ಜೆಡಿಎಸ್- ಬಿಜೆಪಿ ಮೈತ್ರಿ: ಮತಿಗೆಟ್ಟ ಕಾಂಗ್ರೆಸ್ ಜೆಡಿಎಸ್ ಲೇವಡಿ

ಬೆಂಗಳೂರು, ಸೆ.11- ರಾಜ್ಯದಲ್ಲಿ ಜೆಡಿಎಸ್-ಬಿಜೆಪಿ ಮೈತ್ರಿ ಮಾತು ಕೇಳಿ ಕಾಂಗ್ರೆಸ್ ಪಕ್ಷಕ್ಕೆ ಮತಿಗೆಟ್ಟಂತಾಗಿದೆ ಎಂದು ಜೆಡಿಎಸ್ ವಾಗ್ದಾಳಿ ನಡೆಸಿದೆ.

ಲೋಕಸಭೆ ಚುನಾವಣೆಯಲ್ಲಿ ಸಿಂಗಲ್ ಸೀಟಿಗೂ ದಿಕ್ಕಿಲ್ಲದ ಸ್ಥಿತಿ ನೆನೆದು ಕೈಕೈ ಪರಚಿಕೊಳ್ಳುತ್ತಿದೆ. ಪಕ್ಷ ವಿಸರ್ಜನೆ ಬಗ್ಗೆ ಎಚ್. ಡಿ ಕುಮಾರಸ್ವಾಮಿ ಅವರು ನೀಡಿದ್ದ ಹೇಳಿಕೆಯನ್ನೇ ತಿರುಚುತ್ತಿರುವ ಕೂಗುಮಾರಿ, ಈಗ ಮಾರಿ ಉಳಿಸಿಕೊಳ್ಳಲು ಸತ್ಯ ತಿರುಚುತ್ತಿದೆ ಎಂದು ಆಕ್ರೋಶ ಹೊರಹಾಕಿದೆ.

ಈ ಕುರಿತು ಟ್ವೀಟ್ ಮಾಡಿರುವ ಜೆಡಿಎಸ್, 75 ವರ್ಷಗಳ ಸ್ವಾತಂತ್ರ್ಯ ಭಾರತದಲ್ಲಿ ಜಾತ್ಯತೀತತೆ ಜಪ ಮಾಡಿಕೊಂಡೇ ಅಧಿಕಾರದ ಅಮಲಿನಲ್ಲಿ ತೇಲಿ ‘ಜಲ್ಸಾ’ ಹೊಡೆದ ಆ ಪಕ್ಷಕ್ಕೆ ತನ್ನ ಕೊಳಕು ಬೆನ್ನೇ ಕಾಣುತ್ತಿಲ್ಲ. ಶಿವಸೇನೆ, ಜೆಡಿಯು, ಡಿಎಂಕೆಯಂಥ ಪ್ರಾದೇಶಿಕ ಪಕ್ಷಗಳ ‘ಬಾಲ’ದಲ್ಲಿಯೇ ಬದುಕು ಕಂಡುಕೊಂಡು ಏದುಸಿರು ಬಿಡುತ್ತಾ ದೇಶದ ಉದ್ದಗಲಕ್ಕೂ ‘ಹಸ್ತವ್ಯಸ್ತ’ವಾಗಿದೆ ವಾಗಿದೆ ಎಂದು ಲೇವಡಿ ಮಾಡಿದೆ.

ಕಾಶ್ಮೀರದಿಂದ ಕೇರಳವರೆಗೆ, ಗುಜರಾತಿನಿಂದ ಓಡಿಶಾವರೆಗೆ ಕೈ ಪಕ್ಷ ಪಾತಾಳ ಕಚ್ಚಿರುವುದು ಆಸತ್ಯವೇ. ನಡುನೀರಿನಲ್ಲಿ ಮುಳುಗಿಹೋಗಿ, 403 ಕ್ಷೇತ್ರಗಳ ಉತ್ತರ ಪ್ರದೇಶದಲ್ಲಿ ಎರಡೇ ಕ್ಷೇತ್ರಗಳಿಗೆ ರನ್ ಔಟ್ ಆಗಿ ಮಕಾಡೆ ಮಲಗಿದ್ದೂ, ಅಲ್ಲೂ ಬಿಎಸ್ಪಿ ಬಾಲ ಹಿಡಿದು ನೇತಾಡಿದ್ದು ಇಷ್ಟು ಬೇಗ ಮರೆತೇ ಹೋಯಿತೇ ಎಂದು ಪ್ರಶ್ನಿಸಿದೆ.

2014, 2019ರ ಲೋಕಸಭೆಯ ಚುನಾವಣೆಗಳಲ್ಲಿ ತಳಮುಟ್ಟಿದ ಪಕ್ಷಕ್ಕೆ 2024ರಲ್ಲಾದರೂ ಅವಕಾಶ ಸಿಕ್ಕೀತೇ ಎನ್ನುವ ಚಿಂತೆ. ಕಾಡಿ, ಬೇಡಿ ಕಟ್ಟಿಕೊಂಡ ಇಂಡಿಯಾ ಮೈತ್ರಿಕೂಟಕ್ಕೆ ಸೇರಿಕೊಂಡ ವೀರಾಧಿವೀರರೆಲ್ಲ ಬೆಂಗಳೂರಿಗೆ ಬರುವುದಕ್ಕೆ ಮೊದಲು ಎಲ್ಲೆಲ್ಲಿದ್ದರು ಚುನಾವಣೆ ಮುಗಿದ ಮೇಲೆ ಎಲ್ಲೆಲ್ಲಿ ಹೋಗುತ್ತಾರೆ ಬಲ್ಲಿರಾ.. ಬಲ್ಲಿರಾ ಎಂದಿದ್ದಾರೆ.

ಗೆದ್ದಲು ಹಿಡಿದ ಕಾಂಗ್ರೆಸ್ ಪಕ್ಷದ ಮೈತ್ರಿಕೂಟಕ್ಕೆ ಮೈಯ್ಯೆಲ್ಲಾ ರಂಧ್ರಗಳೇ ಎನ್ನುವ ಅರಿವಿಲ್ಲವೇ ಶಿಲಾಯುಗದ ಪಳಿಯುಳಿಕೆಯಂತೆ ಅಳಿವಿನ ಅಂಚಿನಲ್ಲಿರುವ ಕಾಂಗ್ರೆಸ್ ಪಕ್ಷ ಕಾಣದ ಕಡಲಿಗೆ ಹಂಬಲಿಸುತ್ತಿದೆ! ಕಂಡವರ ಆಸರೆಯಲ್ಲಿ ಚಳಿ ಕಾಯಿಸಿಕೊಳ್ಳಲು ಅವರಿವರಿಗೆಲ್ಲ ಕರ ಮುಗಿಯುತ್ತಿದೆ ಎಂದಿದೆ.