ಜೆಸಿಎಂ ಜತೆ ಸೋಮಣ್ಣ ಚರ್ಚೆ: ತಣ್ಣಗಾದ ಅತೃಪ್ತಿ

ತುಮಕೂರು, ಮಾ. ೨೭- ಹೊರಗಿನವರಿಗೆ ಟಿಕೆಟ್ ನೀಡಬಾರದು ಎಂದು ಬಹಿರಂಗವಾಗಿಯೇ ವಿರೋಧಿಸುತ್ತಲೇ ಇದ್ದ ಹಾಗೂ ಲೋಕಸಭಾ ಚುನಾವಣೆಗೆ ಬಿಜೆಪಿ ಟಿಕೆಟ್ ಕೈ ತಪ್ಪಿದ್ದರಿಂದ ಅಸಮಾಧಾನಗೊಂಡಿದ್ದ ಮಾಜಿ ಸಚಿವ ಜೆ.ಸಿ. ಮಾಧುಸ್ವಾಮಿ ಅವರ ಚಿ.ನಾ.ಹಳ್ಳಿ ತಾಲ್ಲೂಕು ಜೆ.ಸಿ.ಪುರ ನಿವಾಸಕ್ಕೆ ಬಿಜೆಪಿ ಅಭ್ಯರ್ಥಿ ಹಾಗೂ ಮಾಜಿ ಸಚಿವ ವಿ. ಸೋಮಣ್ಣ ಅವರು ಭೇಟಿ ನೀಡಿ ಸುಮಾರು ಎರಡು ಗಂಟೆಗೂ ಅಧಿಕ ಕಾಲ ಚರ್ಚೆ ನಡೆಸಿದರು.
ಬಿಜೆಪಿ ಅಭ್ಯರ್ಥಿಯಾಗಿ ಸೋಮಣ್ಣ ಅವರು ತುಮಕೂರು ಕ್ಷೇತ್ರದಿಂದ ಸ್ಪರ್ಧಿಸುವುದನ್ನು ತೀವ್ರವಾಗಿ ವಿರೋಧಿಸಿದ್ದ ಮಾಧುಸ್ವಾಮಿ ಅವರು ಟಿಕೆಟ್ ಘೋಷಣೆ ಆರಂಭದಲ್ಲಿ ಸೋಮಣ್ಣ ತಮ್ಮ ಮನೆಗೆ ಭೇಟಿ ನೀಡುವುದಕ್ಕೂ ವಿರೋಧಿಸಿ, ತಮಗೆ ಟಿಕೆಟ್ ತಪ್ಪಿಸಿದರೆಂದು ಯಡಿಯೂರಪ್ಪ ಅವರ ವಿರುದ್ಧ ಹರಿಹಾಯ್ದಿದ್ದರು. ನಂತರ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ತುರುವೇಕೆರೆಯ ಮಾಜಿ ಶಾಸಕ ಮಸಾಲೆ ಜಯರಾಂ ಅವರ ತೋಟದ ಮನೆಗೆ ಆಗಮಿಸಿ ಮಾಧುಸ್ವಾಮಿ ಅವರನ್ನು ಅಲ್ಲಿಗೆ ಕರೆಸಿಕೊಂಡು ಮಾಧುಸ್ವಾಮಿ ಜತೆ ಚರ್ಚೆ ನಡೆಸಿ, ಪಕ್ಷ ಬಿಡದಂತೆ ಮನವೊಲಿಸಿದ್ದರು.
ಯಡಿಯೂರಪ್ಪನವರು ಮಾತುಕತೆ ನಡೆಸಿದರೂ ಚುನಾವಣೆಯಲ್ಲಿ ಸೋಮಣ್ಣ ಅವರಿಗೆ ಬೆಂಬಲ ನೀಡುವ ಕುರಿತು ಯಾವುದೇ ತೀರ್ಮಾನ ಪ್ರಕಟಿಸಿದೆ ಇದ್ದ ಮಾಧುಸ್ವಾಮಿ ಅವರನ್ನು ಬಿಜೆಪಿ ಅಭ್ಯರ್ಥಿ ಸೋಮಣ್ಣ ಅವರು ನಿನ್ನೆ ಸಂಜೆ ಖುದ್ದಾಗಿ ಭೇಟಿಯಾಗಿ ಅಭ್ಯರ್ಥಿಯಾಗಿರುವುದರಲ್ಲಿ ನನ್ನ ತಪ್ಪಿಲ್ಲ. ಹೈಕಮಾಂಡ್ ಸೂಚನೆಯಂತೆ ಕಣಕ್ಕಿಳಿದಿರುವೆ. ವೈಯುಕ್ತಿಕವಾಗಿ ನನ್ನ ನಿಮ್ಮ ನಡುವೆ ಯಾವುದೇ ಭಿನ್ನಮತವಿಲ್ಲ. ಈ ಚುನಾವಣೆಯನ್ನು ಬೆಂಬಲಿಸಿ ಎಂದು ಮನವಿ ಮಾಡಿದರು ಎನ್ನಲಾಗಿದೆ. ಈ ವೇಳೆ ಮಾಧುಸ್ವಾಮಿ ಅವರು ಸಹ ಸೋಮಣ್ಣ ಅವರ ಬಳಿ ತಮಗೆ ಟಿಕೆಟ್, ಸ್ಪರ್ಧೆಗೆ ಅಣಿಯಾಗಿ ಎಂದು ಹೇಳಿ ಕಡೆಗೆ ಟಿಕೆಟ್ ತಪ್ಪಿಸಿದ ನೋವನ್ನು ತೋಡಿಕೊಂಡರು ಎಂದು ಹೇಳಲಾಗಿದೆ.ಈ ಸಂದರ್ಭದಲ್ಲಿ ಮಾಜಿ ಸಚಿವ ಬಿ.ಸಿ. ನಾಗೇಶ್ ಸಹ ಇದ್ದರು ಎಂದು ತಿಳಿದು ಬಂದಿದೆ.ಏ. ೧ಕ್ಕೆ ನಾಮಪತ್ರ ಸಿದ್ದಗಂಗಾ ಮಠದ ಹಿರಿಯ ಶ್ರೀಗಳಾದ ಲಿಂಗೈಕ್ಯ ಡಾ. ಶ್ರೀ ಶಿವಕುಮಾರ ಸ್ವಾಮೀಜಿ ಅವರ ಜನ್ಮದಿನವಾದ ಏ. ೧ ರಂದು ಸಾಂಕೇತಿಕವಾಗಿ ಬಿಜೆಪಿ ಅಭ್ಯರ್ಥಿ ಸೋಮಣ್ಣ ಅವರು ಉಮೇದುವಾರಿಕೆ ಸಲ್ಲಿಸುತ್ತಿದ್ದು, ಏ. ೩ ರಂದು ಬಿಜೆಪಿ-ಜೆಡಿಎಸ್ ಮೈತ್ರಿ ನಾಯಕರೊಂದಿಗೆ ಬೃಹತ್ ರೋಡ್ ಶೋ ರ?ಯಾಲಿ ಮೂಲಕ ತುಮಕೂರು ಕ್ಷೇತ್ರದ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಲಿದ್ದಾರೆ ಎಂದು ತಿಳಿದು ಬಂದಿದೆ.