ಜೆಡಿಎಸ್ ಮುಗಿಸುವುದು ಅಸಾಧ್ಯ ಗೌಡರ ಗುಡುಗು

ಬೆಂಗಳೂರು, ಡಿ. ೨೬- ರಾಜ್ಯದಲ್ಲಿ ಜೆಡಿಎಸ್ ಪಕ್ಷವನ್ನು ಯಾರಿಂದಲೂ ಅಲುಗಾಡಿಸುವುದಕ್ಕಾಗಲೀ, ಮುಗಿಸುವುದಕ್ಕಾಗಲೀ ಸಾಧ್ಯವಿಲ್ಲ ಎಂದು ಗುಡುಗಿರುವ ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಹೆಚ್.ಡಿ. ದೇವೇಗೌಡ ಅವರು, ಜೆಡಿಎಸ್ ಪಕ್ಷ ಆಟಕ್ಕುಂಟು, ಲೆಕ್ಕಕ್ಕಿಲ್ಲ ಎಂಬ ಕಾಂಗ್ರೆಸ್ ನಾಯಕರ ಹೇಳಿಕೆ ವಿರುದ್ಧ ಕಿಡಿಕಾರಿದ್ದಾರೆ.
ಪಕ್ಷದ ಕಚೇರಿಯಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಾದೇಶಿಕ ಪಕ್ಷ ಉಳಿಸಿಕೊಳ್ಳುವುದು ಎಷ್ಟು ಕಷ್ಟ ಎಂಬುದು ಆ ಪಕ್ಷವನ್ನು ಮುನ್ನಡೆಸುತ್ತಿರುವವರಿಗಷ್ಟೇ ಗೊತ್ತಿರುತ್ತದೆ. ಕಳೆದ ೩ ತಿಂಗಳಿನಿಂದ ಪಕ್ಷದ ಬಗ್ಗೆ ಹಲವಾರು ರೀತಿಯ ವ್ಯಾಖ್ಯಾನ ನಡೆದಿವೆ. ಅದೆಲ್ಲಾ ಮನರಂಜನೆ ಕಾರ್ಯಕ್ರಮದಂತೆ ಕಾಣುತ್ತಿದೆ. ಜೆಡಿಎಸ್ ಮನೆಯನ್ನು ಅಲುಗಾಡಿಸಲು ಸಾಧ್ಯವಿಲ್ಲ ಎಂದು ಹೇಳಿದರು.
ನಾನು ಇರುವಷ್ಟು ದಿನ ಮಾತ್ರವಲ್ಲ, ನಾನು ಹೋದ ಮೇಲೂ ಪಕ್ಷ ಉಳಿಯಲಿದೆ ಎಂದು ಭಾವುಕರಾದ ಅವರು, ಅದಕ್ಕಾಗಿ ನನ್ನ ಹೋರಾಟ ಮುಂದುವರೆಯಲಿದೆ ಎಂದರು.
ಪ್ರಾದೇಶಿಕ ಪಕ್ಷಕ್ಕೆ ಆಡಳಿತ ನಡೆಸುವ ಶಕ್ತಿ ಬಂದ ಮೇಲೂ ಕೆಲ ನಾಯಕರು ಏಕೆ ಈ ರೀತಿ ಲಘುವಾಗಿ ಮಾತನಾಡುತ್ತಿದ್ದಾರೋ ಗೊತ್ತಿಲ್ಲ. ತೆನೆ ಹೊತ್ತ ಮಹಿಳೆ ಬಗ್ಗೆ ಈ ರೀತಿಯಾಗಿ ಮಾತನಾಡಬಾರದು. ಜೆಡಿಎಸ್ ಮನೆಯನ್ನು ಯಾರಿಂದಲೂ ಅಲುಗಾಡಿಸಲು ಸಾಧ್ಯವಿಲ್ಲ. ಸೋಲು-ಗೆಲುವು ಮಾಮೂಲಿ ಎಂದರು.
ರಾಜ್ಯದ ಅಭಿವೃದ್ಧಿ ದೃಷ್ಠಿಯಿಂದ ಪ್ರಾದೇಶಿಕ ಪಕ್ಷ ಅನಿವಾರ್ಯ ಎಂದು ಅವರು ಹೇಳಿ, ಪಕ್ಷ ಅಲುಗಾಡುತ್ತಿದೆ ಎಂದು ಲಘುವಾಗಿ ಮಾತನಾಡುತ್ತಾರೆ. ಕಾಂಗ್ರೆಸ್‌ನಲ್ಲೂ ಮೂವರು ನಾಯಕರು ಅಲುಗಾಡುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.
ನಾನು ಮೂಲತಃ ಕಾಂಗ್ರೆಸ್ ಪಕ್ಷದವನೆ. ಕೆಲವು ತಿಕ್ಕಾಟದಿಂದ ನನ್ನನ್ನು ಹೊರ ಹಾಕಿದರು ಎಂದ ಅವರು ಹೇಳಿದರು.
ಕಾಂಗ್ರೆಸ್ ಬಗ್ಗೆ ಮಾತನಾಡಿದರೆ ನಾನು ತುಂಬಾ ಮಾತನಾಡಬಹುದು. ಕಾಂಗ್ರೆಸ್ ಬಗ್ಗೆ ನನಗೂ ಬಹಳ ಗೊತ್ತಿದೆ. ಪ್ರಧಾನಿ ಮೋದಿಯವರು ಕಾಂಗ್ರೆಸ್ ಮುಕ್ತ ಭಾರತ ಮಾಡಲು ಹೊರಟಾಗ ಕಾಂಗ್ರೆಸ್ ಜತೆ ಜೆಡಿಎಸ್ ನಿಂತಿತ್ತು. ಇದಕ್ಕೆ ಕಾರಣ ಕುಮಾರಸ್ವಾಮಿಯಲ್ಲ, ನಾನೇ. ಇದನ್ನು ಕಾಂಗ್ರೆಸ್ ನಾಯಕರು ಅರ್ಥ ಮಾಡಿಕೊಳ್ಳಬೇಕು ಎಂದು ಹೇಳಿದರು.
೨೦೧೮ ರಲ್ಲಿ ಸರ್ಕಾರ ರಚನೆಗೆ ಸಿದ್ದರಾಮಯ್ಯ, ಖರ್ಗೆ, ಮುನಿಯಪ್ಪ, ಗುಲಾಬ್‌ನಬೀ ಆಜಾದ್ ಎಲ್ಲರೂ ಬಂದಿದ್ದರು. ಮಾತನಾಡುವಾಗ ಕಿಂಚಿತ್ತಾದೂ ವಾಸ್ತವ ಘಟನೆಯ ಬಗ್ಗೆ ಮಾತನಾಡಬೇಕು ಎಂದರು.
ಜೆಡಿಎಸ್ ಪಕ್ಷದ ಜಾತ್ಯಾತೀತ ಸಿದ್ದಾಂತವನ್ನು ಪರೀಕ್ಷೆ ಮಾಡಲಿ. ತಮಿಳುನಾಡಿನಲ್ಲಿ ಏನಾಯಿತು, ಯಾರ ಮನೆ ಬಾಗಿಲಿಗೆ ಹೋಗಿದ್ದರು, ಬಿಹಾರದಲ್ಲಿ ಏನಾಯಿತು, ಮಹಾರಾಷ್ಟ್ರದಲ್ಲಿ ಶಿವಸೇನೆ ಜತೆ ಸರ್ಕಾರ ಮಾಡಿಕೊಂಡಿಲ್ಲ. ಮುಸ್ಲಿಂರನ್ನು ಉಳಿಸುವ ಶಕ್ತಿ ಇವರಿಗೆ ಇಲ್ಲ. ಮುಸ್ಲಿಂರನ್ನು ದಾರಿ ತಪ್ಪಿಸಿದ್ದು ಯಾರು, ಗೋದ್ರಾ ಹತ್ಯಾಕಾಂಡ ವಿಚಾರ ಏನಾಯಿತು ಎಂದು ಕಾಂಗ್ರೆಸ್ ನಾಯಕರ ಹೇಳಿಕೆಗಳಿಗೆ ದೇವೇಗೌಡ ತಿರುಗೇಟು ನೀಡಿದರು.
ಈ ಹಿಂದೆ ಎಲ್ಲರೂ ಸೇರಿ ಪಕ್ಷದಿಂದ ನನ್ನ ಹೊರ ಹಾಕಿದರು. ನಾನು ಏಕಾಂಗಿಯಾಗಿದ್ದೆ. ಮತ್ತೆ ನನ್ನ ಹತ್ತಿರನೇ ಬಂದರು. ಯಾರಾದರೂ ನನಗೆ ೧೦ ರೂಪಾಯಿ ಕೊಟ್ಟಿದ್ದಾರಾ, ಈಗ ಕೆಲವರು ಮಾತನಾಡುತ್ತಿದ್ದಾರೆ. ಅವರಿಗೆ ನಾನು ಹೇಳುತ್ತಿದ್ದೇನೆ ಎಂದು ಪರೋಕ್ಷವಾಗಿ ಸಿದ್ದರಾಮಯ್ಯನವರ ವಿರುದ್ಧ ವಾಗ್ದಾಳಿ ನಡೆಸಿದರು.
ಕುಮಾರಸ್ವಾಮಿಯವರ ಸರ್ಕಾರ ಬಿದ್ದು ಹೋಗುತ್ತದೆ ಎಂದು ಸುದ್ದಿ ಕೊಟ್ಟವರು ಯಾರು, ಎಲ್ಲವೂ ಗೊತ್ತಿದೆ ಎಂದು ಅವರು ಸಿದ್ದರಾಮಯ್ಯನವರನ್ನು ಗುರಿಯಾಗಿಸಿ ಹೇಳಿದರು.
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸಭಾಪತಿ ರಾಜೀನಾಮೆ ವಿಚಾರದಲ್ಲಿ ಸೆಕ್ಯೂಲರ್ ಪ್ರಶ್ನೆ ಮಾಡಿದ್ದಾರೆ. ಇವರು ಮಾಡಿದ್ದಾದರೂ ಏನು? ಇವರು ಮುಖ್ಯಮಂತ್ರಿಯಾಗಿದ್ದಾಗ ೧೩೦ ಇದ್ದ ಕಾಂಗ್ರೆಸ್ ಶಾಸಕರ ಸಂಖ್ಯೆ ೭೮ಕ್ಕೆ ಏಕೆ ಬಂತು. ಭಾಗ್ಯದ ಮೇಲೆ ಭಾಗ್ಯ ಕೊಟ್ಟರೂ ಏಕೆ ಹೀಗಾಯಿತು ಎಂದು ವ್ಯಂಗ್ಯವಾಡಿದರು.
ಪಕ್ಷವನ್ನು ಸಂಘಟಿಸಲು ಜನವರಿ ೭ ರಂದು ಸಭೆ ಸೇರಲಿದ್ದೇವೆ. ಜನವರಿ ೧೪ ರ ನಂತರ ಕುಮಾರಸ್ವಾಮಿಯವರ ಯೋಜನೆಯಂತೆ ಪಕ್ಷ ಸಂಘಟನೆ ಮುಂದುವರೆಯಲಿದೆ. ಎಲ್ಲ ಜಿಲ್ಲೆಗಳಿಗೂ ಹೋಗಲು ಸಾಧ್ಯವಿಲ್ಲ. ಕುಮಾರಸ್ವಾಮಿ ಪಕ್ಷ ಸಂಘಟನೆ ಮುಂದುವರೆಸುತ್ತಾರೆ ಎಂದು ಅವರು ಹೇಳಿದರು.
ಪಕ್ಷದಲ್ಲಿ ಕಾರ್ಯಕರ್ತರಿಗೆ ಹುಮ್ಮಸ್ಸು ಇದೆ. ಯಾರು ಕೆಲಸ ಮಾಡುತ್ತಾರೋ ಅವರಿಗೆ ಜವಾಬ್ದಾರಿ ಕೊಡುತ್ತೇವೆ. ಹೊರಗಡೆಯಿಂದ ಜನರನ್ನು ಕರೆದುಕೊಂಡು ಬಂದು ಚುನಾವಣೆಗೆ ನಿಲ್ಲಿಸುವುದು ಬೇಡ ಎಂಬ ತೀರ್ಮಾನ ಮಾಡಿದ್ದೇವೆ. ಕಾರ್ಯಕರ್ತರಿಗೆ ಪ್ರಾಮುಖ್ಯ ಎಂದರು.