ಜೆಡಿಎಸ್ ಪಕ್ಷಕ್ಕೆ ಭರ್ಜರಿ ಗೆಲುವು

ಸಂಜೆವಾಣಿ ವಾರ್ತೆ
ಪಿರಿಯಾಪಟ್ಟಣ: ಸೆ.04:- ಪಿರಿಯಾಪಟ್ಟಣ ತಾಲೂಕಿನ ಕಸಬಾ ಹೋಬಳಿಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆಡಳಿತ ಮಂಡಳಿಗೆ ನಡೆದ ಚುನಾವಣೆಯಲ್ಲಿ ಜೆಡಿಎಸ್ ಬೆಂಬಲಿತ ಬಣ 11 ಸ್ಥಾನಗಳು ಕಾಂಗ್ರೆಸ್ ಪಕ್ಷದ ಬೆಂಬಲಿತ ಅಭ್ಯರ್ಥಿ 1 ಸ್ಥಾನಗಳನ್ನು ಗಳಿಸಿ ಜೆಡಿಎಸ್ ಭರ್ಜರಿ ಗೆಲುವು ಸಾಧಿಸಿದ್ದಾರೆ.
ಒಟ್ಟು 12 ನಿರ್ದೇಶಕ ಸ್ಥಾನಗಳಿಗೆ ಭಾನುವಾರ ನಡೆದ ಚುನಾವಣೆಯಲ್ಲಿ ಜೆಡಿಎಸ್ ಬೆಂಬಲಿತ 11 ನಿರ್ದೇಶಕರು ಜಯಗಳಿಸುವ ಮೂಲಕ ಗೆಲುವಿನ ನಗೆ ಬೀರಿದ್ದಾರೆ. ಸಾಲಗಾರರಲ್ಲದ ಕ್ಷೇತ್ರದಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಜಯ ಸಾಧಿಸಿದ್ದಾರೆ. ಜೆಡಿಎಸ್ ಬೆಂಬಲಿತ ಸದಸ್ಯರಾದ ಹೆಚ್.ಬಿ.ಸುರೇಶ್, ಹೆಚ್.ಬಿ.ರಮೇಶ್, ರಾಮೇಗೌಡ, ಸೈಯದ್ ಜಮೀಲ್, ಬಿ.ಆರ್.ಸತೀಶ್ ಕುಮಾರ್, ಪಿ.ಕೆ.ಕುಮಾರ್, ವಿ.ಆರ್.ವೆಂಕಟೇಶ್, ಗೀತಾ, ಎಸ್.ಜಿ.ನಳಿನಿ, ಶೋಭಾ, ಕರಿನಾಯಕ ಮತ್ತು ಕಾಂಗ್ರೆಸ್ ಬೆಂಬಲಿತ ಸದಸ್ಯ ರಾಮಕೃಷ್ಣ ಜಯಗಳಿಸಿದ್ದಾರೆ.
ಐದು ವರ್ಷಗಳ ಅವಧಿಯ ಆಡಳಿತ ಮಂಡಳಿಗೆ ನಡೆದ ಚುನಾವಣೆಯಲ್ಲಿ ಜೆಡಿಎಸ್ ಮತ್ತು ಕಾಂಗ್ರೆಸ್ ಬೆಂಬಲಿತ ಸದಸ್ಯರ ನಡುವೆ ಬಿರುಸಿನ ಸ್ಪರ್ಧೆ ನಡೆದಿದ್ದಾದರೂ ಕೊನೆಯಲ್ಲಿ ಜೆಡಿಎಸ್ ಬೆಂಬಲಿತ ಸದಸ್ಯರು ಜಯಗಳಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಫಲಿತಾಂಶ ಪ್ರಕಟಗೊಳ್ಳುತ್ತಿದ್ದಂತೆ ಜೆಡಿಎಸ್ ಕಾರ್ಯಕರ್ತರು ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮ ಆಚರಿಸಿದರು. ಈ ಸಂದರ್ಭದಲ್ಲಿ ಜೆಡಿಎಸ್ ಮುಖಂಡರಾದ ಎಸ್.ರಾಮು, ಮಂಜುನಾಥ್ ಸಿಂಗ್, ರಾಮಚಂದ್ರು, ಬಿ.ಶಿವಣ್ಣ, ಗೋಪಾಲ್, ಪಾರೆಕೊಪ್ಪಲು ಚಂದ್ರು, ಶಿವರಾಜು, ಸೇರಿದಂತೆ ಮತ್ತಿತರರು ಹಾಜರಿದ್ದರು.