ಜೆಡಿಎಸ್ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ

ದೇವದುರ್ಗ,ಮಾ.೨೪- ವೈಯಕ್ತಿಕ ಕಾರಣದಿಂದ ಹಾಗೂ ಜೆಡಿಎಸ್‌ನಲ್ಲಿ ಮೂಲ ಕಾರ್ಯಕರ್ತರನ್ನು ಮುಖಂಡರನ್ನು ಕಡೆಗಣಿಸಿದ ಹಿನ್ನೆಲೆಯಲ್ಲಿ ಜೆಡಿಎಸ್ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡುತ್ತಿದ್ದೇನೆ ಎಂದು ಜೆಡಿಎಸ್ ತಾಲೂಕು ಸಂಘಟನೆ ಕಾರ್ಯದರ್ಶಿ ಹಾಗೂ ಸ್ವಾಭಿಮಾನಿ ರೈತರ ವೇದಿಕೆ ಕಾರ್ಯಾಧ್ಯಕ್ಷ ವೀರೇಶ ಪಾಟೀಲ್ ಹೂವಿನಹೆಡಗಿ ಹೇಳಿದರು.
ಪಟ್ಟಣದ ಪತ್ರಿಕಾ ಭವನದಲ್ಲಿ ಕರೆದಿದ್ದ ಸುದ್ದಿಗೋಷ್ಠಿ ಉದ್ದೇಶಿಸಿ ಶುಕ್ರವಾರ ಮಾತನಾಡಿದರು. ನಾವು ರೈತ ಸ್ವಾಭಿಮಾನಿ ವೇದಿಕೆಯಿಂದ ಹಲವು ಕಾರ್ಯಕ್ರಮ ಆಯೋಜಿಸಿ ರೈತರಿಗೆ ಬೆನ್ನೆಲುಬಾಗಿ ಕೆಲಸ ಮಾಡಿದ್ದೇವೆ. ಕಲ್ಲು ಕಂಬ ಸ್ಪರ್ಧೆ, ಭಾರದ ಕಲ್ಲು ಎಳೆಯುವ ಸ್ಪರ್ಧೆ ಆಯೋಜಿಸಿ ರೈತರಿಗೆ ಮನೋರಂಜನೆ ನೀಡುವ ಜತೆಗೆ ಸರ್ಕಾರದ ವಿವಿಧ ಯೋಜನೆಗಳನ್ನು ರೈತರಿಗೆ ತಲುಪಿಸುವ ಕೆಲಸ ಮಾಡಿದ್ದೇವೆ.
ರೈತರಿಗೆ ರಾಜಕೀಯ ಪ್ರಭುದ್ಧತೆ ಬೆಳೆಸುವ ಜತೆಗೆ ರಾಜಕೀಯ ಜಾಗೃತಿಗಾಗಿ ೨೦೧೮ರ ವಿಧಾನಸಭೆ ಚುನಾವಣೆಯಲ್ಲಿ ಪಕ್ಷೇತರರ ಅಭ್ಯರ್ಥಿಯಾಗಿದ್ದ ಕರೆಮ್ಮ ಜಿ.ನಾಯಕಗೆ ಬೆಂಬಲ ನೀಡಿದ್ದೇವೆ. ಅಲ್ಲದೆ ನಂತರ ಜೆಡಿಎಸ್‌ಗೆ ಸೇರ್ಪಡೆಯಾಗಿ, ತಾಲೂಕು ಸಂಘಟನೆ ಕಾರ್ಯದರ್ಶಿಯಾಗಿ ಕೆಲಸ ಮಾಡಿದ್ದೇವೆ. ಆದರೆ, ಇತ್ತೀಚೆಗೆ ಪಕ್ಷದಲ್ಲಿ ಆಗುತ್ತಿರುವ ಬೆಳವಣಿಗೆಯಿಂದ ಬೇಸತ್ತು ನಾನು ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡುವ ಜತೆಗೆ ಸ್ವಾಭಿಮಾನಿ ರೈತರ ವೇದಿಕೆ ನೀಡಿದ್ದ ಬೆಂಬಲಕೂಡ ವಾಪಸ್ ಪಡೆಯುತ್ತಿದ್ದೇವೆ.
ಮುಂದಿನ ದಿನಗಳಲ್ಲಿ ಹೋರಾಟ ರೂಪರೇಷ ರೂಪಿಸಲು ಹಾಗೂ ರೈತರ ಸಮಸ್ಯೆಗಳನ್ನು ಸರ್ಕಾರಕ್ಕೆ ಗಮನಕ್ಕೆ ತರಲು ಹಾಗೂ ಯುವಕರಿಗೆ ಸೂಕ್ತ ಮಾರ್ಗದರ್ಶನ ನೀಡುವ ಜತೆಗೆ ಆತ್ಮವಿಶ್ವಾಸ ತುಂಬಲು ಹೂವಿನಹೆಡಗಿ ಶ್ರೀಗಡ್ಡೆಗೂಳಿ ಬಸವೇಶ್ವರ ಕಲ್ಯಾಣ ಮಂಟಪದಲ್ಲಿ ಯುವ ಚೈತನ್ಯ ಸಮಾವೇಶ ಆಯೋಜಿಸಲಾಗಿದೆ. ಸಮಾವೇಶ ಕುರಿತು ಚರ್ಚಿಸಲು ಪಟ್ಟಣದ ಹೊರವಲಯದಲ್ಲಿ ಮಾಚ್.೨೫ರಂದು ಪೂರ್ವಭಾವಿ ಸಭೆ ಕರೆಯಲಾಗಿದೆ. ಅಂದು ಪದಾಧಿಕಾರಿಗಳು, ಮುಖಂಡರ ಜತೆ ಚರ್ಚಿಸಿ ಮುಂದಿನ ದಿನಗಳಲ್ಲಿ ಯಾವ ಪಕ್ಷಕ್ಕೆ ಬೆಂಬಲಿಸಬೇಕು ಹಾಗೂ ಯಾವ ಪಕ್ಷ ಸೇರ್ಪಡೆಯಾಗಬೇಕು ಎನ್ನುವ ಬಗ್ಗೆ ತೀರ್ಮಾನ ಕೈಗೊಳ್ಳುತ್ತೇವೆ ಎಂದು ಹೇಳಿದರು.
ಮುಖಂಡರಾದ ಶರಣು, ಶಾಂತಕುಮಾರ, ರಮೇಶ, ಚಂದ್ರಶೇಖರ ಇತರರಿದ್ದರು.