ಜೆಸಿಬಿ ಪಕ್ಷಗಳಿಗೆ ಪೊರಕೆಯಿಂದ ತಕ್ಕ ಪಾಠ ಕಲಿಸಿ

ರಾಯಚೂರು,ಮಾ.೨೬- ಭ್ರಷ್ಟಾಚಾರದಲ್ಲಿ ಮುಳುಗಿ ತೇಲುತ್ತಿರುವ ಮೂರು ಪಕ್ಷಗಳಾದ ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಪಕ್ಷಗಳ ಅಭ್ಯರ್ಥಿಗಳು ಮತಯಾಚನೆಗೆ ಬಂದರೆ ಅವರಿಗೆ ಪೊರಕೆಯಿಂದ ತಕ್ಕ ಉತ್ತರ ನೀಡಿ ಭ್ರಷ್ಟರಹಿತ ಆಮ್ ಆದ್ಮಿ ಪಕ್ಷಕ್ಕೆ ಆಶೀರ್ವಾದ ಮಾಡಿ ಎಂದು ಖ್ಯಾತ ಹಿರಿಯ ನಟ ಹಾಗೂ ಎಎಪಿ ಪಕ್ಷದ ರಾಜ್ಯ ಪ್ರಚಾರ ಸಮಿತಿ ಅಧ್ಯಕ್ಷರಾದ ಮುಖ್ಯಮಂತ್ರಿ ಚಂದ್ರು ಅವರು ಜನಸಮೂಹಕ್ಕೆ ಕರೆ ನೀಡಿದರು.
ಅವರು ರಾಯಚೂರು ಗ್ರಾಮೀಣ ಮತ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಗಿಲ್ಲೆಸುಗೂರು ಗ್ರಾಮದಲ್ಲಿ ಪಕ್ಷದ ಬೃಹತ್ ಕಾರ್ಯಕರ್ತರ ಸಮಾವೇಶವನ್ನು ಜ್ಯೋತಿ ಬೆಳಗಿಸುವುದರ ಮೂಲಕ ಉದ್ಘಾಟಿಸಿ ನೆರೆದ ಜನ ಸಮೂಹವನ್ನು ಉದ್ದೇಶಿಸಿ ಮಾತನಾಡಿದರು.
ಎರಡು ದಿನಗಳ ಹಿಂದೆ ನಡೆದ ಘಟನೆ ಮಾಧ್ಯಮಗಳಲ್ಲಿ ಹರಿದಾಡುತ್ತಿದ್ದು, ಗ್ರಾಮೀಣ ಶಾಸಕರಾದ ದದ್ದಲ್ ಬಸನಗೌಡ ಅವರು ಒಂದು ಕಾಮಗಾರಿಗೆ ಲಂಚ ಪಡೆದಿದ್ದಾರೆಂದು ಜಗಜಾಹಿರವಾಗಿದೆ. ಆದರೆ ಅಂತ ಭ್ರಷ್ಟ ಶಾಸಕರಿಗೆ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯೆಂದು ಟಿಕೇಟ್ ಘೋಷಣೆ ಮಾಡಲಾಗಿದ್ದು, ಕಾಂಗ್ರೆಸ್ ಭ್ರಷ್ಟರಿಗೆ ಮಣೆ ಹಾಕುತ್ತಿದೆ. ಕೋಟಿ ಕೋಟಿ ಲೂಟಿ ಹೊಡೆದವರಿಗೆ ೩ ಪಕ್ಷಗಳಲ್ಲಿ ಟಿಕೇಟ್ ದೊರೆಯುತ್ತಿದೆ. ಇಂತವರು ಮತ್ತೆ ಶಾಸಕರಾಗಿ ಅರಸಿ ಬಂದರೆ ಲೂಟಿ, ಭ್ರಷ್ಟಾಚಾರ ಇನ್ನಷ್ಟು ತಾಂಡವಾಡುತ್ತದೆ. ಆದ್ದರಿಂದ ನಿಮ್ಮ ಮತ ಕೊಡುವಾಗ ಭ್ರಷ್ಟರನ್ನು ದೂರವಿಟ್ಟು ಯೋಗ್ಯ ಅಭ್ಯರ್ಥಿಯನ್ನು ಆಯ್ಕೆ ಮಾಡಿ ಮತ ನೀಡಿ ಎಂದು ಹೇಳಿದರು.
ಮೂರು ಪಕ್ಷಗಳಲ್ಲಿ ಕುಟುಂಬ ರಾಜಕಾಣ ನಿರಂತರ ನಡೆದಿದೆ. ಇದಕ್ಕೆ ಕಡಿವಾಣ ಹಾಕಬೇಕು. ಬೇರೆಯವರಿಗೆ ಅವಕಾಶ ನೀಡಬೇಕು. ಪ್ರತಿ ಸಲ ಬದಲಾವಣೆ ತರಬೇಕು ಎಂದ ಅವರು ಈ ಬಾರಿ ಆಮ್ ಆದ್ಮಿ ಪಕ್ಷ ಅಧಿಕಾರಕ್ಕೆ ಬಂದರೆ ರಾಜ್ಯದ ರೈತರ ಸಾಲಮನ್ನಾ ಹಾಗೂ ದೆಹಲಿ, ಪಂಜಾಬ್ ರಾಜ್ಯಗಳಲ್ಲಿ ನೀಡುತ್ತಿರುವ ಹತ್ತು ಹಲವು ಉಚಿತ ಸೌಲಭ್ಯಗಳನ್ನು ಇಲ್ಲಿಯೂ ಸಹ ನೀಡುತ್ತೇವೆಂದು ಮುಖ್ಯಮಂತ್ರಿ ಚಂದ್ರು ಅವರು ಹೇಳಿದರು.
ಪಕ್ಷದ ರಾಜ್ಯ ಸಂಘಟನಾ ಉಪಾಧ್ಯಕ್ಷರಾದ ವಿಜಯ ಶರ್ಮಾ ಅವರು ಮಾತನಾಡಿದರು.