ಜೆಸಿಂಡಾ ಸ್ಥಾನ ತುಂಬಲಿರುವ ಹಿಪ್ಕಿನ್ಸ್

ಕ್ರೈಸ್ಟ್‌ಚರ್ಚ್, ಜ.೨೧- ಫೆಬ್ರವರಿ ತಿಂಗಳಲ್ಲಿ ನ್ಯೂಜಿಲ್ಯಾಂಡ್ ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ನೀಡಲಿರುವ ಜೆಸಿಂಡಾ ಆರ್ಡನ್ ಸ್ಥಾನಕ್ಕೆ ಇದೀಗ ಲೇಬರ್ ಪಕ್ಷದ ಸಂಸದ, ಪ್ರಸ್ತುತ ಪೊಲೀಸ್, ಶಿಕ್ಷಣ ಮತ್ತು ಸಾರ್ವಜನಿಕ ಸೇವೆಯ ಸಚಿವರಾಗಿ ಕಾರ್ಯನಿರ್ವಹಿಸುತ್ತಿರುವ ಕ್ರಿಸ್ ಹಿಪ್ಕಿನ್ಸ್ ಅವರು ನೇಮಕಗೊಳ್ಳಲಿದ್ದಾರೆ. ಹಿಪ್ಕಿನ್ಸ್ ಅವರು ಪಕ್ಷದ ನಾಯಕತ್ವಕ್ಕೆ ಏಕೈಕ ಸಂಸದರಾಗಿ ನಾಮನಿರ್ದೇಶಿತರಾಗಿರುವುದು ಕೂಡ ಅಚ್ಚರಿಯ ಸಂಗತಿಯಾಗಿದೆ.
೨೦೦೮ರಲ್ಲಿ ಮೊದಲ ಬಾರಿಗೆ ಸಂಸದರಾಗಿ ಆಯ್ಕೆಯಾಗಿದ್ದ ಹಿಪ್ಕಿನ್ಸ್ (೪೪) ಅವರು, ೨೦೨೦ರ ನವೆಂಬರ್‌ನಲ್ಲಿ ಕೋವಿಡ್-೧೯ ಸಚಿವರಾಗಿ ನೇಮಕಗೊಂಡಿದ್ದರು. ಇನ್ನು ಮುಂದಿನ ಅಕ್ಟೋಬರ್ ತಿಂಗಳಲ್ಲಿ ನ್ಯೂಜಿಲ್ಯಾಂಡ್‌ನಲ್ಲಿ ಸಾರ್ವತ್ರಿಕ ಚುನಾವಣೆ ನಡೆಯಲಿದ್ದು, ಹಾಗಾಗಿ ಹಿಪ್ಕಿನ್ಸ್ ಅವರು ಎಷ್ಟು ಸಮಯ ಪ್ರಧಾನಿಯಾಗಿ ಮುಂದುವರೆಯಲಿದ್ದಾರೆ ಎಂಬುದು ಕೂಡ ಅನಿಶ್ಚಿತತೆಯಿಂದ ಕೂಡಿದೆ. ಅನ್ನು ಪ್ರಧಾನಿಯಾಗಿ ಆಯ್ಕೆಯಾಗುವುದಕ್ಕೂ ಮುನ್ನ ಹಿಪ್ಕಿನ್ಸ್ ಅವರನ್ನು ಭಾನುವಾರ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್‌ನಲ್ಲಿ ಲೇಬರ್ ಪಾರ್ಟಿಯಿಂದ ಔಪಚಾರಿಕವಾಗಿ ಅನುಮೋದಿಸಬೇಕಾಗಿದೆ. ಒಂದು ವೇಳೆ ಇಲ್ಲಿ ಹಿಪ್ಕಿನ್ಸ್ ಅವರು ಸಂಸದರ ಬೆಂಬಲವನ್ನು ಪಡೆದುಕೊಂಡರೆ ಮಾತ್ರ ಪ್ರಸ್ತುತ ಪ್ರಧಾನಿಯಾಗಿ ಕಾರ್ಯನಿರ್ವಹಿಸುತ್ತಿರುವ ಜೆಸಿಂಡಾ ಆರ್ಡನ್ ಅವರು ಮೂರನೇ ಕಿಂಗ್ ಚಾರ್ಲ್ಸ್ ಪರವಾಗಿ ಕಾರ್ಯನಿರ್ವಹಿಸುತ್ತಿರುವ ಗವರ್ನರ್ ಜನರಲ್‌ಗೆ ಔಪಚಾರಿಕವಾಗಿ ರಾಜೀನಾಮೆ ಸಲ್ಲಿಸಲಿದ್ದಾರೆ. ಇನ್ನು ಮುಂದಿನ ಪ್ರಧಾನಿಯಾಗಿ ಆಯ್ಕೆಯಾಗಲಿರುವ ಹಿಪ್ಕಿನ್ಸ್ ಮೇಲೆ ಹೆಚ್ಚಿನ ಜವಾಬ್ದಾರಿ ಇದ್ದು, ಅಲ್ಲದೆ ದೊಡ್ಡ ಸವಾಲು ಕೂಡ ಇದೆ. ಸದ್ಯ ನ್ಯೂಜಿಲ್ಯಾಂಡ್‌ನಲ್ಲಿ ಹಣದುಬ್ಬರ ಮತ್ತು ಹೆಚ್ಚುತ್ತಿರುವ ಸಾಮಾಜಿಕ ಅಸಮಾನತೆಯು ಅಭಿಪ್ರಾಯ ಸಂಗ್ರಹಗಳ ಪ್ರಕಾರ ಜೆಸಿಂಡಾ ಆರ್ಡನ್ ಅವರ ಜನಪ್ರಿಯತೆ ಸಾರ್ವಕಾಲಿಕ ಮಟ್ಟಕ್ಕೆ ಕುಸಿದಿದ್ದು, ಹಾಗಾಗಿ ಮುಂದೆ ಹಿಪ್ಕಿನ್ಸ್ ಅವರು ಈ ಎಲ್ಲಾ ಅಡೆತಡೆಗಳನ್ನು ಮೀರಿ ಹೇಗೆ ಕಾರ್ಯನಿರ್ವಹಿಸಲಿದ್ದಾರೆ ಎಂದು ನೋಡಬೇಕಿದೆ. ಅದೂ ಅಲ್ಲದೆ ಸದ್ಯ ದೇಶದಲ್ಲಿ ಲೇಬರ್ ಪಕ್ಷದ ಬಗೆಗಿನ ನಾಗರಿಕರ ಒಲವು ಕೂಡ ಸಾರ್ವಕಾಲಿಕ ಮಟ್ಟಕ್ಕೆ ಕುಸಿದಿದೆ ಎನ್ನಲಾಗಿದೆ. ಒಟ್ಟಿನಲ್ಲಿ ಮುಂದೆ ಆಯ್ಕೆಯಾಗಲಿರುವ ಹಿಪ್ಕಿನ್ಸ್ ಮೇಲೆ ದೊಡ್ಡ ಸವಾಲು ಇರುವುದಂತೂ ನಿಜ.