ಜೆಡಿಎಸ್ ಸೇರಲು ಇಬ್ರಾಹಿಂ ನಿರ್ಧಾರ

ಬೆಂಗಳೂರು, ಜ. ೬- ಕೇಂದ್ರದ ಮಾಜಿ ಸಚಿವ ಹಾಗೂ ಕಾಂಗ್ರೆಸ್‌ನ ವಿಧಾನ ಪರಿಷತ್ ಸದಸ್ಯ ಸಿ.ಎಂ. ಇಬ್ರಾಹಿಂ ಕಾಂಗ್ರೆಸ್ ತೊರೆದು ಜೆಡಿಎಸ್ ಸೇರಲು ನಿರ್ಧರಿಸಿದ್ದಾರೆ.
ಶಾಸಕರ ಭವನದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ತೊರೆದು ಜೆಡಿಎಸ್ ಸೇರುವ ಇಂಗಿತವನ್ನು ವ್ಯಕ್ತಪಡಿಸಿದರು.
ಯಾವುದೋ ಸ್ವಂತ ಉದ್ದೇಶಕ್ಕೆ ಜೆಡಿಎಸ್ ಸೇರುತ್ತಿಲ್ಲ. ರಾಜ್ಯದ ಜನರ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಜೆಡಿಎಸ್ ಸೇರ್ಪಡೆಯಾಗುವ ತೀರ್ಮಾನ ಮಾಡಿರುವುದಾಗಿ ಅವರು ಹೇಳಿದರು.
ಜನತಾ ಪರಿವಾರವನ್ನು ಒಗ್ಗೂಡಿಸುವ ಇಂಗಿತ ವ್ಯಕ್ತಪಡಿಸಿದ ಅವರು, ಜನತಾ ಪರಿವಾರ ಒಂದಾಗಬೇಕು. ಹಾಗಾಗಿ ಬಿಹಾರದ ಮುಖ್ಯಮಂತ್ರಿ ನಿತೀಶ್‌ಕುಮಾರ್ ಅವರನ್ನು ಭೇಟಿ ಮಾಡುತ್ತೇನೆ. ಹಾಗೆಯೇ ತೇಜಸ್ವಿಯಾದವ್, ಶರದ್ ಯಾದವ್ ಅವರ ಜತೆಯೂ ಮಾತನಾಡುತ್ತೇನೆ ಎಂದರು.
ಸದ್ಯದಲ್ಲೇ ಬಿಹಾರ್‌ಗೆ ತೆರಳುತ್ತಿರುವುದಾಗಿಯೂ ಹೇಳಿದ ಅವರು, ಯಾವಾಗ ಏನಾಗಬೇಕೋ ಆಗುತ್ತದೆ. ಸಿದ್ದರಾಮಯ್ಯ ಮುಖ್ಯಮಂತ್ರಿಯಾಗುತ್ತಾರೆ ಎಂದು ಯಾರಾದರೂ ಅಂದು ಕೊಂಡಿದ್ದರಾ ಎಂದು ಹೇಳಿದರು.
ದೇವರ ಅನುಗ್ರಹದಿಂದ ನಾನು ಮಾಡಿದ್ದೆಲ್ಲ ಒಳ್ಳೆಯದೆ ಆಗಿದೆ. ಹಾಗಾಗಿ ಜನತಾ ಪರಿವಾರವನ್ನು ಒಗ್ಗೂಡಿಸುವ ಕೆಲಸದಲ್ಲೂ ಒಳ್ಳೆಯದೇ ಆಗಲಿದೆ ಎಂದರು.
ದೇಶ, ರಾಜ್ಯಕ್ಕೆ ಏನಾದರೂ ಆಗಬೇಕು. ಎಲ್ಲರಿಗೂ ಒಳ್ಳೆಯದಾಗಬೇಕು ಎಂಬ ಕಾರಣದಿಂದ ಜೆಡಿಎಸ್ ಸೇರುವ ತೀರ್ಮಾನ ಮಾಡಿದ್ದೇನೆ. ಅಲ್ಲಿಗೆ ಹೋಗಿ ನನಗೇನು ಆಗಬೇಕು ಅಂತ ಇಲ್ಲ ಎಂದರು.
ಮುಖ್ಯಮಂತ್ರಿ ಯಡಿಯೂರಪ್ಪ ಮತ್ತು ಪ್ರಧಾನಿ ಮೋದಿಯವರ ಟೆಂಟ್‌ಗೂ ಬೆಂಕಿ ಬಿದ್ದಿದೆ. ಎಂದೋ ಒಂದು ದಿನ ಒಂದೊಂದು ಕಡೆ ಓಡಿ ಹೋಗುತ್ತಾರೆ ಎಂದು ವ್ಯಂಗ್ಯವಾಡಿದರು.
ಲವ್‌ಜಿಹಾದ್ ತಡೆ ಕಾಯ್ದೆಯ ಬಗ್ಗೆ ಕಿಡಿಕಾರಿದ ಅವರು, ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಗೆ ಮದುವೆ ಆಗಿದೆಯಾ, ಅವರಿಗೆ ಏನಾಗಬೇಕು ಎಂದು ಅವರು ಹೇಳಿದರು.