ಜೆ. ಕುಮಾರಸ್ವಾಮಿಯಿಂದ ಅಧಿಕಾರ ದುರುಪಯೋಗ- ಚರ್ಚೆ

ಹನೂರು:ಏ:07: ಕಳೆದ 13-14 ವರ್ಷಗಳಿಂದ ಕೊಳ್ಳೇಗಾಲ ತಾಲ್ಲೂಕು ಸರ್ವೇಯರ್ ಆಗಿ ಕಾರ್ಯನಿರ್ವಹಿಸಿ ಮುಂಬಡ್ತಿ ಪಡೆದು 6 ವರ್ಷದಿಂದ ಹನೂರು ತಾಲ್ಲೂಕು ಸರ್ವೇ ಸೂಪರ್‍ವೈಸರ್ ಆಗಿ ಕಾರ್ಯನಿರ್ವಹಿಸಿ ಬರೊಬ್ಬರಿ 19 ರಿಂದ 20 ವರ್ಷಗಳ ಕಾಲ ಒಂದಡೆ ಜಾಂಡ ಹೂಡಿರುವ ಜೆ.ಕುಮಾರಸ್ವಾಮಿ ಹಲವಾರು ಅಕ್ರಮಗಳಿಗೆ ಸಾಥ್ ನೀಡುತ್ತಾ ಅಧಿಕಾರ ದುರ್ಬಳಕೆ ಮಾಡಿಕೊಂಡು ಬಂದಿದ್ದಾರೆ ಎಂದು ಸಾರ್ವಜನಿಕ ವಲಯದಲ್ಲಿ ವ್ಯಾಪಕವಾದ ಚರ್ಚೆ ನಡೆಯುತ್ತಿದೆ.
ಈ ಅಧಿಕಾರಿ ಬರೊಬ್ಬರಿ 19 ವರ್ಷಗಳಿಂದ ಕೊಳ್ಳೇಗಾಲ ತಾಲ್ಲೂಕು ಆಫಿಸ್‍ನಲ್ಲಿ ಜಾಂಡ ಹೂರಿದ್ದು, ತನ್ನ ಪ್ರಭಾವ ಬಳಸಿ ಎತ್ತವೂ ಕದಲದೇ ಮಧ್ಯವರ್ತಿಗಳ ಮೂಲಕ ದೊಡ್ಡ ದಂಧೆಯನ್ನೇ ಮಾಡುತ್ತಿದ್ದಾನೆ ಎಂಬ ಮಾತುಗಳು ಬಲವಾಗಿ ಕೇಳಿ ಬರುತ್ತಿವೆ. ಹನೂರು ಮತ್ತು ಕೊಳ್ಳೇಗಾಲ ಕಛೇರಿಗಳನ್ನು ತನ್ನ ಅಧಿನದಲ್ಲಿ ಇಟ್ಟುಕೊಂಡವನಂತೆ ಸರ್ವಾಧಿಕಾರಿ ಧೋರಣೆಯನ್ನು ಅನುಸರಿಸುತ್ತಿದ್ದು, ಈತನಿಗೆ ತಿಳಿದಿರುವ ದಲ್ಲಾಳಿಗಳಿಂದ ಮಾತ್ರ ಕೆಲಸ ಆಗುತ್ತದೆ. ಸಾಮಾನ್ಯ ರೈತರು ಮತ್ತು ಸಾರ್ವಜನಿಕರಿಗೆ ಯಾವುದೇ ಕೆಲಸ ಕಾರ್ಯಗಳನ್ನು ಮಾಡಿಕೊಡದೇ ಅಕ್ರಮ ಜಮೀನುಗಳ ದಂಧೆಕೋರರಿಗೆ ಇವನೇ ಬಿಗ್‍ಬಾಸ್ ಆಗಿದ್ದು ಈತನ ಭ್ರಷ್ಟತನದಿಂದ ಅದೆಷ್ಟೋ ಕುಟುಂಬಗಳು ಬೀದಿಗೆ ಬೀಳುವಂತಾಗಿದೆ. ತಹಶೀಲ್ದಾರ್ ಮಾತು ಕೂಡ ಈತನಿಗೆ ಲೆಕ್ಕಕ್ಕೆ ಇಲ್ಲವಂತೆ ಆಗಿದ್ದು, ಆನೆ ನಡೆದದ್ದೇ ದಾರಿ ಎಂಬಂತೆ ಮಧ್ಯವರ್ತಿಗಳು ಹಾಗೂ ಪೊಲೀಸರ ಸಹಕಾರ ಪಡೆದು ಅನೇಕ ಮುಗ್ಧ ಮತ್ತು ಅಮಾಯಕ ರೈತಾಪಿ ವರ್ಗ ಹಾಗೂ ಜನ ಸಾಮಾನ್ಯರ ಬದುಕು ಮೂರಬಟ್ಟೆ ಆಗುವಂತೆ ಆಗಿದೆ. ಈತನ ಕಾರ್ಯವೈಖರಿ ಬಗ್ಗೆ ಹಿರಿಯ ಅಧಿಕಾರಿಗಳು ತನಿಖೆ ನಡೆಸಿದರೆ ಅಥಾವ ಸಾರ್ವಜನಿಕರಿಂದ ಮಾಹಿತಿ ಪಡೆದರೆ ಈತ ಎಂತಹ ಅಸಾಮಿ ಎಂದು ತಿಳಿಯುತ್ತದೆ ಎಂದು ಪ್ರಜ್ಞಾವಂತ ನಾಗರೀಕರು ಮಾತನಾಡಿಕೊಳ್ಳುತ್ತಿದ್ದಾರೆ.
ಸದ್ಯ ಸಂಜೆವಾಣಿ ಪತ್ರಿಕೆಗೆ ಇಲ್ಲಿಯವರೆಗೆ ದೊರಕಿರುವ ಮಾಹಿತಿ ಪ್ರಕಾರ ಜೆ.ಕುಮಾರಸ್ವಾಮಿ ಹೇಳಿ ಕೇಳಿ ಸರ್ಕಾರಿ ನೌಕರಿಗೆ ಸೇರಿದ್ದೇ ಅಂಗವಿಕಲ ಕೋಟದಡಿ ಎನ್ನಲಾಗಿದ್ದು, 1996 ರಂದು ಹುಣಸೂರು ಭೂ ಮಾಪನ ಇಲಾಖೆಯಲ್ಲಿ ತಾಲ್ಲೂಕು ಸರ್ವೇಯರ್ ಆಗಿ ಮೊದಲ ಅವಧಿಗೆ ಕೆಲಸ ನಿರ್ವಹಿಸಿದ್ದೇ ಹೆಚ್ಚು ಎನ್ನಲಾಗಿದ್ದು, ತದ ನಂತರ 2000 ಇಸವಿಯಲ್ಲಿ ಕೊಳ್ಳೇಗಾಲ ಭೂ ದಾಖಲೆಗಳ ಸಹಾಯಕ ನಿರ್ದೇಶಕರ ಕಛೇರಿಗೆ ತಾಲ್ಲೂಕು ಸರ್ವೇಯರ್ ಆಗಿ ಬಂದು, ನಂತರ ಶಿವಮೊಗ್ಗ ಜಿಲ್ಲೆಯ ಸಾಗರ ಭೂ ದಾಖಲೆಗಳ ಸಹಾಯಕ ಕಛೇರಿಗೆ ವರ್ಗಾವಣೆಗೊಂಡ ಈತ ಅಲ್ಲಿ ಕಾರ್ಯನಿರ್ವಹಿಸಿದ್ದೇ ಕಡಿಮೆ ಎನ್ನಲಾಗಿದ್ದು, ಕೆಲಸಕ್ಕೆ ಹಾಜರಾಗದೇ ತನ್ನ ಪ್ರಭಾವ ಬಳಸಿ ಮತ್ತೇ ಕೊಳ್ಳೇಗಾಲಕ್ಕೆ ಬಂದ ಮಹಾಶಯ ಬರೊಬ್ಬರಿ 13 ವರ್ಷಗಳಿಂದ ಬೇರು ಬಿಟ್ಟ ಮರದಂತೆ ಎತ್ತವೂ ಕದಲದೇ ತನ್ನದೇ ಆದ ದಲ್ಲಾಳಿಗಳು, ಭ್ರಷ್ಟರನ್ನು ಇಟ್ಟುಕೊಂಡು ಭ್ರಷ್ಟಚಾರದಲ್ಲಿ ಇಲ್ಲಿಯವರೆಗೆ ತೊಡಗಿದ್ದಾನೆ ಎನ್ನಲಾಗುವ ಮಾತುಗಳು ಕೇಳಿ ಬರುತ್ತಿದೆ. ಕಳೆದ 6 ವರ್ಷಗಳ ಹಿಂದೆ ತಾಲ್ಲೂಕು ಸರ್ವೇಯರ್ ಆಗಿದ್ದ ಅಸಾಮಿ ಬಡ್ತಿ ಪಡೆದು ಸೂಪರ್‍ವೈಸರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾನೆ. ಈತ ಅಂಗವಿಕಲ ಕೋಟದಡಿ ಕೆಲಸಕ್ಕೆ ಸೇರಿದ್ದ ದಿನಗಳಿಂದ ಇಲ್ಲಿವರೆಗೆ ಈತ ನಡೆಸಿರುವ ಭ್ರಷ್ಟಚಾರದ ಇಂಚಿಂಚು ಅಕ್ರಮಗಳನ್ನು ಬಯಲಿಗೆಳೆಯಲು ಸಂಜೆವಾಣಿ ಪತ್ರಿಕೆ ಮುಂದಾಗಿದ್ದು, ಮುಂದಿನ ದಿನಗಳಲ್ಲಿ ಈತನ ಸಾಚಾತನದ ಬಗ್ಗೆ ದಾಖಲೆಗಳ ಸಮೇತ ಪತ್ರಿಕೆ ವರದಿ ಪ್ರಕಟಿಸಲಿದೆ.