ಜೆಡಿಎಸ್ ಪಕ್ಷ ರಾಜ್ಯದಲ್ಲಿ ಸ್ವತಂತ್ರವಾಗಿ ಅಧಿಕಾರಕ್ಕೆ ತಂದರೆ ದೇಶಕ್ಕೆ ಮಾದರಿಯಾಗುವ ಕಾರ್ಯಕ್ರಮ ಜಾರಿ

ಪಿರಿಯಾಪಟ್ಟಣ: ಡಿ.06:- ಜೆಡಿಎಸ್ ಪಕ್ಷವನ್ನು ರಾಜ್ಯದಲ್ಲಿ ಸ್ವತಂತ್ರವಾಗಿ ಅಧಿಕಾರಕ್ಕೆ ತಂದರೆ ದೇಶಕ್ಕೆ ಮಾದರಿಯಾಗುವ ಕಾರ್ಯಕ್ರಮ ಜಾರಿ ಮಾಡುವುದಾಗಿ ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಹೇಳಿದರು.
ಪಟ್ಟಣದ ಮಂಜುನಾಥ ಸಮುದಾಯ ಭವನದಲ್ಲಿ ನೆಡೆದ ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಚುನಾವಣೆಯ ಜೆಡಿಎಸ್ ಅಭ್ಯರ್ಥಿ ಸಿ.ಎನ್ ಮಂಜೇಗೌಡ ಪರ ಮತಯಾಚಿಸಿ ಅವರು ಮಾತನಾಡಿದರು, ಕಾಂಗ್ರೆಸ್ ಪಕ್ಷ ರಾಜ್ಯದಲ್ಲಿ ಅಧಿಕಾರದಲ್ಲಿದ್ದ ಸಂದರ್ಭ ರೈತ ಆತ್ಮಹತ್ಯೆ ಪ್ರಕರಣಗಳು ಹೆಚ್ಚು ನಡೆದಿದ್ದು ಮನಗಂಡು ರೈತರ ಎಲ್ಲ ಬಗೆಯ ಸಾಲ ಮನ್ನಾ ಮಾಡುವ ನಿಟ್ಟಿನಲ್ಲಿ ಕಾಂಗ್ರೆಸ್ ಪಕ್ಷದ ದೆಹಲಿ ನಾಯಕರ ಒತ್ತಡಕೆ ಮಣಿದು ಸಮ್ಮಿಶ್ರ ಸರ್ಕಾರ ರಚನೆಗೆ ಒಪ್ಪಿಗೆ ಸೂಚಿಸಲಾಯಿತು ಆದರೆ ವಿರೋಧಿಗಳೊಂದಿಗೆ ಸೇರಿ ಸರ್ಕಾರ ರಚಿಸಿದ್ದು ಪಕ್ಷಕ್ಕೆ ಮುನ್ನಡೆ ನೀಡುವ ಬದಲು ಹಿನ್ನಡೆಯಾಯಿತು, ಮುಂದೆ ಯಾವುದೇ ಕಾರಣಕ್ಕೂ ಕಾಂಗ್ರೆಸ್ ಪಕ್ಷದ ಜೊತೆ ಕೈ ಜೋಡಿಸುವುದಿಲ್ಲ, ನಿಷ್ಠಾವಂತ ಕಾರ್ಯಕರ್ತರೇ ಪಕ್ಷದ ಆಸ್ತಿ ಅವರಿಂದಲೇ ಪಕ್ಷ ಸದೃಢವಾಗಿ ಬೆಳೆದಿದೆ, ಉತ್ತಮ ಆರೋಗ್ಯ ಶಿಕ್ಷಣ ರೈತರ ಅಭಿವೃದ್ಧಿ ಸೇರಿದಂತೆ ಪಂಚ ಸೂತ್ರಗಳನ್ನು ಮುಂದಿಟ್ಟುಕೊಂಡು ಮುಂದಿನ ಚುನಾವಣೆಯನ್ನು ಎದುರಿಸಲಿದ್ದು ರಾಜ್ಯದ ಜನತೆ ಆಶೀರ್ವದಿಸಬೇಕು, ಪಕ್ಷದ ಅಭ್ಯರ್ಥಿ ಸಿ.ಎನ್ ಮಂಜೇಗೌಡ ಅವರಿಗೆ ಪ್ರಥಮ ಪ್ರಾಶಸ್ತ್ಯದ ಮತ ನೀಡುವ ಮೂಲಕ ಗೆಲ್ಲಿಸಿ ಪಕ್ಷದ ಬೆಳವಣಿಗೆಗೆ ಕೈಜೋಡಿಸುವಂತೆ ಮನವಿ ಮಾಡಿದರು.
ಶಾಸಕ ಕೆ.ಮಹದೇವ್ ಅವರು ಮಾತನಾಡಿ ಕ್ಷೇತ್ರದಲ್ಲಿ ಜೆಡಿಎಸ್ ಪಕ್ಷ ಸುಭದ್ರವಾಗಿದ್ದು ವಿರೋಧಿಗಳು ನನ್ನ ಏಳಿಗೆ ಸಹಿಸದೆ ಎಷ್ಟೇ ಟೀಕೆ ಮಾಡಿದರೂ ಅಭಿವೃದ್ಧಿಯ ಮೂಲಕ ಉತ್ತರ ನೀಡಲಾಗುತ್ತಿದೆ, ಸಿ.ಎನ್ ಮಂಜೇಗೌಡ ಅವರನ್ನು ಗೆಲ್ಲಿಸಿ ಕ್ಷೇತ್ರದಲ್ಲಿ ಅವರ ಮುಖಾಂತರ ಮತ್ತಷ್ಟು ಅಭಿವೃದ್ಧಿ ಕಾರ್ಯಕ್ರಮಗಳಿಗೆ ಕೈಜೋಡಿಸುವ ನಿಟ್ಟಿನಲ್ಲಿ ಕಾರ್ಯಕರ್ತರು ಸಂಘಟಿತರಾಗುವಂತೆ ತಿಳಿಸಿದರು.
ಶಾಸಕ ಅಶ್ವಿನ್ ಕುಮಾರ್ ಅವರು ಮಾತನಾಡಿ ಗ್ರಾ.ಪಂ ಸದಸ್ಯ ಸ್ಥಾನದಿಂದ ಹಿಡಿದು ಹಲವು ಸ್ಥಾನಗಳನ್ನು ಅಲಂಕರಿಸಿ ಜನಪರ ಕೆಲಸ ನಿರ್ವಹಿಸಿರುವ ಸಿ.ಎನ್ ಮಂಜೇಗೌಡ ಅವರಿಗೆ ಗ್ರಾ.ಪಂ ಸದಸ್ಯರ ಸಂಕಷ್ಟಗಳ ಬಗ್ಗೆ ಅರಿವಿದ್ದು ಅವರ ಗೆಲುವಿಗೆ ಪ್ರತಿಯೊಬ್ಬರು ಶ್ರಮಿಸುವಂತೆ ಕೋರಿದರು. ಅಭ್ಯರ್ಥಿ ಸಿ.ಎನ್ ಮಂಜೇಗೌಡ ಮಾತನಾಡಿ ನಾನು ಸೈನಿಕನಾಗಿ ದೇಶಸೇವೆಯನ್ನು ಪ್ರಮಾಣಿಕವಾಗಿ ಮಾಡಿದ್ದು ವಿಧಾನಪರಿಷತ್ ಸದಸ್ಯರಾಗಿ ಆಯ್ಕೆಯಾದರೆ ನನ್ನ ಕೆಲಸವನ್ನು ಇಲ್ಲಿ ಸಹ ಪ್ರಾಮಾಣಿಕವಾಗಿ ನಿರ್ವಹಿಸಿ ಗ್ರಾ.ಪಂ ಗಳ ಅಭಿವೃದ್ಧಿಗೆ ಶ್ರಮಿಸುವುದಾಗಿ ತಿಳಿಸಿದರು.
ಮೈಮುಲ್ ಅಧ್ಯಕ್ಷ ಪಿ.ಎಂ ಪ್ರಸನ್ನ, ಜೆಡಿಎಸ್ ತಾಲ್ಲೂಕು ಅಧ್ಯಕ್ಷ ಅಣ್ಣಯ್ಯ ಶೆಟ್ಟಿ, ಜಿಲ್ಲಾಧ್ಯಕ್ಷ ನರಸಿಂಹಸ್ವಾಮಿ ಮಾತನಾಡಿದರು.
ಇದೇ ವೇಳೆ ಹಲವರು ಅನ್ಯ ಪಕ್ಷಗಳನ್ನು ತೊರೆದು ಜೆಡಿಎಸ್ ಪಕ್ಷ ಸೇರಿದರು. ಈ ಸಂದರ್ಭ ಪುರಸಭೆ ಅಧ್ಯಕ್ಷ ಮಂಜುನಾಥ್ ಸಿಂಗ್, ಉಪಾಧ್ಯಕ್ಷೆ ನಾಗರತ್ನ ಮತ್ತು ಜೆಡಿಎಸ್ ಪಕ್ಷದ ಸದಸ್ಯರು, ಜಿ.ಪಂ ಮಾಜಿ ಸದಸ್ಯರಾದ ಕೆ.ಎಸ್ ಮಂಜುನಾಥ್, ಜಯಕುಮಾರ್, ಎಂಡಿಸಿಸಿ ಬ್ಯಾಂಕ್ ನಿರ್ದೇಶಕ ಸಿ.ಎನ್ ರವಿ, ಮೈಮುಲ್ ನಿರ್ದೇಶಕ ಎಚ್.ಡಿ ರಾಜೇಂದ್ರ, ತಾ.ಪಂ ಮಾಜಿ ಸದಸ್ಯರಾದ ಟಿ.ಈರಯ್ಯ, ಎ.ಟಿ ರಂಗಸ್ವಾಮಿ, ರಘುನಾಥ್, ಅತ್ತರ್ ಮತೀನ್, ಮಾಜಿ ಮೇಯರ್ ರವಿಕುಮಾರ್, ಮುಖಂಡರಾದ ಕುಮಾರ್, ವಿವೇಕ್, ದೇವರಾಜಒಡೆಯರ್, ಸೋಮಶೇಖರ್, ವಿವಿಧ ಘಟಕಗಳ ಪದಾಧಿಕಾರಿಗಳಾದ ಪ್ರೀತಿ ಅರಸ್, ವಿದ್ಯಾಶಂಕರ್, ರಫೀಕ್, ಹೇಮಂತ್ ಕುಮಾರ್, ಜೆಡಿಎಸ್ ಪಕ್ಷದ ಗ್ರಾ.ಪಂ ಅಧ್ಯಕ್ಷರು ಮತ್ತು ಸದಸ್ಯರು ಹಾಗೂ ಮುಖಂಡರು ಹಾಜರಿದ್ದರು.