ಜೆಡಿಎಸ್ – ಬಿಜೆಪಿ ಬಿ ಟೀಮ್ ಟೀಕೆಗೆ ಕಾಂಗ್ರೆಸ್‌ಗೆ ಹೆಚ್‌ಡಿಕೆ ತಿರುಗೇಟು

ಬೆಂಗಳೂರು, ನ. ೨೪- ಜೆಡಿಎಸ್ ಪಕ್ಷವನ್ನು ಬಿಜೆಪಿ ಬಿ ಟೀಮ್ ಎಂದು ಕುಹಕವಾಡಿದ್ದ ಕಾಂಗ್ರೆಸ್ ಪಕ್ಷಕ್ಕೆ ತಿರುಗೇಟು ನೀಡಿದ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು, ಈಗ ಬಿಜೆಪಿಯ ಬಿ ಟೀಮ್ ಹಾಗೂ ಸಿ ಟೀಮ್ ಯಾವ ಪಕ್ಷ ಎನ್ನುವುದು ಜನರಿಗೆ ಚೆನ್ನಾಗಿ ಅರ್ಥವಾಗಿದೆ ಎಂದಿದ್ದಾರೆ.
ದೇವನಹಳ್ಳಿಯಲ್ಲಿ ಇಂದು ವಿಧಾನ ಪರಿಷತ್ ಚುನಾವಣೆಗೆ ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಅಭ್ಯರ್ಥಿಯಾಗಿ ರಮೇಶ್ ಗೌಡ ಅವರು ನಾಮಪತ್ರ ಸಲ್ಲಿಸಿದ ವೇಳೆ ಮಾಜಿ ಮುಖ್ಯಮಂತ್ರಿಗಳು ಮಾಧ್ಯಮಗಳ ಜತೆ ಮಾತನಾಡಿದರು.
ನಿಜವಾದ ಎ ಟೀಮ್, ಬಿ ಟೀಮ್ ಮತ್ತು ಸಿ ಟೀಮ್ ಯಾವುದು ಎನ್ನುವುದು ಕಾಂಗ್ರೆಸ್ ಅಭ್ಯರ್ಥಿಗಳ ಆಯ್ಕೆಯಲ್ಲಿಯೇ ಗೊತ್ತಾಗುತ್ತದೆ. ಹಾಸನದಲ್ಲಿ ತಂದೆ (ಎ.ಮಂಜು) ಬಿಜೆಪಿ ಅಭ್ಯರ್ಥಿ. ಕೊಡಗಿನಲ್ಲಿ ಅವರ ಪುತ್ರನೇ ಕಾಂಗ್ರೆಸ್ ಪಕ್ಷದ ಉಮೇದುವಾರ. ಬಿಜೆಪಿ ಸರಕಾರದಲ್ಲಿ ಸಚಿವರಿಗೆ ಪಿಎ ಆಗಿದ್ದ ವ್ಯಕ್ತಿ ಈಗ ಮಂಡ್ಯಕ್ಕೆ ಕಾಂಗ್ರೆಸ್ ಅಭ್ಯರ್ಥಿ. ಇದು ಏನನ್ನು ಸೂಚಿಸುತ್ತದೆ? ಎಂದು ಕುಮಾರಸ್ವಾಮಿ ಅವರು ಪ್ರಶ್ನೆ ಮಾಡಿದರು.
ಕಳೆದ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವು ತನ್ನ ಮುಖಂಡನನ್ನು ಬಿಜೆಪಿಗೆ ಕಳಿಸಿ ಅಭ್ಯರ್ಥಿ ಮಾಡಿತ್ತು. ಈಗ ಅದೇ ಬಿಜೆಪಿಯು ತನ್ನ ನಾಯಕನ ಮಗನನ್ನು ಕಾಂಗ್ರೆಸ್ ಪಕ್ಷಕ್ಕೆ ಕಳಿಸಿ ಕೊಡಗಿನ ಅಭ್ಯರ್ಥಿ ಮಾಡಿದೆ. ಇದು ರಾಷ್ಟ್ರೀಯ ಪಕ್ಷಗಳ ಅಡ್ಜೆಸ್ ಮೆಂಟ್ ರಾಜಕೀಯ ಎಂದು ಅವರು ಟೀಕಿಸಿದರು.
ಈಗ ಕಾಂಗ್ರೆಸ್ ಪಕ್ಷದ ನಿಜವಾದ ಬಣ್ಣ ಕಳಚಿ ಬಿದ್ದಿದೆ. ಜನರಿಗೂ ಆ ಪಕ್ಷದ ಅಸಲಿ ಸ್ವರೂಪ ಗೊತ್ತಾಗಿದೆ. ಜೆಡಿಎಸ್ ಬಗ್ಗೆ ಹಗುರವಾಗಿ ಮಾತನಾಡುತ್ತಿದ್ದ ಕಾಂಗ್ರೆಸ್ ಪಕ್ಷದ ನಾಯಕರು ಈಗ ಏನು ಹೇಳುತ್ತಾರೆ? ಯಾವ ನಾಲಗೆಯಲ್ಲಿ ಜೆಡಿಎಸ್ ಪಕ್ಷದ ಬಗ್ಗೆ ಲಘುವಾಗಿ ಮಾತನಾಡುತ್ತಾರೆ ಎಂದು ಅವರು ಪ್ರಶ್ನಿಸಿದರು.
ನಾವು ಏಳು ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡಿದ್ದೇವೆ. ಆ ಪೈಕಿ ಕೊನೆಪಕ್ಷ ಆರು ಕಡೆಯಾದರೂ ಗೆಲ್ಲುತ್ತೇವೆ ಎಂದ ಅವರು; ಈಗ ನಮ್ಮ ಪಕ್ಷ ಕಷ್ಟದ ಪರಿಸ್ಥಿತಿಯಲ್ಲಿದೆ. ಹೀಗಾಗಿ ನಾವು ಕಣಕ್ಕಿಳಿದಿರುವ ಕಡೆ ಗೆಲ್ಲಲೇಬೇಕು. ಅದಕ್ಕೆ ಏನೆಲ್ಲಾ ಮಾಡಬೇಕೋ ಅದನ್ನು ಮಾಡುತ್ತೇವೆ ಎಂದು ಅವರು ತಿಳಿಸಿದರು.
ಬ್ರೈನ್ ವಾಶ್ ಮಾಡುತ್ತಿದ್ದಾರೆ:
ಮೈತ್ರಿ ಸರಕಾರವನ್ನು ಪತನ ಮಾಡಿದ ನಂತರ ನಮ್ಮ ಪಕ್ಷವನ್ನು ಮುಗಿಸಲು ಕೆಲವರು ಹೊಂಚು ಹಾಕಿ ಕೂತಿದ್ದಾರೆ. ನಮ್ಮ ನಾಯಕರ ಬ್ರೈನ್ ವಾಶ್ ಮಾಡಿ ಅವರನ್ನು ತಮ್ಮ ಪಕ್ಷಕ್ಕೆ ಸೆಳೆದುಕೊಳ್ಳುವ ಪ್ರಯತ್ನ ನಡೆಯುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ಪರಿಷತ್ ಚುನಾವಣೆ ಬಂದಿದೆ. ನಾವು ಕಾರ್ಯಕರ್ತರನ್ನು ನಂಬಿ ಹೋರಾಟ ಮಾಡುತ್ತಿದ್ದೇವೆ ಎಂದು ಹೇಳಿದರು.
ಪಕ್ಷದಿಂದ ಬೆಳೆದವರು ಪಕ್ಷದ ಬೆನ್ನು ಇರಿದರು. ತುಮಕೂರಿನಲ್ಲಿ ದೇವೇಗೌಡರನ್ನು ಸೋಲಿಸಿದರು. ಕಾಂಗ್ರೆಸ್ ಪಕ್ಷದ ನಾಯಕರೇ ಕುತಂತ್ರ ನಡೆಸಿ ಮಾಜಿ ಪ್ರಧಾನಿಗಳ ಸೋಲಿಗೆ ಕಾರಣರಾದರು ಎಂದು ಅವರು ಕಿಡಿ ಕಾರಿದರು.

ಈಗಾಗಲೇ ಸತತ ಮಳೆಯಿಂದ ರೈತರು ಕಂಗಾಲಾಗಿದ್ದಾರೆ. ಎನ್‌ಡಿಆರ್‌ಎಫ್, ಎಸ್‌ಡಿಆರ್‌ಎಫ್ ಅನ್ನು ಬದಿಗಿಟ್ಟು ರೈತರನ್ನು ಉಳಿಸುವ ಕೆಲಸ ಮಾಡಬೇಕು. ಐವರು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇಂದು ಬೆಳಗ್ಗೆ ಕೂಡ ಒಬ್ಬ ರೈತ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಇದು ದೊಡ್ಡದಾಗುವ ಮೊದಲೇ ಸರ್ಕಾರ ಎಚ್ಚೆತ್ತುಕೊಳ್ಳಬೇಕು ಎಂದು ಕುಮಾರಸ್ವಾಮಿ ಸರ್ಕಾರವನ್ನು ಒತ್ತಾಯಿಸಿದರು.
ಮಳೆ ನೆರೆಗೆ ಸರಕಾರಗಳೇ ಹೊಣೆ:
ಕೆಂಪೇಗೌಡರು ಕಟ್ಟಿದ ಬೆಂಗಳೂರಲ್ಲಿ ಹಣಕ್ಕಾಗಿ ಕೆರೆ ಕಟ್ಟೆಗಳನ್ನೇ ನುಂಗಿದರು. ರಾಜಕಾಲುವೆಗಳನ್ನ ನುಂಗಲು ಬೆಂಬಲ ನೀಡಿದವರೇ ಈಗಿನ ಅನಾಹುತಗಳಿಗೆ ಹೊಣೆ ಹೊರಬೇಕು ಎಂದು ಹೇಳಿದರು.
ಅನೇಕ ದಿನಗಳಿಂದ ನಿರಂತರ ಮಳೆ ಸುರಿಯುತ್ತಿದೆ. ಸಿಎಂ, ಸಚಿವರು ಒಂದೊಂದು ರೀತಿ ಹೇಳಿಕೆ ನೀಡುತ್ತಿದ್ದಾರೆ. ಸಿಎಂ ಹತ್ತು ಲಕ್ಷ ಹೆಕ್ಟೇರ್ ಬೆಳೆ ನಾಶ ಎನ್ನುತ್ರಿದ್ದಾರೆ. ಕೃಷಿ ಸಚಿವರು ಐದು ಲಕ್ಷ ಹೆಕ್ಟೇರ್ ಭೂಮಿ ಬೆಳೆ ನಾಶ ಎನ್ನುತ್ತಿದ್ದಾರೆ. ಯಾರ ಮಾತನ್ನು ನಂಬಬೇಕು. ಸರಕಾರ ಇಂಥ ಹೇಳಿಕೆಗಳನ್ನು ಬಿಟ್ಟು ಕೂಡಲೇ ಬೆಳೆ ನಷ್ಟ ಮಾಡಿಕೊಂಡಿರುವ ರೈತರಿಗೆ ನೆರವಾಗಬೇಕು ಎಂದು ಕುಮಾರಸ್ವಾಮಿ ಆಗ್ರಹಪಡಿಸಿದರು.