ಜೆಡಿಎಸ್-ಬಿಜೆಪಿ ಒಳ ಒಪ್ಪಂದ ಹೇಳಿಕೆ, ಸಿದ್ದರಾಮಯ್ಯ ಹತಾಶೆ ಹೇಳಿಕೆ: ಸೋಮಣ್ಣ

ಚಾಮರಾಜನಗರ, ಏ.23:- ವರುಣಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸಿದ್ದರಾಮಯ್ಯ ಅವರು ಸೋಲಿನ ಭೀತಿಯಿಂದ ಹತಾಶೆ ಹೇಳಿಕೆ ನೀಡುತ್ತಿದ್ದಾರೆ ಎಂದು ವರುಣಾ ಹಾಗೂ ಚಾ.ನಗರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವಿ. ಸೋಮಣ್ಣ ತಿಳಿಸಿದರು.
ತಾಲೂಕಿನ ಆಲೂರಿನಲ್ಲಿ ಚುನಾವಣಾ ಪ್ರಚಾರ ಸಂದರ್ಭದಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ವರುಣಾ ವಿಧಾನಸಭಾ ಕ್ಷೇತ್ರದ ಪ್ರಚಾರದಲ್ಲಿರುವ ಸಿದ್ದರಾಮಯ್ಯ ಅವರಿಗೆ ಸೋಲಿನ ಬೀತಿ ಕಾಡುತ್ತಿರಬೇಕು. ಹೀಗಾಗಿ ಇಂಥ ಹೇಳಿಕೆಗಳನ್ನು ನೀಡುತ್ತಿದ್ದಾರೆ. ವಿರೋಧ ಪಕ್ಷದ ನಾಯಕರಾಗಿ, ಮಾಜಿ ಮುಖ್ಯಮಂತ್ರಿಗಳಾಗಿ ಅಧಿಕಾರ ಅನುಭವಿಸಿರುವ ಅವರು ಕ್ಷೇತ್ರ ಅಭಿವೃದ್ದಿ ಪಡಿಸಿದ್ದರೆ ಜನರ ಬಳಿಗೆ ಹೋಗಿ ಧೈರ್ಯದಿಂದ ಮತಯಾಚನೆ ಮಾಡುಬಹುದಲ್ಲವೆ. ಬಿಜೆಪಿಯ ಗೆಲುವಿನ ನಾಗಲೋಟವನ್ನು ತಡೆಯಲು ಮತದಾರರನ್ನು ದಿಕ್ಕು ತಪ್ಪಿಸಲು ಇಂಥ ಒಳ ಒಪ್ಪಂದ, ಹೊರ ಒಪ್ಪಂದದ ಮಾತುಗಳನ್ನಾಡುತ್ತಿದ್ದಾರೆ ಎಂದರು.
ಸಿದ್ದರಾಮಯ್ಯ ಅವರೇ ಇದು ಚುನಾವಣೆ. ಮತದಾನ ಹದಿನೈದು ದಿನ ಇದೆ. ಕ್ಷೇತ್ರ ಸುತ್ತಾಡಿ, ನಾನು ಸಹ ಕ್ಷೇತ್ರ ಪ್ರವಾಸ ಮಾಡುತ್ತಿದ್ದೇನೆ. ಮತದಾರರು ನೀಡುವ ತೀರ್ಮಾನವೇ ಅಂತಿಮವಾಗಿರುತ್ತದೆ. ಯಾವುದೇ ರೀತಿಯ ಒಳ ಒಪ್ಪಂದ ಮಾಡಿಕೊಂಡು ಕ್ಷೇತ್ರಕ್ಕೆ ಬಂದಿಲ್ಲ. ತಾಯಿ ಚಾಮುಂಡೇಶ್ವರಿ ದೇವಿಯೊಂದಿಗೆ ನನ್ನ ಒಪ್ಪಂದವಾಗಿದೆ ಎಂದು ಸೋಮಣ್ಣ ತಿಳಿಸಿದರು.
ಲಿಂಗಾಯತರಿಗೆ ಬಿಜೆಪಿ ಅನ್ಯಾಯ ಮಾಡುತ್ತಿದೆ ಎಂದು ಹೇಳುವ ಕಾಂಗ್ರೆಸ್ ಪಕ್ಷದವರಿಗೆ ನೈತಿಕತೆ ಇಲ್ಲ. ಅವರು ಪಕ್ಷದಲ್ಲಿದ್ದ ಲಿಂಗಾಯತರ ಗತಿ ಏನಾಯಿತು. ನಿಜಲಿಂಗಪ್ಪ, ವಿರೇಂದ್ರ ಪಾಟೀಲ್, ರಾಜಶೇಖರಮೂರ್ತಿ ಅವರಂಥದವರನ್ನು ಯಾವ ರೀತಿ ನಡೆಸಿಕೊಂಡಿದೆ ಎಂಬುವುದನ್ನು ರಾಜ್ಯದ ಜನರು ಅರ್ಥ ಮಾಡಿಕೊಂಡಿದ್ದಾರೆ. ಬಿಜೆಪಿಯಲ್ಲಿ ಲಿಂಗಾಯತರಿಗೆ ಮುಖ್ಯಮಂತ್ರಿ ಸಹಿತ ಅನೇಕ ಹುದ್ದೆಗಳನ್ನು ನೀಡಿ, ಗೌರವದಿಂದ ನೋಡಿಕೊಳ್ಳುತ್ತಿದೆ. ಹೀಗಾಗಿ ಬಿಜೆಪಿಯತ್ತ ಲಿಂಗಾಯತರ ಹೋಗುವುದು ಸಾಮಾನ್ಯವಾಗಿದೆ. ಕಾಂಗ್ರೆಸ್ ಲಿಂಗಾಯತರಿಗೆ ಏನು ಮಾಡಿದೆ ಎಂಬುದನ್ನು ತಿಳಿಸಲಿ. ಲಿಂಗಾಯತರನ್ನು ಸಿಎಂ. ಮಾಡುತ್ತೇವೆ ಎಂದು ಘೊಷಣೆ ಮಾಡಲಿ ಎಂದು ಸೋಮಣ್ಣ ಸವಾಲು ಹಾಕಿದರು.
ಈ ಸಂದರ್ಭದಲ್ಲಿ ಜಿ.ಪಂ. ಮಾಜಿ ಅಧ್ಯಕ್ಷರುಗಳಾದ ಆಲೂರು ನಟರಾಜು, ನಾಗಶ್ರೀ ಪ್ರತಾಪ್, ಮಾಜಿ ಸದಸ್ಯ ಆರ್. ಬಾಲರಾಜು, ಕ್ಯಾಂಪ್ಕೋ ಅಧ್ಯಕ್ಷ ಎಸ್. ಮಹದೇವಯ್ಯ, ಮುಖಂಡರುಗಳಾದ ವೆಂಕಟರಮಣಸ್ವಾಮಿ (ಪಾಪು), ದೊಡ್ಡರಾಯಪೇಟೆ ಗಿರೀಶ್ ಮೊದಲಾದವರು ಇದ್ದರು.