ಜೆಡಿಎಸ್, ಬಿಜೆಪಿ ಸೇರಿದಂತೆ ಹಲವರಿಂದ ನಾಮಪತ್ರ ಸಲ್ಲಿಕೆ

ಬಳ್ಳಾರಿ, ಏ.12: ಇಲ್ಲಿನ ಮಹಾನಗರ ಪಾಲಿಕೆಗೆ ಈ ತಿಂಗಳ 27ರಂದು ನಡೆಯುವ ಚುನಾವಣೆಗೆ ಏ.15 ಕೊನೆಯ ದಿನ ನಾಳೆ ನಾಡಿದ್ದು ಸರ್ಕಾರಿ ರಜೆ ಇರುವುದರಿಂದ ಇಂದು ಜೆಡಿಎಸ್, ಬಿಜೆಪಿ, ಸ್ವತಂತ್ರ ಅಭ್ಯರ್ಥಿಗಳು ಸೇರಿದಂತೆ ಹಲವರು ನಾಮಪತ್ರ ಸಲ್ಲಿಸಿದ್ದಾರೆ.
ಜೆಡಿಎಸ್ ಪಕ್ಷದಿಂದ 18ನೇ ಅಭ್ಯರ್ಥಿಯಾಗಿ ವೈ.ಗೋಪಾಲ, 26ನೇ ವಾರ್ಡಿನಿಂದ ಪುಷ್ಪಾ, 30ನೇ ವಾರ್ಡಿನಿಂದ ತಿಪ್ಪೇಸ್ವಾಮಿ, 16ನೇ ವಾರ್ಡಿನಿಂದ ಗೋಪಾಲಕೃಷ್ಣ ನಾಮಪತ್ರ ಸಲ್ಲಿಸಿದರು.
ಈ ಸಂದರ್ಭದಲ್ಲಿ ಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮೀನಳ್ಳಿ ತಾಯಣ್ಣ, ಮುಖಂಡರುಗಳಾದ ಮುನ್ನಬಾಯ್, ಬಂಡೇಗೌಡ, ವಿಜಯಕುಮಾರ್, ಮೊದಲಾದವರು ಇದ್ದರು. ಈ ಸಂದರ್ಭದಲ್ಲಿ ಸಂಜೆವಾಣಿಯೊಂದಿಗೆ ಮಾತನಾಡಿದ ಮೀನಳ್ಳಿ ತಾಯಣ್ಣ ಅವರು ಬಿಜೆಪಿ ಹಾಗೂ ಕಾಂಗ್ರೆಸ್ ಎರಡೂ ಈ ರಾಷ್ಟ್ರೀಯ ಪಕ್ಷಗಳ ನಡುವೆ ಪ್ರಾದೇಶಿಕ ಪಕ್ಷ ಜೆಡಿಎಸ್ ಅಭ್ಯರ್ಥಿಗಳು ಮಾಜಿ ಸಿ.ಎಂ.ಕುಮಾರಸ್ವಾಮಿ ಅವರ ಅಭಿವೃದ್ಧಿ ಆಡಳಿತವನ್ನು ಪರಿಗಣಿಸಿ ಗೆಲುವು ಸಾಧಿಸಲಿದ್ದಾರೆಂಬ ವಿಶ್ವಾಸ ವ್ಯಕ್ತಪಡಿಸಿದರು. ಇನ್ನು 19ನೇ ವಾರ್ಡಿನಿಂದ ಸ್ವತಂತ್ರ ಅಭ್ಯರ್ಥಿಯಾಗಿ ಮೇಕಲ ಈಶ್ವರರೆಡ್ಡಿ ಅವರು ನಾಮಪತ್ರ ಸಲ್ಲಿಸಿದ್ದಾರೆ.
ಅಲ್ಲದೆ ಬಿಜೆಪಿ ಅಭ್ಯರ್ಥಿಗಳಾಗಿ 1ನೇ ವಾರ್ಡಿನಿಂದ ಟಿ.ಕಲ್ಪನಾ, 34ನೇ ವಾರ್ಡಿನಿಂದ ಪಿ.ಉಜ್ವಲ ಅವರು, 32ನೇ ವಾರ್ಡಿನಿಂದ ಗಂಗಮ್ಮ ಮಲ್ಲಿಕಾರ್ಜುನ, 13ನೇ ವಾರ್ಡಿನಿಂದ ಸಿ.ಇಬ್ರಾಹಿಂ ಬಾಬು, 31ನೇ ವಾರ್ಡಿನಿಂದ ಜೆ.ಉಮಾದೇವಿ, ಶಂಕ್ರಪ್ಪ ಮೊದಲಾದವರು ನಾಮಪತ್ರ ಸಲ್ಲಿಸಿದರು.
ಆದರೆ ಈವರೆಗೆ ಕಾಂಗ್ರೆಸ್ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ ಬಗ್ಗೆ ವರದಿಗಳು ಬಂದಿಲ್ಲ. ನಿನ್ನೆ ದಿನ ಮಾಜಿ ಶಾಸಕ ಅನಿಲ್ ಲಾಡ್ ಅವರ ಸಂಡೂರಿನ ರೆಸಾರ್ಟಿನಲ್ಲಿ ಪಕ್ಷದ ಮುಖಂಡರು ಸಭೆ ನಡೆಸಿ, ವಾರ್ಡಿಗೆ ಇಬ್ಬರಂತೆ ಆಯ್ಕೆ ಮಾಡಿ ಕೆಪಿಸಿಸಿಗೆ ಕಳಿಸಿದ್ದಾರಂತೆ ನಾಡಿದ್ದು ಏ.14ರಂದು ಎಲ್ಲಾ 39 ವಾರ್ಡಿನ ಅಭ್ಯರ್ಥಿಗಳನ್ನು ಅಂತಿಮಗೊಳಿಸಿ ಬಿ.ಫಾರಂ ನೀಡಲಿದ್ದಾರೆಂದು ಕಾಂಗ್ರೆಸ್ ಮುಖಂಡರು ಹೇಳಿದ್ದಾರೆ. ಟಿಕೆಟ್ ಗಾಗಿ ಹೆಚ್ಚಿನ ಪೈಪೋಟಿ ಇರುವುದೇ ಇದಕ್ಕೆಲ್ಲಾ ಕಾರಣವಾಗಿದೆ.