ಜೆಡಿಎಸ್ ಬಿಜೆಪಿ ಕಾರ್ಯಕರ್ತರ ಮೈತ್ರಿ ಸಮ್ಮಿಲನ ಕಾರ್ಯಕ್ರಮ

ಸಂಜೆವಾಣಿ ವಾರ್ತೆ
ಕೆ.ಆರ್.ಪೇಟೆ.ಮಾ.30: ಮುಂಬರುವ ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಮೈತ್ರಿ ಪಕ್ಷಗಳಾಗಿರುವ ಜೆಡಿಎಸ್ ಹಾಗೂ ಬಿಜೆಪಿ ಕಾರ್ಯಕರ್ತರ ಸಮ್ಮಿಲನ ಕಾರ್ಯಕ್ರಮ ನಡೆಯಿತು.
ಮೈತ್ರಿ ಮಿಲನದ ಅಂಗವಾಗಿ ಶಾಸಕ ಹೆಚ್.ಟಿ. ಮಂಜು ಮತ್ತು ಬಿಜೆಪಿ ಕಾರ್ಯಕರ್ತರು ಪರಸ್ಪರ ಶಾಲು ಮತ್ತು ಭಾವುಟಗಳನ್ನು ಬದಲಾಯಿಸಿಕೊಂಡು ಮೈತ್ರಿ ಸಂದೇಶದ ಬದ್ದತೆಯನ್ನು ಸಾರಿದರು.
ಶಾಸಕ ಹೆಚ್.ಟಿ.ಮಂಜು ಮಾತನಾಡಿ ಕೇಂದ್ರದ ನಾಯಕರುಗಳ ಅಣತಿಯಂತೆ ರಾಜ್ಯದಲ್ಲಿ ಲೋಕಸಭಾ ಚುನಾವಣೆಗೆ ಜೆಡಿಎಸ್ ಹಾಗೂ ಬಿಜೆಪಿ ಪಕ್ಷಗಳು ರಾಜ್ಯದಲ್ಲಿ 28 ಲೋಕಸಭಾ ಕ್ಷೇತ್ರಗಳನ್ನು ಗೆಲ್ಲುವ ಉದ್ದೇಶದಿಂದ ಮೈತ್ರಿ ಮಾಡಿಕೊಂಡಿದ್ದು ಮಂಡ್ಯ ಜಿಲ್ಲೆಯಲ್ಲಿ ಮೈತ್ರಿ ಅಭ್ಯರ್ಥಿ ಮಾಜಿ ಸಿಎಂ ಕುಮಾರಣ್ಣನವರ ಗೆಲುವಿಗೆ ಟೊಂಕಕಟ್ಟಿ ನಿಲ್ಲಬೇಕು. ಈ ನಿಟ್ಟಿನಲ್ಲಿ ಬಿಜೆಪಿ ಕಾರ್ಯಕರ್ತರನ್ನು ಜೆಡಿಎಸ್ ಕಾರ್ಯಕರ್ತರು ವಿಶ್ವಾಸಕ್ಕೆ ತೆಗೆದುಕೊಂಡು ಲೋಕಸಭಾ ಚುನಾವಣೆಯಲ್ಲಿ ಒಗ್ಗಟ್ಟಾಗಿ ಕೆಲಸ ಮಾಡಬೇಕು. ಉತ್ತಮ ಆಡಳಿತಗಾರರಾಗಿರುವ ಕುಮಾರಣ್ಣ ಕೇಂದ್ರದಲ್ಲಿ ಮಂತ್ರಿಯಾಗುವುದು ಖಚಿತವಾಗಿದ್ದು ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸುತ್ತಾರೆ. ಆದ್ದರಿಂದ ಎರಡೂ ಪಕ್ಷಗಳ ಕಾರ್ಯಕರ್ತರು. ಮೈತ್ರಿ ಪಾಲನೆ ಮಾಡಬೇಕು. ಸಮನ್ವಯತೆಯಿಂದ ಕೆಲಸಮಾಡಬೇಕು. ಅಲ್ಲದೇ ಕುಮಾರಣ್ಣ ನಾಮ ಪತ್ರ ಸಲ್ಲಿಸುವ ದಿನ ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕರ್ತರು ಮಂಡ್ಯಕ್ಕೆ ಆಗಮಿಸಬೇಕು. ಕುಮಾರಣ್ಣ ಅವರ ನಾಮಪತ್ರ ಸಲ್ಲಿಕೆಯಂದು ಪಕ್ಷದ ಅಭಿಮಾನಿಗಳು ಮತ್ತು ಕಾರ್ಯಕರ್ತರು ಹಾಗೂ ಬಿಜೆಪಿಯ ಮೈತ್ರಿ ಕೂಟದ ಸರ್ವರನ್ನೂ ಆಹ್ವಾನಿಸಲು ಪೂರ್ವಭಾವಿಯಾಗಿ ಶನಿವಾರ ಪಟ್ಟಣದ ಟಿಎಪಿಸಿಎಂಎಸ್ ಸಮುದಾಯಭವನದಲ್ಲಿ ರಾಜ್ಯ ಯುವ ಜನತಾದಳದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಆಗಮಿಸುತ್ತಿದ್ದು ಇಂದಿನ ಸಭೆಗೆ ತಾಲ್ಲೂಕಿನ ಎರಡು ಪಕ್ಷಗಳ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವಂತೆ ಕೋರಿದರು.
ಮಂಡ್ಯ ಜಿಲ್ಲೆಗೆ ಕುಮಾರಣ್ಣ ಹೊರಗಿನವರಲ್ಲ. ಕುಮಾರಣ್ಣನ ಸ್ಪರ್ಧೆಯಿಂದ ಈಗಾಗಲೇ ಸೋಲೋಪ್ಪಿಕೊಂಡಿರುವ ಕಾಂಗ್ರೆಸ್ಸಿಗರು ಕುಮಾರಣ್ಣನ ಬಗ್ಗೆ ಲಘುವಾಗಿ ಮಾತನಾಡುತ್ತಿದ್ದಾರೆ. ಕುಮಾರಣ್ಣ ರಾಜ್ಯದ ನಾಯಕರಾಗಿದ್ದು ರಾಜ್ಯದ ಯಾವುದೇ ಭಾಗದಲ್ಲಿ ಬೇಕಾದರೂ ಸ್ಪರ್ಧಿಸುವ ಶಕ್ತಿಯಿದೆ. ರಾಜ್ಯದ ಉದ್ದಗಲಕ್ಕೂ ಕುಮಾರಣ್ಣ ಅಭಿಮಾನಿ ಬಳಗವಿದೆ. ಕುಮಾರಣ್ಣ ಮಂಡ್ಯ ಜಿಲ್ಲೆಯಲ್ಲಿ ಸ್ಪರ್ಧಿಸುವುದನ್ನು ಪ್ರಶ್ನಿಸುತ್ತಿರುವ ಕಾಂಗ್ರೆಸ್ಸಿಗರೇ ನಿಮ್ಮ ಸಿದ್ದರಾಮಯ್ಯ ಈ ಹಿಂದೆ ಬಾದಾಮಿಗೆ ಹೋಗಿ ಸ್ಪರ್ಧಿಸಿದ್ದು ಏಕೆ? ನಿಮ್ಮ ರಾಹುಲ್ ಗಾಂಧಿ ಸ್ವಕ್ಷೇತ್ರ ಅಮೇಥಿಯನ್ನು ಬಿಟ್ಟು ಕೇರಳದ ವೈನಾಡಿಗೆ ವಲಸೆ ಹೋಗಿರುವುದು ಏಕೆ? ದೇವೇಗೌಡರ ಕುಟುಂಬದ ರಾಜಕಾರಣದ ಬಗ್ಗೆ ಮಾತನಾಡುವ ನೀವು ನಿಮ್ಮ ಪಕ್ಷದ ಕುಟುಂಬ ರಾಜಕಾರಣವನ್ನು ಒಮ್ಮೆ ತಿರುಗಿ ನೋಡಿ. ಕಾಂಗ್ರೆಸ್ಸಿಗರು ತಮ್ಮ ಮಕ್ಕಳು ಮತ್ತು ಅಳಿಯಂದಿರಿಗೆ ಟಿಕೆಟ್ ನೀಡಿಲ್ಲವೆ? ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಮಗನನ್ನು ರಾಜಕೀಯಕ್ಕೆ ಕರೆ ತಂದಿಲ್ಲವೇ? ಡಿ.ಕೆ.ಶಿವಕುಮಾರ್ ರಾಜ್ಯದ ಉಪ ಮುಖ್ಯಮಂತ್ರಿಯಾಗಿದ್ದರೆ ಅವರ ಸಹೋದರ ಸಂಸತ್ ಸದಸ್ಯರಾಗಿಲ್ಲವೆ? ರಾಷ್ಟ್ರೀಯ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ರಾಜ್ಯ ಸಭಾ ಸದಸ್ಯರಾಗಿದ್ದರೆ ಅವರ ಪುತ್ರ ಪ್ರಿಯಾಂಕ ಖರ್ಗೆ ರಾಜ್ಯದ ಸಚಿವರಾಗಿಲ್ಲವೆ? ಖರ್ಗೆ ತಮ್ಮ ಅಳಿಯನಿಗೆ ಲೋಕಸಭಾ ಟಿಕೆಟ್ ಕೊಡಿಸಿಲ್ಲವೆ? ದೇವೇಗೌಡರ ಕುಟುಂಬ ಜನರ ಪ್ರೀತಿಯ ಮೇರೆಗೆ ರಾಜಕಾರಣ ಮಾಡುತ್ತಿದೆಯೇ ಹೊರತು ಜನಾಭಿಪ್ರಾಯಕ್ಕೆ ವಿರುದ್ದವಾಗಿ ಅಲ್ಲ ಎಂದ ಶಾಸಕ ಹೆಚ್.ಟಿ.ಮಂಜು ದೇಶದ ಹಿತದೃಷ್ಠಿಯಿಂದ ರಾಜ್ಯದಲ್ಲಿ ಜೆಡಿಎಸ್-ಬಿಜೆಪಿ ಮೈತ್ರಿಯಾಗಿದೆ. ನಮ್ಮ ಗುರಿ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರನ್ನು ಅತೀ ಹೆಚ್ಚು ಮತಗಳ ಅಂತರದಿಂದ ಗೆಲ್ಲಿಸುವ ಮೂಲಕ ಕೇಂದ್ರದಲ್ಲಿ ನರೇಂದ್ರ ಮೋದಿ ನೇತೃತ್ವದ ದೇಶ ಭಕ್ತರ ಸರ್ಕಾರವನ್ನು ಮತ್ತಷ್ಟು ಬಲಿಷ್ಠಗೊಳಿಸುವುದೆಂದರು.
ತಾಲ್ಲೂಕು ಬಿಜೆಪಿ ಅಧ್ಯಕ್ಷ ಸಾರಂಗಿ ನಾಗರಾಜು ಮಾತನಾಡಿ ನಮ್ಮ ಹೈಕಮಾಂಡ್ ಅಣತಿಯಂತೆ ಮೈತ್ರಿ ಅಭ್ಯರ್ಥಿಯ ಪರವಾಗಿ ಕೆಲಸ ಮಾಡಲು ಸಿದ್ದರಿದ್ದು ನಾಳೆಯಿಂದಲೇ ತಾಲ್ಲೂಕಿನಾದ್ಯಂತ ಮೈತ್ರಿ ಅಭ್ಯರ್ಥಿಯ ಪರವಾಗಿ ಪ್ರಚಾರ ಮಾಡಲಾಗುವುದು ಎಂದರು. ತಾಲೂಕು ಜೆಡಿಎಸ್ ಅಧ್ಯಕ್ಷ ಎ.ಎನ್.ಜಾನಕೀರಾಂ, ತಾ.ಪಂ ಮಾಜಿ ಸದಸ್ಯ ಮೋಹನ್,ಪುರಸಭಾ ಸದಸ್ಯ ನಟರಾಜ್,ಮಾಜಿ ಸದಸ್ಯ ಹೇಮಂತ್ ಕುಮಾರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.