ಜೆನ್ಸ್ -ಬೈಡೆನ್ ಭೇಟಿ ಮಹತ್ವದ ಚರ್ಚೆ

ವಾಷಿಂಗ್ಟನ್, ಜೂ.೧೪- ಒಂದೆಡೆ ಉಕ್ರೇನ್ ಸೇನಾಪಡೆ ತನ್ನ ದಾಳಿಯನ್ನು ತೀವ್ರಗೊಳಿಸಿರುವ ನಡುವೆಯೇ ಇದೀಗ ನ್ಯಾಟೋದ ಪ್ರಧಾನ ಕಾರ್ಯದರ್ಶಿ ಜೆನ್ಸ್ ಸ್ಟೋಲ್ಟೆನ್‌ಬರ್ಗ್ ಅವರು ನಿನ್ನೆ ಅಮೆರಿಕಾ ಅಧ್ಯಕ್ಷ ಜೋ ಬೈಡೆನ್‌ರನ್ನು ಶ್ವೇತಭವನದಲ್ಲಿ ಭೇಟಿಯಾಗಿ, ಮಹತ್ವದ ಮಾತುಕತೆ ನಡೆಸಿದ್ದಾರೆ.
ಲಿಥುವೇನಿಯನ್ ರಾಜಧಾನಿ ವಿಲ್ನಿಯಸ್‌ನಲ್ಲಿ ಜುಲೈನ ನ್ಯಾಟೋ ಶೃಂಗಸಭೆ ನಡೆಯಲಿದ್ದು, ಇದಕ್ಕೂ ಮುಂಚಿತವಾಗಿ ಸ್ಟೋಲ್ಟೆನ್‌ಬರ್ಗ್ ಅವರು ಬೈಡೆನ್ ಮಾತುಕತೆ ನಡೆಸಿದ್ದಾರೆ. ಈ ವೇಳೆ ಪ್ರತಿಕ್ರಿಯೆ ನೀಡಿರುವ ಸ್ಟೋಲ್ಟೆನ್‌ಬರ್ಗ್, ರಷ್ಯಾ ವಿರುದ್ಧದ ಯುದ್ದದಲ್ಲಿ ಸದ್ಯ ಉಕ್ರೇನ್ ಸೇನಾಪಡೆ ಮಹತ್ವದ ಮುನ್ನಡೆ ಸಾಧಿಸುತ್ತಿದೆ. ಉಕ್ರೇನಿಯನ್ನರು ರಷ್ಯಾ ವಶದಲ್ಲಿರುವ ಹೆಚ್ಚು ಭೂಮಿಯನ್ನು ಮುಕ್ತಗೊಳಿಸಲು ಸಮರ್ಥರಾಗಿದ್ದಾರೆ. ಈ ಮೂಲಕ ಒಂದು ವೇಳೆ ಮಾತುಕತೆ ನಡೆದರೆ ಉಕ್ರೇನ್ ಸಹಜವಾಗಿಯೇ ಮೇಲುಗೈ ಹೊಂದಿದ್ದಾರೆ. ಉಕ್ರೇನಿಗರಿಗೆ ತಮ್ಮ ನೆಲವನ್ನು ರಕ್ಷಿಸುವ ಎಲ್ಲಾ ಅಧಿಕಾರ ಇದೆ. ಉಕ್ರೇನ್‌ನ ಮೇಲೆ ರಷ್ಯಾದ ಕ್ರೂರ ಆಕ್ರಮಣವು ಕೇವಲ ಉಕ್ರೇನ್‌ನ ಮೇಲೆ ಮಾತ್ರವಲ್ಲ, ನಮ್ಮ ಪ್ರಮುಖ ಮೌಲ್ಯಗಳ ಮತ್ತು ಎಲ್ಲೆಡೆ ಮುಕ್ತ ಜನರ ಮೇಲೆ ದಾಳಿಯಾಗಿದೆ. ಆದ್ದರಿಂದ ರಷ್ಯಾ ಅಧ್ಯಕ್ಷ ಪುಟಿನ್ ಈ ಯುದ್ಧವನ್ನು ಗೆಲ್ಲಬಾರದು. ಏಕೆಂದರೆ ಅದು ಕೇವಲ ಉಕ್ರೇನಿಯನ್ನರಿಗೆ ದುರಂತವಾಗುವುದಿಲ್ಲ. ಆದರೆ ಇದು ಜಗತ್ತನ್ನು ಹೆಚ್ಚು ಅಪಾಯಕಾರಿಯಾಗಿಸುತ್ತದೆ ಎಂದು ತಿಳಿಸಿದ್ದಾರೆ. ಇದೇ ವೇಳೆ ಪ್ರತಿಕ್ರಿಯೆ ನೀಡಿರುವ ಬೈಡೆನ್, ನಾವು ನ್ಯಾಟೋದ ಪೂರ್ವ ಭಾಗವನ್ನು ಹೆಚ್ಚು ಬಲಪಡಿಸಿದ್ದೇವೆ. ನ್ಯಾಟೋ ಸೇರಿದ ಪ್ರತೀ ಇಂಚನ್ನು ನಾವು ರಕ್ಷಿಸುತ್ತೇವೆ ಎಂಬುದನ್ನು ನಾನು ಪುನರುಚ್ಛರಿಸುತ್ತೇನೆ. ನ್ಯಾಟೋದ ೫ನೇ ವಿಧಿಗೆ ಅಮೆರಿಕಾ ಬದ್ಧವಾಗಿದೆ. ಮುಂದಿನ ತಿಂಗಳು ಲಿಥುವೇನಿಯಾದಲ್ಲಿ ನಡೆಯಲಿರುವ ನ್ಯಾಟೋ ಶೃಂಗಸಭೆಯಲ್ಲಿ ನಾವು ಆ ಆವೇಗವನ್ನು ನಿರ್ಮಿಸಲಿದ್ದೇವೆ ಎಂದು ಬೈಡೆನ್ ತಿಳಿಸಿದ್ದಾರೆ. ಕೆಲ ದಿನಗಳ ಹಿಂದೆಯಷ್ಟೇ ಅಮೆರಿಕಾವು ಉಕ್ರೇನ್‌ಗೆ ಸುಮಾರು ೩೨೫ ದಶಲಕ್ಷ ಡಾಲರ್ ಮೌಲ್ಯದ ಶಸ್ತ್ರಾಸ್ತ್ರಗಳ ಪೂರೈಕೆಯನ್ನು ಘೋಷಿಸಿತ್ತು.