ಜೆಡಿಎಸ್ ಬೆಂಬಲ ಸದಸ್ಯರ ಸೆಳೆಯಲು ಯತ್ನ

ಬೆಂಗಳೂರು, ಜ. ೫- ಗ್ರಾಮ ಪಂಚಾಯ್ತಿ ಚುನಾವಣೆಗಳ ನಂತರ ಮೀಸಲಾತಿ ಬೆದರಿಕೆ ಮೂಲಕ ಜೆಡಿಎಸ್ ಬೆಂಬಲಿತ ಸದಸ್ಯರನ್ನು ಸೆಳೆಯುವ ಪ್ರಯತ್ನಗಳ ಬಗ್ಗೆ ಕಿಡಿಕಾರಿರುವ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು, ಹೆಚ್ಚು ಸ್ಥಾನ ಗಳಿಸಿದ್ದೇವೆ ಎಂದು ಹೇಳಿಕೊಳ್ಳುವ ರಾಷ್ಟ್ರೀಯ ಪಕ್ಷಗಳು ಪ್ರಾದೇಶಿಕ ಪಕ್ಷದ ಬೆಂಬಲಿತ ಸದಸ್ಯರ ಕಾಲು ಹಿಡಿಯುವ ಪರಿಸ್ಥಿತಿಗೆ ಬಂದಿವೆ ಎಂದು ವ್ಯಂಗ್ಯವಾಡಿದ್ದಾರೆ.
ಪ್ರಾದೇಶಿಕ ಪಕ್ಷಗಳು ಜೆಡಿಎಸ್ ಬೆಂಬಲಿತ ಗ್ರಾ.ಪಂ. ಸದಸ್ಯರ ಕಾಲುಗಳನ್ನು ಹಿಡಿಯುತ್ತಿವೆ. ಅವರ ಮನೆಯ ಬಾಗಿಲಿಗೆ ಅಲೆಯುತ್ತಿವೆ ಎಂದರೆ ಕನ್ನಡಿಗರು ಜೆಡಿಎಸ್‌ಗೆ ಎಷ್ಟು ಬಲ ತುಂಬಿದ್ದಾರೆ ಎಂಬುದು ಎಲ್ಲರಿಗೂ ಗೊತ್ತಾಗುವ ವಿಚಾರ ಎಂದು ಟ್ವಿಟ್ಟರ್‌ನಲ್ಲಿ ಹೇಳಿದ್ದಾರೆ.
ರಾಷ್ಟ್ರೀಯ ಪಕ್ಷಗಳು ಜೆಡಿಎಸ್ ಮುಖಂಡರ ಕಾಲು ಹಿಡಿಯುವುದನ್ನು ನಿಲ್ಲಿಸಿ ಮರ್ಯಾದೆ ಉಳಿಸಿಕೊಳ್ಳಬೇಕು ಅವರು ಟ್ವೀಟ್‌ನಲ್ಲಿ ಒತ್ತಾಯಿಸಿದ್ದಾರೆ.
ಗ್ರಾಮ ಪಂಚಾಯ್ತಿ ಚುನಾವಣೆ ನಂತರ ನಡೆಯುತ್ತಿರುವ ಬೆಳವಣಿಗೆಗಳು ಆಘಾತಕಾರಿಯಾಗಿದೆ. ರಾಷ್ಟ್ರೀಯ ಪಕ್ಷಗಳಿಗೆ ಏಕೆ ಇಂಥ ಗತಿ ಬಂದಿದೆಯೇ ಎಂಬುದು ತಿಳಿಯದು ಎಂದು ಅವರು ವ್ಯಂಗ್ಯವಾಡಿದ್ದಾರೆ.
ಬೆಳಗಾವಿಯಲ್ಲಿ ಕನ್ನಡ ಧ್ವಜದ ವಿಚಾರದಲ್ಲಿ ನಡೆಯುತ್ತಿರುವ ಕಿತಾಪತಿಗಳನ್ನು ಸರ್ಕಾರ ನೋಡಿಯೂ ಸುಮ್ಮನಿದೆಯೇ ಎಂದಿರುವ ಅವರು, ಕನ್ನಡಿಗರಿಗೆ ಸರ್ಕಾರ ಹೆದರಬಾರದು ಎಂದು ಬಿಜೆಪಿ ಶಾಸಕರೊಬ್ಬರು ಹಿಂದೆ ಹೇಳಿದ್ದ ಮಾತನ್ನು ಸರ್ಕಾರ ಗಂಭೀರವಾಗಿ ತೆಗೆದುಕೊಂಡಿದೆಯೇ ಎಂದು ಪ್ರಶ್ನಿಸಿದ್ದಾರೆ.
ಬೆಳಗಾವಿಯ ಕನ್ನಡ ವಿರೋಧಿ ಪುಂಡರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ಬೆಳಗಾವಿ ಪಾಲಿಕೆ ಎದುರಿನ ಕನ್ನಡ ಧ್ವಜ ತೆರವು ಮಾಡದಿದ್ದರೆ ಗಲ್ಲಿಗಳಲ್ಲಿ ಭಗವಧ್ವಜ ಹಾರಿಸುವುದಾಗಿ ಎಂಇಎಸ್ ಬೆದರಿಸಿದೆ. ಕನ್ನಡ ಧ್ವಜವನ್ನು ತೆಗೆಯಬೇಕೆಂಬುದೇ ಅಪರಾಧ. ಇನ್ನು ಬೆದರಿಕೆ ಹಾಕುವುದು ಅಕ್ಷಮ್ಯ. ಇಷ್ಟಕ್ಕೂ ಕನ್ನಡ ಧ್ವಜ ಎಂಬುದು ಭಗವಧ್ವಜಕ್ಕೆ ವಿರುದ್ಧಾರ್ಥಕವೇ ಎಂದು ಪ್ರಶ್ನಿಸಿರುವ ಅವರು, ಕನ್ನಡ ಧ್ವಜ ಭಗವಧ್ವಜಗಿಂತಲೂ ಮಿಗಿಲು ಎಂದು ಟ್ವಿಟ್ಟರ್‌ನಲ್ಲಿ ಹೇಳಿದ್ದಾರೆ.