿ ಭ್ರಮಾರಂಭ ಕಲ್ಯಾಣ ಮಂಟಪ ಬಳಿ, ದೊಡ್ಡ ಕೆರೆ ಮೈದಾನ (ವಸ್ತು ಪ್ರದರ್ಶನದ ವಾಹನ ನಿಲುಗಡೆ ಜಾಗ)ದಲ್ಲಿ ಮಳಿಗೆಗಳನ್ನು ಹಾಕಲಾಗುತ್ತಿದೆ. ಸೋಮವಾರ ಅಥವಾ ಮಂಗಳವಾರದಿಂದ ಇಲ್ಲಿ ಬೆಳಿಗ್ಗೆ 10 ರಿಂದ ರಾತ್ರಿ 9 ಗಂಟೆಯವರೆಗೆ ಪಟಾಕಿ ಖರೀದಿಸಬಹುದಾಗಿದೆ.
ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಮೈಸೂರು ಪಟಾಕಿ ವರ್ತಕರ ಸಂಘದ ಕಾರ್ಯದರ್ಶಿ ಸುರೇಶ್ ಅವರು, ಹಸಿರು ಪಟಾಕಿ ಮಾರಾಟಕ್ಕೆ ಸರ್ಕಾರ ಅನುಮತಿ ನೀಡಿದೆ. ಅದರಂತೆ ಪಟಾಕಿ ಮಾರಾಟಕ್ಕೆ ತಯಾರಿ ನಡೆಸುತ್ತಿದ್ದೇವೆ. ಮೊದಲು ನಗರದ 7 ಕಡೆ 82 ಮಳಿಗೆಗಳನ್ನು ಹಾಕಲು ಅನುಮತಿ ನೀಡಲಾಗುತ್ತಿತ್ತು. ಜೆ.ಕೆ.ಮೈದಾನದಲ್ಲಿ 17 ಮಳಿಗೆಗಳನ್ನು ಹಾಕುತ್ತಿದ್ದೇವು. ಆದರೆ ಕೊರೊನಾ ಹಿನ್ನೆಲೆಯಲ್ಲಿ ಮಳಿಗೆಗಳ ಸಂಖ್ಯೆಯನ್ನು ಕಡಿಮೆ ಮಾಡಲಾಗಿದೆ. ಇದೀಗ ನಗರದಲ್ಲಿ 42 ಮಳಿಗೆಗಳಿಗೆ, ಜೆ.ಕೆ.ಮೈದಾನದಲ್ಲಿ 12 ಮಳಿಗೆಗಳನ್ನು ಹಾಕಲು ಅನುಮತಿ ನೀಡಲಾಗಿದೆ ಎಂದರು.
ಮುಂದುವರಿದು ಮಾತನಾಡಿದ ಅವರು, ಎಲ್ಲ ಮಳಿಗೆಗಳಲ್ಲೂ ಕೊರೊನಾ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಗೇಟ್ ಮುಂಭಾಗ ನಾಲ್ಕು ಮಂದಿಯನ್ನು ಥರ್ಮಲ್ ಸ್ಕ್ರೀನಿಂಗ್ ತಪಾಸಣೆ ಮಾಡಲು ನಿಯೋಜಿಸಲಾಗುವುದು. ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಬಗ್ಗೆ ಮಾಹಿತಿ ನೀಡುವುದರ ಜೊತೆಗೆ ಪ್ರತಿ ಮಳಿಗೆಗಳಲ್ಲೂ ಸ್ಯಾನಿಟೈಸರ್ ಇಡಲು ವ್ಯವಸ್ಥೆ ಮಾಡಲಾಗಿದೆ ಎಂದರು.
ಕೊರೊನಾಯಿಂದಾಗಿ ಈ ಬಾರಿ ಹೆಚ್ಚಿನ ವ್ಯಾಪಾರವಾಗುವುದಿಲ್ಲ. ಆದರೆ ಶೇ.50ರಷ್ಟು ವ್ಯಾಪಾರವಾಗಬಹುದೆಂಬ ನಿರೀಕ್ಷೆಯಿದೆ. ಪ್ರತಿಯೊಬ್ಬರು 5 ಲಕ್ಷ ರೂ. ಬಂಡಾವಳ ಹಾಕಿರುತ್ತಾರೆ. ಸದ್ಯದ ಪರಿಸ್ಥಿತಿಯಲ್ಲಿ ಹಾಕಿರುವ ಬಂಡವಾಳ ಬಂದರೆ ಸಾಕಾಗಿರುತ್ತದೆ. ಹೀಗಾಗಿ ಪಟಾಕಿಯ ದರದಲ್ಲಿ ಯಾವುದೇ ಹೆಚ್ಚಳ ಮಾಡಿಲ್ಲ ಎಂದು ಮಾಹಿತಿ ನೀಡಿದರು.