ಕಲಬುರಗಿ,ಅ.3: ಜೆಡಿಎಸ್ ಮತ್ತು ಬಿಜೆಪಿ ಮೈತ್ರಿಕೂಟಗಳು ಮುಳುಗುತ್ತಿರುವ ಹಡಗು. ಹೀಗಾಗಿ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಕರ್ನಾಟಕದಿಂದ ಕಾಂಗ್ರೆಸ್ ಪಕ್ಷವು 20ಕ್ಕೂ ಹೆಚ್ಚು ಸೀಟುಗಳಲ್ಲಿ ಗೆಲುವು ಸಾಧಿಸಲಿದೆ ಎಂದು ರಾಜ್ಯದ ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ಅವರು ಹೇಳಿದರು.
ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಗ್ಯಾರಂಟಿ ಯೋಜನೆಗಳಿಂದಾಗಿ ಜೆಡಿಎಸ್ ಮತ್ತು ಬಿಜೆಪಿಯನ್ನು ರಾಜ್ಯದ ಜನರು ತಿರಸ್ಕರಿಸಿದ್ದಾರೆ. ಕಾಂಗ್ರೆಸ್ಸಿಗೆ 136 ಸೀಟುಗಳು ಬಂದಿವೆ. ಇಂತಹ ಸಂದರ್ಭದಲ್ಲಿ ಉಭಯ ವಿರೋಧ ಪಕ್ಷಗಳು ಸೋಲಿನ ಭೀತಿಯಿಂದಾಗಿಯೇ ಮೈತ್ರಿ ಮಾಡಿಕೊಂಡಿವೆ. ಲೋಕಸಭಾ ಚುನಾವಣೆಯಲ್ಲಿ ಆ ಮೈತ್ರಿಕೂಟದ ಆಟ ನಡೆಯದು ಎಂದರು.
ಕಾಂಗ್ರೆಸ್ ಪಕ್ಷದ ಹಣೆಬರಹವನ್ನು ಬರೆಯಲು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಮತ್ತು ಮಾಜಿ ಸಚಿವ ಸಿ.ಪಿ. ಯೋಗೇಶ್ವರ್ ಅವರಿಂದ ಸಾಧ್ಯವಿಲ್ಲ ಎಂದು ಹೇಳಿದ ಅವರು, ಮಕರ ಸಂಕ್ರಾಂತಿಯ ನಂತರ ರಾಜ್ಯ ಕಾಂಗ್ರೆಸ್ ಸರ್ಕಾರ ಪತನವಾಗುತ್ತದೆ ಎಂದು ಮಾಜಿ ಸಚಿವ ಸಿ.ಪಿ. ಯೋಗೇಶ್ವರ್ ಅವರು ಹೇಳಿದ್ದಾರೆ. ಅವರ ಹಣೆ ಬರಹವನ್ನು ಅವರಿಗೆ ಬರೆಯೋಕೆ ಆಗಿಲ್ಲ. ಪ್ರಧಾನಿ ನರೇಂದ್ರ ಮೋದಿ ಅವರನ್ನು ಇಡೀ ಕರ್ನಾಟಕದಾದ್ಯಂತ ಮೂಲೆ, ಮೂಲೆಯಲ್ಲಿ ವಿಧಾನಸಭಾ ಚುನಾವಣೆಯಲ್ಲಿ ಪ್ರಚಾರ ಮಾಡಿಸಿದರು. ಆದಾಗ್ಯೂ, ಬಿಜೆಪಿಯು ಕೇವಲ 65 ಸೀಟುಗಳಲ್ಲಿ ಗೆಲ್ಲುವ ಮೂಲಕ ದಯನೀಯ ಸ್ಥಿತಿಯಲ್ಲಿ ಸೋಲನ್ನು ಅನುಭವಿಸಿದೆ. ಹಾಗಾಗಿ ಬೇರೆಯವರ ಹಣೆಬರಹ ಬರೆಯೋಕೆ ಯೋಗೇಶ್ವರ್ ಅವರಿಗೆ ಆಗುತ್ತಾ? ಹೀಗೆ ಮಾತನಾಡಿ, ಮಾತನಾಡಿ ಯೋಗೇಶ್ವರ್ ಅವರು ಈ ಮಟ್ಟಕ್ಕೆ ಬಂದಿದೆ ಎಂದು ತಿರುಗೇಟು ನೀಡಿದರು.
ಇನ್ನು ಬಿಜೆಪಿಯೊಂದಿಗೆ ಮಾಜಿ ಪ್ರಧಾನಿ ಎಚ್.ಡಿ. ದೇವೆಗೌಡರು ಮೈತ್ರಿ ಬಯಸಿರಲಿಲ್ಲ. ಆದಾಗ್ಯೂ, ಅವರ ಪುತ್ರ ಎಚ್.ಡಿ. ಕುಮಾರಸ್ವಾಮಿ ಅವರ ಬಲವಂತದಿಂದ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡಿದ್ದಾರೆ. ದೇವೆಗೌಡರು ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಳ್ಳುವ ಕುರಿತು ಎಂದಿಗೂ ಮಾತನಾಡಿರಲಿಲ್ಲ. ಈಗ ಪುತ್ರನ ಒತ್ತಡಕ್ಕೆ ಮಣಿದು ಮೈತ್ರಿ ಮಾಡಿಕೊಂಡಿದ್ದಾರೆ ಎಂದು ಅವರು ಹೇಳಿದರು.
ಈ ಹಿಂದೆ 2018ರ ವಿಧಾನಸಭಾ ಚುನಾವಣೆಯಲ್ಲಿ ಸರ್ಕಾರ ರಚನೆಗೆ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರ ಮನೆಗೆ ಕಾಂಗ್ರೆಸ್ ನಾಯಕರು ಹೋಗಿ ಅಧಿಕಾರಕ್ಕೆ ಬಂದಿರುವ ಕುರಿತು ಪ್ರಸ್ತಾಪಿಸಿದ ಚಲುವರಾಯಸ್ವಾಮಿ ಅವರು, ಸಮ್ಮಿಶ್ರ ಸರ್ಕಾರವನ್ನು ಸರಿಯಾಗಿ ನಿರ್ವಹಿಸಿಕೊಂಡು ಹೋಗಲು ಕುಮಾರಸ್ವಾಮಿ ಅವರಿಗೆ ಆಗಲಿಲ್ಲ. ಪರಿಣಾಮವಾಗಿಯೇ ಕಳೆದ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯದ ಜನತೆ ತಕ್ಕ ಪಾಠ ಕಲಿಸಿದ್ದಾರೆ. ಆದಾಗ್ಯೂ, ಅವರ ನಡುವಳಿಕೆಯಲ್ಲಿ ಈಗಲೂ ಸಹ ಯಾವುದೇ ಬದಲಾವಣೆ ಆಗಿಲ್ಲ ಎಂದು ಕಟುವಾಗಿ ಟೀಕಿಸಿದರು.