ಜೆಡಿಎಸ್ ತೊರೆದು ಬಿಜೆಪಿಗೆ ರವೀಶಯ್ಯ ಸೇರ್ಪಡೆ

ತುಮಕೂರು, ಜು. ೩೦- ಬಿಜೆಪಿ ಪಕ್ಷ ತೊರೆದು ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಗೊಂಡಿದ್ದ ಹೆಚ್.ಎಂ.ಟಿ.ರವೀಶಯ್ಯ ಮತ್ತೆ ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾಗಿದ್ದು, ಪಕ್ಷದ ಕಚೇರಿಯಲ್ಲಿ ಅವರನ್ನು ಶಾಸಕರು, ಜಿಲ್ಲಾ ಬಿಜೆಪಿ ಅಧ್ಯಕ್ಷರು ಹಾಗೂ ಕಾರ್ಯಕರ್ತರಿಂದ ಆತ್ಮೀಯವಾಗಿ ಬರ ಮಾಡಿಕೊಳ್ಳಲಾಯಿತು.
ಬಿಜೆಪಿ ಪಕ್ಷಕ್ಕೆ ಮರು ಸೇರ್ಪಡೆಗೊಂಡ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಹೆಚ್.ಎಂ.ಟಿ. ರವೀಶಯ್ಯ, ಬಿಜೆಪಿ ಪಕ್ಷದಲ್ಲಿ ಕೆಲ ದಿನಗಳಿಂದ ನನ್ನನ್ನು ಕಡೆಗಣಿಸಿದ ಪರಿಣಾಮ ಜಿಲ್ಲಾ ನಾಯಕರ ನಡೆಗೆ ಬೇಸತ್ತು ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಗೊಂಡಿದ್ದೆ. ಅಂದಿನಿಂದ ಬಿಜೆಪಿ ಪಕ್ಷದ ಹಲವಾರು ಮುಖಂಡರು, ಕಾರ್ಯಕರ್ತರು ತಮ್ಮ ನಿರ್ಧಾರವನ್ನು ಮರು ಪರಿಶೀಲಿಸಿ, ಪುನಃ ಪಕ್ಷಕ್ಕೆ ಬರುವಂತೆ ಮನವಿ ಮಾಡುತ್ತಲೇ ಬಂದಿದ್ದರು. ಅದರೆ ನಾನು ನೋಡುವ ಎಂಬ ಉತ್ತರ ಹೇಳಿ ಕಳುಹಿಸುತ್ತಿದ್ದೆ. ಜಿಲ್ಲಾಧ್ಯಕ್ಷ ಹೆಬ್ಬಾಕ ರವಿಶಂಕರ್, ಶಾಸಕ ಜಿ.ಬಿ.ಜೋತಿಗಣೇಶ್, ಪಾಲಿಕೆ ಮೇಯರ್ ಬಿ.ಜಿ.ಕೃಷ್ಣಪ್ಪ, ಪಕ್ಷದ ಪದಾಧಿಕಾರಿಗಳು, ಪಾಲಿಕೆಯ ಬಿಜೆಪಿ ಪಕ್ಷದ ಸದಸ್ಯರುಗಳು ಸೇರಿದಂತೆ ಹಲವಾರು ಕಾರ್ಯಕರ್ತರು ಮನೆಗೆ ಬಂದು, ಪಕ್ಷದಲ್ಲಿ ಇನ್ನು ಮುಂದೆ ಹೀಗಾಗದಂತೆ ನೋಡಿಕೊಳ್ಳುತ್ತೇವೆ. ನಿಮಗೆ ತಕ್ಕದಾದ ಸ್ಥಾನಮಾನ ನೀಡಿ, ಆರಂಭದಿಂದಲು ಪಕ್ಷ ಕಟ್ಟಿರುವ ನಿಮಗೆ ಗೌರವ ನೀಡುತ್ತೇವೆ ಎಂಬ ಭರವಸೆ ನೀಡಿದ ಹಿನ್ನೆಲೆಯಲ್ಲಿ ಪಕ್ಷದ ಕಚೇರಿಯಲ್ಲಿ ಬಿಜೆಪಿಗೆ ಮರು ಸೇರ್ಪಡೆಗೊಂಡಿದ್ದೇನೆ ಎಂದರು.
ಜೆಡಿಎಸ್ ಪಕ್ಷ ನನ್ನನ್ನು ಗೌರವದಿಂದ ನಡೆಸಿಕೊಂಡಿದೆ. ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಪಾಲ್ಗೊಂಡಿದ್ದೆ. ಎನ್.ಗೋವಿಂದರಾಜು ನನ್ನನ್ನು ಜೆಡಿಎಸ್ ಪಕ್ಷಕ್ಕೆ ಬರಮಾಡಿಕೊಂಡಿದ್ದರು. ಅವರಿಗೆ ಕೃತಜ್ಞನಾಗಿದ್ದೇನೆ. ಜೆಡಿಎಸ್ ಪಕ್ಷದ ಬಗ್ಗೆ ಬೇಸರ ಇಲ್ಲ. ಎಲ್ಲ ಮುಖಂಡರು ಗೌರವಯುತವಾಗಿ ನಡೆಸಿಕೊಂಡಿದ್ದರು ಎಂದರು.
ಈ ಸಂದರ್ಭದಲ್ಲಿ ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ರವಿಕುಮಾರ್, ಜಿಲ್ಲಾ ಬಿಜೆಪಿ ಅಧ್ಯಕ್ಷ ಹೆಚ್.ಎಸ್.ರವಿಶಂಕರ್, ಶಾಸಕ ಜಿ.ಬಿ.ಜೋತಿಗಣೇಶ್, ಪಾಲಿಕೆ ಸದಸ್ಯರಾದ ಮಲ್ಲಿಕಾರ್ಜುನಯ್ಯ, ಸಿ.ಎನ್.ರಮೇಶ್, ಗುಬ್ಬಿಯ ಜಿ.ಎನ್.ಬೆಟ್ಟಸ್ವಾಮಿ, ಚಂದ್ರಶೇಖರಬಾಬು, ತುಮುಲ್ ನಿರ್ದೇಶಕ ಚಂದ್ರಶೇಖರ್, ಟೂಡಾ ಸದಸ್ಯ ಸತ್ಯಮಂಗಲ ಜಗದೀಶ್, ನಗರ ಅಧ್ಯಕ್ಷ ಹನುಮಂತರಾಜು, ತರಕಾರಿ ಮಹೇಶ್, ವಿರೂಪಾಕ್ಷಪ್ಪ, ಸಂದೀಪಗೌಡ, ಚೆಂಗಾವಿ ರವಿ, ರವೀಶ್, ಹನುಮಂತರಾಜು ಮತ್ತಿತರರು ಉಪಸ್ಥಿತರಿದ್ದರು.