ತಿ.ನರಸೀಪುರ: ಏ.26:- ವರುಣಾ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿಯ ಸ್ಪರ್ಧೆಯಿಂದ ಕಾಂಗ್ರೆಸ್ ಮತ್ತು ಬಿಜೆಪಿ ಅಭ್ಯರ್ಥಿಗಳಲ್ಲಿ ನಡುಕ ಹುಟ್ಟಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದರು.
ಪಟ್ಟಣದ ಅಧಿಚುಂಚನಗಿರಿ ಕಲ್ಯಾಣ ಮಂಟಪದ ಆವರಣದಲ್ಲಿ ಹಮ್ಮಿಕೊಂಡಿದ್ದ ವರುಣಾ ಕ್ಷೇತ್ರದ ಅಹಿಂದ ಕಾರ್ಯಕರ್ತರ ಸಮಾವೇಶವನ್ನು ಉದ್ದೇಶಿಸಿ ವರುಣಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಎಲ್.ಎನ್.ಭಾರತೀಶಂಕರ್ ಪರ ಪ್ರಚಾರ ನಡೆಸಿದರು.ವರುಣಾದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಅಭ್ಯರ್ಥಿಗಳು ಗೆಲುವು ನಮ್ಮದೇ ಎಂದು ಮಾಧ್ಯಮಗಳ ಮುಂದೆ ಹೇಳುತ್ತಿದ್ದಾರೆ.ಲೆಕ್ಕಾಚಾರದಲ್ಲಿ ಜೆಡಿಎಸ್ ಪಕ್ಷ ಕ್ಷೇತ್ರವನ್ನು ಗೆಲ್ಲಲಿದೆ.ವರುಣಾದಲ್ಲಿ ಜೆಡಿಎಸ್ ಪಕ್ಷದ ಅಭ್ಯರ್ಥಿ ಸ್ಪರ್ಧೆ ಮಾಡಿರುವುದು ಯಾವುದೇ ಪಕ್ಷಕ್ಕೆ ತೊಂದರೆ ಮಾಡುವುದಕ್ಕೆ ಅಲ್ಲ,ತಿ.ನರಸೀಪುರ ಕ್ಷೇತ್ರದಲ್ಲಿ ಶಾಸಕರಾಗಿದ್ದ ಎಲ್.ಎನ್.ಭಾರತೀಶಂಕರ್ ಅವರನ್ನು ಜೆಡಿಎಸ್ ಅಭ್ಯರ್ಥಿಯಾಗಿ ಕಣಕ್ಕಿಳಿಸಲಾಗಿದೆ.ಅವರಿಗೆ ಕ್ಷೇತ್ರದ ಜನತೆ ಚಿರಪರಿಚಿತರು.ಹಾಗಾಗಿ ಅವರ ಹಳೆಯ ವರ್ಚಸ್ಸು ಮತ್ತೆ ಈ ಚುನಾವಣೆ ಸಂದರ್ಭದಲ್ಲಿ ಸಹಕಾರಿ ಬರಲಿದೆ ಎಂದರು.
ಜೆಡಿಎಸ್ ಪಕ್ಷ ರಾಜ್ಯದ ಸರ್ವತೋಮುಖ ಅಭಿವೃದ್ಧಿಯ ಕನಸು ಹೊಂದಿದೆ.ಪಂಚರತ್ನ ಯೋಜನೆಗಳ ಮುಖೇನ ಗ್ರಾಮೀಣ ಜನರ ಆರ್ಥಿಕ ಸಬಲೀಕರಣ,ಉತ್ತಮ ಅರೋಗ್ಯ ಸೇವೆ ,ರೈತ ವ್ಯವಸಾಯಕ್ಕೆ ಉತ್ತೇಜನ ,ವಸತಿ ನಿರ್ಮಾಣ ,ಮಹಿಳಾ ಸಬಲೀಕರಣ,ವೃತ್ತಿಪರ ಶಿಕ್ಷಣ ನೀಡುವ ಮೂಲಕ ಕಲ್ಯಾಣ ರಾಜ್ಯದ ಕನಸು ಹೊತ್ತಿದೆ .ಹಾಗಾಗಿ ರಾಜ್ಯದಲ್ಲಿ ಸ್ಪರ್ಧಿಸಿರುವ ಎಲ್ಲ ಜೆಡಿಎಸ್ ಅಭ್ಯರ್ಥಿಗಳಿಗೆ ಮತ ನೀಡಬೇಕು ಎಂದು ಮನವಿ ಮಾಡಿದರು.
ಈ ಬಾರಿ ಜೆಡಿಎಸ್ ಪಕ್ಷಕ್ಕೆ ಅಧಿಕಾರಕ್ಕಾಗಿ ರಾಜ್ಯದ ಜನರಲ್ಲಿ ಮೊರೆಯಿಡುತ್ತಿದೆ.ಇದು ಪಕ್ಷ ಮತ್ತು ಪಕ್ಷದ ನಾಯಕರ ಅಭಿವೃದ್ಧಿಗಲ್ಲ.ಬದಲಾಗಿ ಸಾಲಗಾರರಾಗಿರುವ ರೈತ, ಉದ್ಯೋಗವಿಲ್ಲದ ಯುವಕ, ವಸತಿಹೀನ ಮಹಿಳೆ, ಉತ್ತಮ ಶಿಕ್ಷಣ ವಂಚಿತ ಗ್ರಾಮೀಣ ಬಡ ಮಕ್ಕಳು,ರೋಗಪೀಡಿತ ಗ್ರಾಮೀಣ ಜನತೆಯ ಕಲ್ಯಾಣಕ್ಕಾಗಿ ಅಧಿಕಾರ ಕೇಳುತ್ತಿದೆ ಎಂದರು.
ಸಾಲ ಮಾಡಿದ್ದೆ ಸಾಧನೆ:
ಬಿಜೆಪಿ ಸರ್ಕಾರ 6.65 ಲಕ್ಷ ಕೋಟಿ ಸಾಲ ಮಾಡಿದ್ದು,ಇದು ಬಿಜೆಪಿ ಸರ್ಕಾರ ಸಾಲ ಅಲ್ಲ .ಈ ಸಾಲ ಕರ್ನಾಟಕ ರಾಜ್ಯದ ಪ್ರತಿಯೊಬ್ಬ ನಾಗರಿಕನ ಸಾಲ ಆಗಿದೆ.ಬಿಜೆಪಿ ಸರ್ಕಾರ ಮಾತಿನಲ್ಲೆ ಸ್ವರ್ಗ ತೋರಿಸುತ್ತದೆ. ಸಾಧನೆ ಶೂನ್ಯ.ಯಾವುದೇ ಜನಪರ ಯೋಜನೆಗಳ ಜಾರಿ ಮಾಡಿಲ್ಲ.ಇದು ಬೂಟಾಟಿಕೆ ಸರ್ಕಾರ ಎಂದರು.
ವರುಣಾ ಕ್ಷೇತ್ರ ಅಭ್ಯರ್ಥಿ ಎಲ್.ಎನ್.ಭಾರತೀಶಂಕರ್ ಮಾತನಾಡಿ, ಬಿಜೆಪಿ ಅಭ್ಯರ್ಥಿ ವಿ.ಸೋಮಣ್ಣ ಕ್ಷೇತ್ರಕ್ಕೆ ಹೊಸಬರು.ಅವರಿಗೆ ಕ್ಷೇತ್ರದ ಜನತೆಯ ನಾಡಿಮಿಡಿತ ಗೊತ್ತಿಲ್ಲ. ನಗರಪ್ರದೇಶದ ರಾಜಕೀಯ ಹಳ್ಳಿಗಳಲ್ಲಿ ನಡೆಯುವುದಿಲ್ಲ.ಹಾಗಾಗಿ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಮತ್ತು ನನ್ನ ನಡುವೆ ನೇರ ಹಣಾಹಣಿ ಇದೆ ಎಂದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಜೆಡಿಎಸ್ ಅಧ್ಯಕ್ಷ ನರಸಿಂಹಮೂರ್ತಿ ,ಮಾಜಿ ಶಾಸಕ ಚಿಕ್ಕಣ್ಣ, ಕೊಳ್ಳೇಗಾಲ ಅಭ್ಯರ್ಥಿ ಪುಟ್ಟಸ್ವಾಮಿ, ರಾಜ್ಯ ಉಪಾಧ್ಯಕ್ಷ ಎಸ್.ಎನ್.ಸಿದ್ದಾರ್ಥ, ಮಾಜಿ ಮೇಯರ್ ಎಂ.ಜಿ.ರವಿಶಂಕರ್, ಮೈಮುಲ್ ನಿರ್ದೇಶಕ ಉಮಾಶಂಕರ್,ಮಾಜಿ ಪ.ಪಂ.ಅಧ್ಯಕ್ಷ ವೀರೇಶ್, ಎಚ್.ಕೆ.ರಾಮು, ಕೆಂಪಯ್ಯನಹುಂಡಿ ಶಿವಪ್ರಸಾದ್, ಬಾಲಕೃಷ್ಣ, ಚನ್ನೇಗೌಡ, ಶಿವಮೂರ್ತಿ ಇತರರು ಹಾಜರಿದ್ದರು.