ಜೆರುಸಲೆಂ (ಇಸ್ರೇಲ್), ಜು.೩- ಒಂದೆಡೆ ಪ್ಯಾರಿಸ್‌ನಲ್ಲಿ ಹಿಂಸಾಚಾರ ಬುಗಿಲೆದ್ದಿದ್ದರೆ ಮತ್ತೊಂದೆಡೆ ಇಸ್ರೇಲ್ ಹಾಗೂ ಪ್ಯಾಲೆಸ್ತೀನ್ ನಡುವಿನ ಸಂಘರ್ಘ ಕೂಡ ತಾರಕಕ್ಕೇರಿದೆ. ವೆಸ್ಟ್ ಬ್ಯಾಂಕ್‌ನ ಉತ್ತರದಲ್ಲಿನ ಜೆನಿನ್ ಶಿಬಿರದ ಮೇಲೆ ಇಸ್ರೇಲ್ ಸೇನಾಪಡೆ ಭಾರೀ ಸೇನಾ ಕಾರ್ಯಾಚರಣೆ ನಡೆಸಿದೆ. ದಾಳಿಯಲ್ಲಿ ಕನಿಷ್ಠ ಮೂವರು ಪ್ಯಾಲೆಸ್ಟೀನಿಯನ್ನರು ಸಾವನ್ನಪ್ಪಿದ್ದಾರೆ ಮತ್ತು ೧೨ ಮಂದಿ ಗಾಯಗೊಂಡಿದ್ದಾರೆ ಎಂದು ಪ್ಯಾಲೇಸ್ಟಿನಿಯನ್ ಆರೋಗ್ಯ ಸಚಿವಾಲಯ ತಿಳಿಸಿದೆ.
ಜೆನಿನ್‌ನಲ್ಲಿ ಅಗ್ರರ ಅಡಗುತಾಣಗಳ ಮೇಲೆ ನಾವು ದಾಳಿ ನಡೆಸಿದ್ದೇವೆ ಎಂದು ಇಸ್ರೇಲಿ ಡಿಫೆನ್ಸ್ ಫೋರ್ಸ್ (ಐಡಿಎಫ್) ತಿಳಿಸಿದೆ. ಇನ್ನು ದಾಳಿಗೆ ಸಂಬಂಧಿಸಿದ ವಾಯು ದಾಳಿಗಳ ವಿಡಿಯೋ ಹಾಗೂ ಫೊಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಭಯೋತ್ಪಾದಕರು ಜೆನಿನ್ ಕ್ಯಾಂಪ್ ಅನ್ನು ಅಡಗುತಾಣವಾಗಿ ಬಳಸಿಕೊಂಡು ನಾಗರಿಕರಿಗೆ ಹಾನಿ ಮಾಡುವುದನ್ನು ಮುಂದುವರೆಸಿದಾಗ ನಾವು ಸುಮ್ಮನಿರುವುದಿಲ್ಲ. ಜೆನಿನ್‌ನಲ್ಲಿ ಉಗ್ರರು ಬಲಿಷ್ಠವಾಗಿ ಝಂಡಾ ಹೂಡಿದ್ದು, ಇಲ್ಲಿಂದಲೇ ದಾಳಿ ನಡೆಸುತ್ತಿದ್ದರು ಎಂದು ಐಡಿಎಫ್ ತಿಳಿಸಿದೆ. ಇನ್ನು ಪ್ಯಾಲೇಸ್ಟಿನಿಯನ್ ಗುಂಪುಗಳಾದ ಫತಾಹ್, ಹಮಾಸ್ ಮತ್ತು ಇಸ್ಲಾಮಿಕ್ ಜಿಹಾದ್‌ನ ಶಸ್ತ್ರಸಜ್ಜಿತ ಪುರುಷರನ್ನು ಒಳಗೊಂಡಿರುವ ಸಂಘಟನೆಯಾಗಿರುವ ಜೆನಿನ್ ಬೆಟಾಲಿಯನ್ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ನಾವು ಕೊನೆಯ ಉಸಿರು ಮತ್ತು ಗುಂಡಿನವರೆಗೂ ಆಕ್ರಮಣ ಪಡೆಗಳ ವಿರುದ್ಧ ಹೋರಾಡುತ್ತೇವೆ ಮತ್ತು ನಾವು ಎಲ್ಲಾ ಬಣಗಳು ಮತ್ತು ಮಿಲಿಟರಿ ರಚನೆಗಳಿಂದ ಒಟ್ಟಾಗಿ ಕೆಲಸ ಮಾಡುತ್ತೇವೆ ಎಂದು ತಿಳಿಸಿದೆ.