ಜೆಡಿಎಸ್ ಬೆಂಬಲಿಗರು ಬಿಜೆಪಿ ಸೇರ್ಪಡೆ

ಕನಕಪುರ,ಮೇ.೩-ಕಾಂಗ್ರೆಸ್ ಮತ್ತು ಜೆಡಿಎಸ್ ಹೊಂದಾಣಿಕೆ ರಾಜಕಾರಣದಿಂದ ಜನರು ಬೇಸತ್ತು ಹೋಗಿದ್ದಾರೆ, ಸಾಮಾನ್ಯ ಜನರು ಇಲ್ಲಿ ಜೀವನ ಮಾಡುವುದೇ ಕಷ್ಟವಾಗಿದೆ. ಈ ಹೊಂದಾಣಿಕೆ ರಾಜಕಾರಣ ಹೋಗಬೇಕು, ಅದಕ್ಕಾಗಿ ನಾವೆಲ್ಲಾ ಬಿಜೆಪಿ ಯನ್ನು ಬೆಂಬಲಿಸಿ ಸೇರ್ಪಡೆಯಾಗುತ್ತಿದ್ದೇವೆ ಎಂದು ಕಬ್ಬಾಳು ಗ್ರಾಮ ಪಂಚಾಯ್ತಿ ಸದಸ್ಯ ಗೀತಾ ಕಾಳರಾಜು ತಿಳಿಸಿದರು.
ಕನಕಪುರ ತಾಲ್ಲೂಕಿನ ಸಾತನೂರು ಹೋಬಳಿ ಕಬ್ಬಾಳು ಗ್ರಾಮ ಪಂಚಾಯ್ತಿಯ ಹೊಸ ಕಬ್ಬಾಳು ಗ್ರಾಮದಲ್ಲಿ ಚುನಾವಣಾ ಪ್ರಚಾರಕ್ಕಾಗಿ ಆಗಮಿಸಿದ್ದ ಕಂದಾಯ ಸಚಿವ, ಕನಕಪುರ ಕ್ಷೇತ್ರದ ಅಭ್ಯರ್ಥಿ ಆರ್.ಅಶೋಕ್ ಜತೆ ಅರ್ಧ ಗಂಟೆಗೂ ಹೆಚ್ಚು ಕಾಲ ಚರ್ಚೆ ನಡೆಸಿ ಮಾತನಾಡಿದರು.
ಇಲ್ಲಿ ಕೇಂದ್ರ ಮತ್ತು ರಾಜ್ಯದ ಯಾವ ಆಡಳಿತವು ನಡೆಯುವುದಿಲ್ಲ, ಸರ್ಕಾರದ ಯೋಜನೆಗಳನ್ನು ತೆಗೆದುಕೊಳ್ಳಲು ನಾವು ಹೋರಾಟ ನಡೆಸಬೇಕಿದೆ, ಜನಸಾಮಾನ್ಯರು ಇಲ್ಲಿ ಸ್ವತಂತ್ರವಾಗಿ ಏನೂ ಮಾಡಲು ಆಗುತ್ತಿಲ್ಲವೆಂದು ತಮ್ಮ ನೋವನ್ನು ವ್ಯಕ್ತಪಡಿಸಿದರು.
ನಾವುಗಳೆಲ್ಲಾ ಜೆಡಿಎಸ್ ನಲ್ಲಿ ಇದ್ದೇವೆ, ಆದರೆ ನಮ್ಮ ರಕ್ಷಣೆ ಯಾರು ಬರುತ್ತಿಲ್ಲ, ನಮ್ಮ ಕಷ್ಟವನ್ನು ಯಾರು ಕೇಳುತ್ತಿಲ್ಲ. ಎಲ್ಲವೂ ಹೊಂದಾಣಿಕೆ ರಾಜಕಾರಣ, ಹೊಂದಾಣಿಕೆ ರಾಜಕಾರಣ ಹೋಗಬೇಕಾದರೆ ಇಲ್ಲಿ ಬಿಜೆಪಿ ಪಕ್ಷ ಅಧಿಕಾರಕ್ಕೆ ಬರಬೇಕು. ಅದಕ್ಕಾಗಿ ನಮ್ಮಂತ ಸಾವಿರಾರು ಜನರು ಬಿಜೆಪಿ ಬೆಂಬಲಿಸಲಿದ್ದಾರೆ ಎಂದರು.
ಬಿಜೆಪಿಯನ್ನು ಬೆಂಬಲಿಸುವುದಾಗಿ ಗ್ರಾಮ ಪಂಚಾಯ್ತಿ ಸದಸ್ಯರಾದ ಗೀತಾ ಕಾಳರಾಜು, ಸಿದ್ದಮ್ಮ ಸಿದ್ದರಾಜು, ಸಂತೋಷ್, ಮುಖಂಡರಾದ ಸೋಮಸುಂದರ್, ಆನಂದ, ರವಿ, ಗಿರೀಶ್, ಕುಮಾರ್, ಸುನೀಲ್, ಕಾಂತರಾಜು, ಶಿವರುದ್ರಯ್ಯ, ರಂಗಸ್ವಾಮಿ, ಮುನಿಮಾದು, ರಾಮು, ಸಣ್ಣಪ್ಪ ಮೊದಲಾದವರು ಬಿಜೆಪಿ ಸೇರ್ಪಡೆಯಾದರು.