ಜೆಡಿಎಸ್ ನಾಯಕರ ಹುಟ್ಟುಹಬ್ಬ ಆಚರಣೆಗೆ ಶಾಸಕರ ನಿರ್ಲಕ್ಷ್ಯ: ಅಸಮಾಧಾನ

ಮಧುಗಿರಿ, ಡಿ. ೧೮- ಜೆಡಿಎಸ್ ಪಕ್ಷದ ರಾಷ್ಟ್ರ ಹಾಗೂ ರಾಜ್ಯ ನಾಯಕರಾದ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರು, ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ, ಮಾಜಿ ಸಚಿವ ಹೆಚ್.ಡಿ. ರೇವಣ್ಣರವರ ಹುಟ್ಟುಹಬ್ಬಗಳನ್ನು ಈ ಹಿಂದೆ ಮಧುಗಿರಿಯಲ್ಲಿ ಅದ್ದೂರಿಯಾಗಿ ಆಚರಿಸುತ್ತಿದ್ದರು. ಈಗ ಕ್ಷೇತ್ರದಲ್ಲಿ ಜೆಡಿಎಸ್ ಶಾಸಕರು ಇದ್ದರೂ ಕೂಡ ಹುಟ್ಟುಹಬ್ಬಗಳನ್ನು ಆಚರಿಸದ ಬಗ್ಗೆ ಜೆಡಿಎಸ್ ಕಾರ್ಯಕರ್ತರುಗಳೇ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಎಂ.ವಿ.ವೀರಭದ್ರಯ್ಯರವರು ಶಾಸಕರಾಗುವ ಮೊದಲು ಜೆಡಿಎಸ್ ನಾಯಕರುಗಳು ಹುಟ್ಟುಹಬ್ಬಗಳಲ್ಲಿ ಪಾಲ್ಗೊಂಡು ವಿಶೇಷ ಗಮನ ಸೆಳೆಯುತ್ತಿದ್ದರು. ಶಾಸಕರಾದ ನಂತರ ಮರೆತರೆ ಎಂಬ ಮಾತುಗಳು ಸಹ ಜೆಡಿಎಸ್ ವಲಯದಲ್ಲಿ ಕೇಳಿ ಬರುತ್ತಿವೆ. ಮರು ಚುನಾವಣೆ ವೇಳೆ ಅನಿತಾಕುಮಾರಸ್ವಾಮಿ ಸ್ಪರ್ಧೆ ಮಾಡಿದಾಗ ಪಟ್ಟಣದಲ್ಲಿರುವ ಮಂಡರ ಕಾಲೋನಿಯಲ್ಲಿ ಸ್ವತಃ ಹೆಚ್.ಡಿ.ಕುಮಾರಸ್ವಾಮಿ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದರು. ಆದರೆ ಡಿಸೆಂಬರ್ ೧೬ ರಂದು ಮಧುಗಿರಿಯಲ್ಲಿ ಬೆಳಿಗ್ಗೆ, ಮಧ್ಯಾಹ್ನ, ರಾತ್ರಿ ಕಳೆದರೂ ಕೂಡ ಆಚರಿಸಿದ ಸುಳಿವು ಸಿಗಲೇ ಇಲ್ಲ. ಡಿಸೆಂಬರ್ ೧೭ ರಂದು ಹೆಚ್.ಡಿ.ರೇವಣ್ಣನವರ ಹುಟ್ಟುಹಬ್ಬವನ್ನು ಸಹ ಆಚರಿಸಲಿಲ್ಲ.
ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿಯವರ ಹುಟ್ಟುಹಬ್ಬವನ್ನು ತುಮಕೂರು ಜಿಲ್ಲೆಯ ಹಲವು ತಾಲ್ಲೂಕುಗಳಲ್ಲಿ ಜೆಡಿಎಸ್ ಶಾಸಕರು ಇಲ್ಲದ ಕಡೆ ವಿಜೃಂಭಣೆಯಿಂದ ಆಚರಿಸಿದರು. ತುಮಕೂರು ಗ್ರಾಮಾಂತರ ಕ್ಷೇತ್ರದ ಶಾಸಕ ಡಿ.ಸಿ.ಗೌರಿಶಂಕರ್ ಹಾಗೂ ಪಕ್ಷದ ಜಿಲ್ಲಾಧ್ಯಕ್ಷ ಆರ್.ಸಿ. ಅಂಜಿನಪ್ಪ ಜಿಲ್ಲಾ ಜೆಡಿಎಸ್ ಕಚೇರಿಯಲ್ಲಿ ಆಚರಿಸಿದರು.
ಆದರೆ ಮಧುಗಿರಿಯಲ್ಲಿ ಜೆಡಿಎಸ್ ಶಾಸಕರಿದ್ದರೂ ಕೂಡಾ ಹುಟ್ಟುಹಬ್ಬ ಆಚರಿಸದೇ ಇರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಈ ನಿರ್ಲಕ್ಷ್ಯ ಮನೋಭಾವ ತಾಳಿರುವುದು ಹೆಚ್.ಡಿ.ಕೆ ರವರಿಗೆ ಅವಮಾನ ಮಾಡಿದಂತೆ ಆಗಿದೆ ಎಂಬ ಮಾತುಗಳು ಜೆಡಿಎಸ್ ಕಾರ್ಯಕರ್ತರಿಂದಲೇ ಕೇಳಿ ಬರುತ್ತಿದೆ. ಲೋಕಸಭಾ ಚುನಾವಣೆಯಲ್ಲಿ ಹೆಚ್.ಡಿ.ದೇವೇಗೌಡರವರಿಗೆ ಮಧುಗಿರಿ ಕ್ಷೇತ್ರದಲ್ಲಿ ಹಿನ್ನಡೆ ಕಂಡ ನಂತರ ಈ ಎಲ್ಲಾ ಬೆಳವಣಿಗೆಗಳಿಗೂ ಪುಷ್ಠಿ ನೀಡಿದೆ.
ಜೆಡಿಎಸ್ ಪಕ್ಷದ ತಾಲ್ಲೂಕು ಅಧ್ಯಕ್ಷರೂ ಆಗಿರುವ ಶಾಸಕ ಎಂ.ವಿ. ವೀರಭದ್ರಯ್ಯರವರೇ ಆಗಿರುವುದರಿಂದ ಯಾವುದೇ ತೀರ್ಮಾನಗಳನ್ನು ಕಾರ್ಯಕರ್ತರುಗಳು ಸ್ವತಂತ್ರವಾಗಿ ತೆಗೆದುಕೊಳ್ಳಲು ಸಾಧ್ಯವಾಗುತ್ತಿಲ್ಲ. ಹುಟ್ಟುಹಬ್ಬ ಆಚರಿಸದ ಕಾರಣ ಸಂಘಟನೆಗೆ ಪೆಟ್ಟು ಬಿದ್ದಿದ್ದು ನಾಮಕಾವಸ್ತೆಗೆ ಅಷ್ಟೇ ಪಕ್ಷವಿದೆ ಎಂಬ ಭಾವನೆ ಕಾರ್ಯಕರ್ತರಲ್ಲಿ ಮನೆ ಮಾಡುವಂತಾಗಿದೆ.