ಜೆಡಿಎಸ್ ಪಕ್ಷದಿಂದ ಬಡದಾಳ ಉಚ್ಚಾಟನೆ

ಕಲಬುರಗಿ,ಸೆ.25-ಪಕ್ಷದ ಶಿಸ್ತು ಉಲ್ಲಂಘನೆ ಆರೋಪದ ಮೇರೆಗೆ ಜೆಡಿಎಸ್ ಅಫಜಲಪುರ ತಾಲೂಕು ಘಟಕದ ಮಾಜಿ ಅಧ್ಯಕ್ಷ ರಾಜಕುಮಾರ್ ಬಡದಾಳ ಅವರನ್ನು ಪಕ್ಷದಿಂದ ಉಚ್ಚಾಟನೆ ಮಾಡಲಾಗಿದೆ.
ಈ ಕುರಿತು ಜೆಡಿಎಸ್ ಜಿಲ್ಲಾ ಮಹಾಪ್ರಧಾನ ಕಾರ್ಯದರ್ಶಿ ಶಾಮರಾವ್ ಸೂರನ್ ಆದೇಶ ಹೊರಡಿಸಿದ್ದು, ತಕ್ಷಣದಿಂದ ಬಡದಾಳ ಅವರು ಪಕ್ಷದ ಹೆಸರು ಮತ್ತು ಚಿಹ್ನೆ ಬಳಸುವುದನ್ನು ನಿಲ್ಲಿಸಬೇಕೆಂದು ತಾಕೀತು ಮಾಡಿದ್ದಾರೆ.
ಸುಮಾರು 17 ವರ್ಷ ಬಡದಾಳ ಅವರು ಜೆಡಿಎಸ್ ಅಫಜಲಪುರ ತಾಲೂಕು ಘಟಕದ ಅಧ್ಯಕ್ಷರಾಗಿದ್ದರು. ಹೊಸಬರಿಗೆ ಅವಕಾಶ ನೀಡಬೇಕೆಂಬ ಕಾರಣಕ್ಕೆ ಇತ್ತೀಚೆಗೆ ಜಮೀಲ್ ಗೌಂಡಿ ಅವರನ್ನು ತಾಲೂಕು ಘಟಕದ ಅಧ್ಯಕ್ಷರಾಗಿ ನೇಮಕ ಮಾಡಲಾಗಿತ್ತು. ಇಷ್ಟಾದರೂ ಪಕ್ಷದ ವರಿಷ್ಠರ ಆದೇಶವನ್ನು ಮೀರಿ ತಾವೇ ಇನ್ನೂ ಅಫಜಲಪುರ ತಾಲೂಕು ಘಟಕದ ಅಧ್ಯಕ್ಷರು ಎಂದು ರಾಜಕುಮಾರ್ ಬಡದಾಳ ಬಿಂಬಿಸಿಕೊಳ್ಳುವ ಯತ್ನ ನಡೆಸಿದ್ದರು. ಪಕ್ಷದಲ್ಲಿ ಇಂತಹ ವರ್ತನೆ ಸರಿಯಲ್ಲ ಎಂದು ಖುದ್ದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ತಾಕೀತು ಮಾಡಿದಾಗ್ಯೂ ಬಡದಾಳ ತಮ್ಮ ವರ್ತನೆ ತಿದ್ದಿಕೊಂಡಿರಲಿಲ್ಲ. ಹೀಗಾಗಿ, ಜೆಡಿಎಸ್ ಜಿಲ್ಲಾಧ್ಯಕ್ಷ ಕೇದಾರಲಿಂಗಯ್ಯ ಹಿರೇಮಠ ಅವರ ನಿರ್ದೇಶನದ ಮೇರೆಗೆ ಬಡದಾಳ ಅವರನ್ನು ಜೆಡಿಎಸ್ ಪಕ್ಷದಿಂದ ಉಚ್ಚಾಟಿಸಲಾಗಿದೆ ಎಂದು ಸೂರನ್ ಸ್ಪಷ್ಟಪಡಿಸಿದ್ದಾರೆ.