ಜೆಡಿಎಸ್ ನಾಮಪತ್ರ ಸಲ್ಲಿಸುವ ರ್‍ಯಾಲಿಗೆ ಜನಜಾತ್ರೆ: ಎರಡು ಗಂಟೆ ಅದ್ದೂರಿ ಮೆರವಣಿಗೆ

ದೇವದುರ್ಗ,ಏ.೨೦- ವಿಧಾನಸಭೆ ಚುನಾವಣೆಗೆ ಜೆಡಿಎಸ್ ಅಭ್ಯರ್ಥಿ ಕರೆಮ್ಮ ಜಿ.ನಾಯಕ ನಾಮಪತ್ರ ಸಲ್ಲಿಸುವ ಮುನ್ನ ಬುಧವಾರ ಹಮ್ಮಿಕೊಂಡಿದ್ದ ಮೆರವಣಿಗೆಗೆ ಜನಸಾಗರವೆ ಹರಿದುಬಂದಿತು. ವಿವಿಧ ಬಡಾವಣೆಯಲ್ಲಿ ಕಾರ್ಯಕರ್ತರು ಅದ್ದೂರಿಯಾಗಿ ರ್‍ಯಾಲಿಮಾಡಿದರು.
ಗೌರಂಪೇಟೆಯ ಶ್ರೀಮಹರ್ಷಿ ವಾಲ್ಮೀಕಿ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಮೆರವಣಿಗೆ ಚಾಲನೆ ನೀಡಿದರು. ಅಲ್ಲಿಂದ ಡಾ.ಬಿ.ಆರ್. ಅಂಬೇಡ್ಕರ್ ವೃತ್ತಕ್ಕೆ ಹೂಮಾಲೆ ಅರ್ಪಿಸಿದರು. ಮಹಾತ್ಮಗಾಂಧಿ ವೃತ್ತ, ಬಸವೇಶ್ವರ ವೃತ್ತದ ಮೂಲಕ ಸುಮಾರು ಎರಡು ಗಂಟೆಕಾಲ ಅದ್ದೂರಿ ಮೆರವಣಿಗೆ ಜರುಗಿತು. ಗ್ರಾಮೀಣ ಭಾಗದ ಮಹಿಳೆಯರು ಹೆಚ್ಚಿನಸಂಖ್ಯೆಯಲ್ಲಿ ಭಾಗವಹಿಸಿ ಗಮನಸೆಳೆದರು. ಮೆರವಣಿಗೆಯಲ್ಲಿ ಡೊಳ್ಳು ಕುಣಿತ, ಹಲಗೆ ಕಲಾತಂಡಗಳು ಭಾಗವಹಿಸಿದ್ದವು.
ನಂತರ ಮಧ್ಯಾಹ್ನ ಕರೆಮ್ಮ ಜಿ.ನಾಯಕ ನಾಮಪತ್ರ ಸಲ್ಲಿಸಿದರು. ಸೂಚಕರಾಗಿ ಜೆಡಿಎಸ್ ತಾಲೂಕು ಅಧ್ಯಕ್ಷ ಬುಡ್ಡನಗೌಡ ಪಾಟೀಲ್ ಜಾಗಟಗಲ್, ಸಿಂಧನೂರು ಶಾಸಕ ವೆಂಕಟರಾವ್ ನಾಡಗೌಡ, ಸಿದ್ದಣ್ಣತಾತ ಮುಂಡರಗಿ, ಅಮರೇಶ ಪಾಟೀಲ್ ಇತರರಿದ್ದರು. ಮೆರವಣಿಗೆಯಲ್ಲಿ ಜಿಲ್ಲಾಧ್ಯಕ್ಷ ಎಂ.ವಿರೂಪಾಕ್ಷಿ, ಶಿವಶಂಕರ ವಕೀಲ, ಯೂಸಿಫ್‌ಖಾನ್, ಸಿದ್ದನಗೌಡ ಮೂಡಲಗುಂಡ ಇತರರರಿದ್ದರು.
ಜೆಡಿಎಸ್ ಅಭ್ಯರ್ಥಿ ಕರೆಮ್ಮ ಜಿ.ನಾಯಕ ನಾಮಪತ್ರ ಸಲ್ಲಿಸುವ ವೇಳೆ ರಾಜ್ಯ ಹೆದ್ದಾರಿಯಲ್ಲಿ ಒಂದು ಗಂಟೆಕಾಲ ಸಂಚಾರ ದಟ್ಟಣೆ ಉಂಟಾಯಿತು. ಜಾಲಹಳ್ಳಿ ರಸ್ತೆಯಿಂದ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದವರೆಗೆ ಅಪಾರಜನರು ಸೇರಿದ್ದು, ಗೌರಂಪೇಟೆ ವಾಲ್ಮೀಕಿ ವೃತ್ತದಿಂದ ಅಂಬೇಡ್ಕರ್ ವೃತ್ತದವರೆಗೆ ಮೆರವಣಿಗೆ ನಡೆಸುವ ವೇಳೆ ರಾಯಚೂರು ತಿಂಥಣಿ ಬ್ರಿಡ್ಜ್ ರಾಜ್ಯ ಹೆದ್ದಾರಿಯಲ್ಲಿ ಒಂದು ಗಂಟೆಗಳ ಕಾಲ ಟ್ರಾಫಿಕ್ ಜಾಮ್‌ಆಗಿ ವಾಹನಗಳು ಸಾಲುಗಟ್ಟಿ ನಿಂತಿದ್ದವು.

೨೦-ಡಿವಿಡಿ-೧