ಜೆಡಿಎಸ್ ಪ್ರಾಥಮಿಕ ಸದಸತ್ವಕ್ಕೆ ರಾಜೀನಾಮೆ

ದೇವದುರ್ಗ,ಮಾ.೨೪- ಜೆಡಿಎಸ್‌ನಲ್ಲಿನ ನಿರಂಕುಶ ಆಡಳಿತ, ಏಕಪಕ್ಷೀಯ ತೀರ್ಮಾನ ಹಾಗೂ ಮೂಲ, ನಿಷ್ಠಾವಂತ ಕಾರ್ಯಕರ್ತರು ಹಾಗೂ ಮುಖಂಡರಿಗೆ ಬೆಲೆ ಸಿಗದ ಕಾರಣ ಜೆಡಿಎಸ್‌ನ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡುತ್ತಿದ್ದೇನೆ ಎಂದು ಜೆಡಿಎಸ್ ಹಿರಿಯ ಮುಖಂಡ ಬಾಪುಗೌಡ ಚಿಕ್ಕಹೊನ್ನಕುಣಿ ಹೇಳಿದರು.
ಪಟ್ಟಣದ ಪತ್ರಿಕಾ ಭವನದಲ್ಲಿ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಶುಕ್ರವಾರ ಮಾತನಾಡಿದರು. ೨೦೧೩ರಲ್ಲಿ ನಾವು ಕಾಂಗ್ರೆಸ್ ತೊರೆದು ಎಚ್‌ಡಿ ದೇವೇಗೌಡರ ಕಾರ್ಯಕ್ರಮ ಹಾಗೂ ನೀರಾವರಿ ಕಾರ್ಯ ಮೆಚ್ಚಿ ಜೆಡಿಎಸ್‌ಗೆ ಸೇರ್ಪಡೆಯಾಗಿದ್ದೆವು. ೨೦೧೬ರ ಉಪಚುನಾವಣೆ ಹಾಗೂ ೨೦೧೮ರ ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್ ಪರವಾಗಿ ಕೆಲಸ ಮಾಡಿದ್ದು, ತಳಮಟ್ಟದಿಂದ ಪಕ್ಷ ಸಂಘಟನೆ ಮಾಡಿದ್ದೇವೆ.
ಆದರೆ, ಇತ್ತೀಚೆಗೆ ಜೆಡಿಎಸ್‌ನಲ್ಲಿ ನಡೆಯುತ್ತಿರುವ ಬೆಳವಣಿಗೆಗಳು ಮನಸಿಗೆ ನೋವುಂಟು ಮಾಡಿದ್ದು, ಏಕ ವ್ಯಕ್ತಿಯ ಪ್ರಭಾವ ಹೆಚ್ಚಾಗುತ್ತಿದೆ. ಪ್ರಜಾಪ್ರಭುತ್ವ ವ್ಯವಸ್ಥೆ ಜೆಡಿಎಸ್ ಕುಸಿಯುತ್ತಿದ್ದು, ನಿರಂಕುಶ ಆಡಳಿತ ದಿನೇ ದಿನೆ ಹೆಚ್ಚಾಗುತ್ತಿದೆ. ಮೂಲ ಕಾರ್ಯಕರ್ತರು ಹಾಗೂ ಪಕ್ಷಕ್ಕಾಗಿ ದುಡಿಯುವ ಮುಖಂಡರನ್ನು ಕಡೆಗಣನೆ ಮಾಡಲಾಗಿದೆ. ನಿನ್ನೆ ಮೊನ್ನೆ ಬಂದವರು, ಪಕ್ಷೇತರರು, ಸಾಮಾನ್ಯ ಜನರಿಗೆ ದೊಡ್ಡ ಹುದ್ದೆ ನೀಡಿ ಜೆಡಿಎಸ್ ನಾಯಕರು ನಿರಂಕುಶ ಆಡಳಿತ ನಡೆಸುತ್ತಿದ್ದಾರೆ.
ನನ್ನ ಬೆಂಬಲಿಗರೊಂದಿಗೆ ಇಂದು ಜೆಡಿಎಸ್ ಪ್ರಾಥಮಿಕ ಸದಸ್ಯತ್ವ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿದ್ದೇವೆ. ಮುಂದಿನ ದಿನಗಳಲ್ಲಿ ಬೆಂಬಲಿಗರ ಸಭೆ ಕರೆದು ಅವರ ಜತೆ ಚರ್ಚಿಸಿ ಯಾವು ಪಕ್ಷಕ್ಕೆ ಸೇರ್ಪಡೆಯಾಗಬೇಕು ಎನ್ನುವದನ್ನು ನಿರ್ಧಾರ ಮಾಡುತ್ತೇವೆ ಎಂದು ಹೇಳಿದರು.
ಮುಖಂಡರಾದ ಡಾ.ಶಿವಶರಣಪ್ಪ, ಮಹಮ್ಮದ್ ಅಜಿಮಿಯಾ ಗಲಗ, ಶಂಶಾಲಂ ಎನ್.ಗಣೇಕಲ್, ಮಹಿಪಾಲ್‌ರೆಡ್ಡಿ ನಗರಗುಂಡ ಇತರರಿದ್ದರು.