ಜೆಡಿಎಸ್ ಸದಸ್ಯರ ಅಪಹರಣ ಸುಳ್ಳು

ನಗರದ ಅಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನ
ಸಿಂಧನೂರು.ಅ.30- ನಗರಸಭೆಯ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ್ದು, ಪಕ್ಷ ಬೇದ ಮರೆತು ‌ಎಲ್ಲಾ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಅಧಿಕಾರಿಗಳ ಸಹಕಾರದಿಂದ ನಗರದ ಅಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ನೂತನ ನಗರಸಭೆ ಅಧ್ಯಕ್ಷರಾದ ಮಲ್ಲಿಕಾರ್ಜುನ ಪಾಟೀಲ್ ತಿಳಿಸಿದರು.
ನಗರಸಭೆಯ ಅಧ್ಯಕ್ಷರ ಕೊಠಡಿಯಲ್ಲಿ ಗುರುವಾರ ಅಧಿಕಾರ ಸ್ವೀಕರಿಸಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ನಗರದ ಜನತೆ, ಕಾಂಗ್ರೆಸ್ ಪಕ್ಷ ಹಾಗೂ ಎಲ್ಲಾ ಸದಸ್ಯರು ನನ್ನ ಮೇಲೆ ವಿಶ್ವಾಸವಿಟ್ಟು ಅಧಿಕಾರ ನೀಡಿದ್ದು ಅವರ ವಿಶ್ವಾಸಕ್ಕೆ ಚ್ಯುತಿ ಬಾರದಂತೆ ನಡೆದುಕೊಳ್ಳುತ್ತೇನೆಂದರು. ನಗರಸಭೆಯಲ್ಲಿ ಎಷ್ಟು ಅನುದಾನ ಇದೆ. ಎಷ್ಟು ಬಾಕಿ ಇದೆ ಎಂದು ಸುದ್ದಿಗಾರರು ಕೇಳಿದ ಪ್ರಶ್ನೆಗೆ ಪ್ರಸ್ತುತ 54 ಲಕ್ಷ ನಿಧಿ‌ ಇದ್ದು ಪೌರ ಕಾರ್ಮಿಕರ ವೇತನ ಸೇರಿದಂತೆ ಒಟ್ಟು 6 ಕೋಟಿ ಬಾಕಿ ಇದ್ದು, ನಗರಸಭೆ ಅನುದಾನ ಹಾಗೂ ಶಾಸಕರ ಅನುದಾನ ಬಳಸಿಕೊಂಡು ನಗರಸಭೆ ಪೌರ ಕಾರ್ಮಿಕರು ಹಾಗೂ ನೌಕರರ ಸಂಬಳ ಸೇರಿದಂತೆ ಮುಂದೆ ಯಾವುದೇ ರೀತಿಯ ಸಮಸ್ಯೆ ಆಗದಂತೆ ಅನುದಾನ ಬಳಸಿಕೊಂಡು ಪ್ರತಿ ತಿಂಗಳು ವೇತನ ಕೊಡುವುದಾಗಿ ಭರವಸೆ ನೀಡಿದರು.
ನಗರದ ಕೆಲವು ವಾರ್ಡಗಳಲ್ಲಿ ರಸ್ತೆಗಳು ಸಾರ್ವಜನಿಕರು ತಿರುಗಾಡಲು ಬಾರದಂತೆ ಹದಗೆಟ್ಟು ಹೋಗಿವೆ. ಅಲ್ಲದೆ ಕುಡಿಯುವ ನೀರು ಸಮಯಕ್ಕೆ ಸರಿಯಾಗಿ ಬರುತ್ತಿಲ್ಲ ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸುತ್ತ, ಸಮಸ್ಯೆಗಳನ್ನು ಮುಂದಿನ ದಿನಗಳಲ್ಲಿ ಸರಿಪಡಿಸಿ, ಸಾರ್ವಜನಿಕರಿಗೆ ತೊಂದರೆಯಾಗದಂತೆ ನೋಡಿಕೊಳ್ಳುತ್ತೇನೆಂದರು.
ಫಾರಂ ನಂ.3 ಹಾಗೂ ಮುಟೇಶನ್ ಮತ್ತು ಜನನ, ಮರಣ ಪ್ರಮಾಣ ಪತ್ರಗಳು, ಕಟ್ಟಡ ಪರವಾನಿಗೆ ಸೇರಿದಂತೆ ಇನ್ನಿತರ ಕೆಲಸಗಳ ವಿಳಂಬದ ಬಗ್ಗೆ ಕೇಳಿದ ಪ್ರಶ್ನೆಗೆ ಈ ಸಮಸ್ಯೆಗಳು ಬಹಳ ದಿನಗಳಿಂದ ಇದ್ದು ಇದರಿಂದ ಸಾರ್ವಜನಿಕರಿಗೆ ತುಂಬಾ ತೊಂದರೆಯಾಗಿರುವುದನ್ನು ನಾನು ಮನಗಂಡಿದ್ದೇನೆ ಅಧಿಕಾರಿಗಳ ಸಭೆ ಕರೆದು ಸಾರ್ವಜನಿಕರಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ನಿಗದಿತ ಸಮಯದಲ್ಲಿ ಸರಳವಾಗಿ, ಶೀಘ್ರದಲ್ಲಿ, ಜನರ ಕೆಲಸಗಳನ್ನು ಮಾಡಿಸಿ ಕೊಡುತ್ತೇನೆಂದರು.
ಜೆಡಿಎಸ್ ನಗರಸಭೆ ಸದಸ್ಯರಾದ ವೀರೇಶ ಹಟ್ಟಿಯನ್ನು ಕಾಂಗ್ರೆಸ್ ಪಕ್ಷದವರು ಅಪಹರಣ ಮಾಡಿದ್ದಾರೆಂದು ಶಾಸಕ ವೆಂಕಟರಾವ್ ನಾಡಗೌಡ ಹೇಳಿದ್ದು ಸತ್ಯಕ್ಕೆ ದೂರವಾಗಿದೆ. ನಗರಸಭೆಯಲ್ಲಿ ಅಧಿಕಾರಕ್ಕೆ ಬರಲು ಕಾಂಗ್ರೆಸ್ ಪಕ್ಷಕ್ಕೆ ನಿಚ್ಚಳ ಬಹುಮತವಿದ್ದು, ನಾವು ಅಪಹರಣ ಮಾಡುವ ಪ್ರಶ್ನೆಯೆ ಬರುವುದಿಲ್ಲ. ವಿನಾಕಾರಣ ಶಾಸಕರು‌ ಕಾಂಗ್ರೆಸ್ ಪಕ್ಷ ಹಾಗೂ ಮುಖಂಡರ ಮೇಲೆ ಆರೋಪ ಮಾಡಿದ್ದಾರೆ. ನೋಡಿ ಜೆಡಿಎಸ್ ಸದಸ್ಯ ವೀರೇಶ ಹಟ್ಟಿ ಇಲ್ಲಿಯೆ ಇದ್ದಾರೆ. ಅವರನ್ನೆ ಕೇಳಿ ಎಂದು ನಗರಸಭೆ ಉಪಾಧ್ಯಕ್ಷರಾದ ಮುರ್ತುಜಾ ಹುಸೇನ್ ಶಾಸಕರ ಹೇಳಿಕೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.
ಜೆಡಿಎಸ್ ಶಾಸಕ ಹಾಗೂ ರಾಜ್ಯದಲ್ಲಿ ಬಿಜೆಪಿ ಸರ್ಕಾರವಿದ್ದು ಅಭಿವೃದ್ಧಿಗೆ ಅನುದಾನ ಸಿಗುವುದೆ ಎನ್ನುವ ಪ್ರಶ್ನೆಗೆ ಶಾಸಕ ವೆಂಕಟರಾವ್ ನಾಡಗೌಡರನ್ನು ಭೇಟಿ ಮಾಡಿ, ಅವರ ಮನವೊಲಿಸಿ ಶಾಸಕರ ಅನುದಾನ ಹಾಗೂ ನಗರಸಭೆಯ ಅನುದಾನ ಬಳಸಿಕೊಂಡು ನಾನು ಕಾಂಗ್ರೆಸ್ ಪಕ್ಷದ ಅಧ್ಯಕ್ಷನಾಗಿದ್ದರೂ ಸಹ ನಗರಾಭಿವೃದ್ಧಿಗೆ ಹಾಗೂ ಜನರ ಕೆಲಸದ ವಿಷಯ ಬಂದಾಗ ಪಕ್ಷ ಬೇದ ಮರೆತು ಅನುದಾನ ತಂದು ನಗರದ ಅಭಿವೃದ್ಧಿ ಮಾಡುವ ಜೊತೆಗೆ ಸುಂದರ ನಗರವನ್ನಾಗಿ ಮಾಡಲು ಪ್ರಾಮಾಣಿಕ ಹಾಗೂ ಭಗಿರಥ ಪ್ರಯತ್ನ ಮಾಡುತ್ತೇನೆಂದು ನೂತನ ಅಧ್ಯಕ್ಷರು ವಿಶ್ವಾಸ ವ್ಯಕ್ತಪಡಿಸಿದರು.
24/7 ನಿರಂತರ ಕುಡಿಯುವ ನೀರಿನ ಬಗ್ಗೆ ಕೇಳಿದ ಪ್ರಶ್ನೆಗೆ ಜಾಕ್ ವೇಲ್ ಕಾಮಗಾರಿ ಮುಗಿದಿದ್ದು, ವಿದ್ಯುತ್‌ನ ಕೆಲಸ ಮುಗಿದ ಮೇಲೆ ಮುಂದಿನ ತಿಂಗಳ ಮೊದಲ ಅಥವಾ ಎರಡನೆ ವಾರದಲ್ಲಿ 15 ವಾರ್ಡಗಳಿಗೆ ನಿರಂತರ ನೀರು ಬಿಟ್ಟು ಶಾಂಪಲ್ ನೋಡಲಾಗುವುದು. ಎಚ್.ಕೆ.ಆರ್.ಡಿ.ಬಿ ಅನುದಾನದಲ್ಲಿ 1 ರಿಂದ 11 ವಾರ್ಡಗಳಲ್ಲಿ ಸಿಸಿ ರಸ್ತೆ ನಿರ್ಮಿಸಲಾಗಿದ್ದು, ಕಚ್ಚಾ ಲೇ ಔಟ್ ಬಿಟ್ಟು ಉಳಿದೆಲ್ಲಾ ನಗರದ ರಸ್ತೆಗಳು ಉತ್ತಮವಾಗಿವೆ ಎಂದು ನಗರಸಭೆ ಪೌರಾಯುಕ್ತ ಆರ್. ವಿರುಪಾಕ್ಷಿ ಮೂರ್ತಿ ಹೇಳಿದರು.
ನಗರಸಭೆ ಸದಸ್ಯರಾದ ಮುನೀರ್ ಪಾಷಾ, ಕೆ.ರಾಜಶೇಖರ, ಶಬ್ಬಿರ್, ಆಲಂ ಬಾಷಾ, ಶರಣಪ್ಪ ಉಪ್ಪಲದೊಡ್ಡಿ, ಹೆಚ್.ಬಾಷಾ, ಜಿಲಾನಿ ಪಾಷಾ, ವೀರೇಶ ಹಟ್ಟಿ, ಸಣ್ಣ ವೀರಭದ್ರಪ್ಪ ಕುರುಕುಂದಿ, ನಗರಸಭೆಯ ನಾಮ ನಿರ್ದೇಶನ ಸದಸ್ಯರಾದ ಮಲ್ಲಿಕಾರ್ಜುನ, ಕೆ.ಪ್ರಶಾಂತ, ರವಿ ಕುಮಾರ ಉಪ್ಪಾರ, ಸುನೀತಾ ಶ್ರೀ ರಾಮ ಮೂರ್ತಿ, ಅನಿತಾ ನಾಗರಾಜ ಅಂಗಡಿ ಸೇರಿದಂತೆ ನಗರಸಭೆಯ ಕಾಂಗ್ರೆಸ್ ಮತ್ತು ಜೆಡಿಎಸ್ ಮಾಜಿ ಸದಸ್ಯರಾದ ವೆಂಕಟೇಶ ಬಂಡಿ, ಪ್ರಭುರಾಜ ಇನ್ನಿತರ ಸದಸ್ಯರು ಹಾಗೂ ನಗರಸಭೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು.