
ರಾಮನಗರ,ಏ.೧೭- ಕೆಎಂಎಫ್ ಮಾಜಿ ಅಧ್ಯಕ್ಷ ಪಿ.ನಾಗರಾಜು ಹಾಗೂ ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಪ್ರಾಣೇಶ ಅವರು ಜೆಡಿಎಸ್ ತೊರೆದು ಸಂಸದ ಡಿ.ಕೆ.ಸುರೇಶ್ ಸಮ್ಮುಖದಲ್ಲಿ ಕಾಂಗ್ರೆಸ್ ಸೇರ್ಪಡೆಗೊಂಡರು.
ತಾಲೂಕಿನ ಚನ್ನೇನಹಳ್ಳಿ ಗ್ರಾಮದಲ್ಲಿ ಭಾನುವಾರ ಈ ಇಬ್ಬರು ನಾಯಕರು ಡಿ.ಕೆ.ಶಿವಕುಮಾರ್ ಅವರ ನಾಯಕತ್ವವನ್ನು ಬೆಂಬಲಿಸಿ ಕಾಂಗ್ರೆಸ್ ಸೇರ್ಪಡೆ ಗೊಂಡಿದ್ದಾರೆ. ಕೆಎಂಎಫ್ ಅಧ್ಯಕ್ಷ ಪಿ.ನಾಗರಾಜು ಅವರು ಕಳೆದ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ತೊರೆದು ಜೆಡಿಎಸ್ ಸೇರ್ಪಡೆಗೊಂಡಿದ್ದರು. ಈಗ ಮರಳಿ ಕಾಂಗ್ರೆಸ್‌ಗೆ ಸೇರ್ಪಡೆಯಾಗಿದ್ದಾರೆ.
ಪಿ.ನಾಗರಾಜ್ ಮಾತನಾಡಿ, ಡಿ.ಕೆ ಶಿವಕುಮಾರ್ ಅವರೇ ನಮ್ಮನ್ನು ಕೆಎಂಎಫ್ ಅಧ್ಯಕ್ಷರನ್ನಾಗಿ ಮಾಡಿದ್ದರು. ಹೈನುಗಾರರ ಶ್ರೇಯೋಭಿವೃದ್ಧಿಗೆ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಹೆಚ್ಚಿನ ಪ್ರೋತ್ಸಾಹ ಸಹಕಾರ ನೀಡಿದ್ದರು. ರೈತ ಪರ ನಮ್ಮ ಬೇಡಿಕೆಗಳನ್ನು ಈಡೇರಿಸುತ್ತಾರೆ. ಒಮ್ಮೆ ಶಿವಕುಮಾರ್ ಅವರನ್ನು ಮುಖ್ಯಮಂತ್ರಿ ಮಾಡಬೇಕು. ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸಬೇಕು. ಇನ್ನೂ ನೂರಾರು ಮಂದಿ ಕಾಂಗ್ರೆಸ್ ಸೇರ್ಪಡೆಗೊಳ್ಳಲಿದ್ದಾರೆ ಎಂದರು.
ಪ್ರಾಣೇಶ್ ಮಾತನಾಡಿ, ರಾಜ್ಯದಲ್ಲಿ ಮುಖ್ಯಮಂತ್ರಿ ಆಗಲು ಅವಕಾಶ ಇದೆ. ಈ ಅವಕಾಶವನ್ನು ಬಳಸಿಕೊಂಡರೆ ಜಿಲ್ಲೆ ಮತ್ತಷ್ಟು ಅಭಿವೃದ್ಧಿ ಆಗಲಿದೆ.
ಜಿಲ್ಲೆಯಲ್ಲಿ ನಾಲ್ಕು ಕ್ಷೇತ್ರಗಳಲ್ಲೂ ಕಾಂಗ್ರೆಸ್ ಗೆಲ್ಲಿಸಲು ಪಣತೊಟ್ಟು ಕೆಲಸ ಮಾಡುತ್ತೇವೆ ಎಂದರು.
ಇದೇ ವೇಳೆ, ನಗರಸಭೆ ಮಾಜಿ ಅಧ್ಯಕ್ಷ ರವಿ ಸೇರಿದಂತೆ ಹಲವು ಮುಖಂಡರು ಕಾಂಗ್ರೆಸ್ ಸೇರ್ಪಡೆ ಗೊಂಡರು.
ಈ ಸಂದರ್ಭದಲ್ಲಿ ಎಂಎಲ್ ಸಿ ರವಿ, ಮಾಜಿ ಶಾಸಕ ಕೆ. ರಾಜು, ಎಂಇಐ ಮಾಜಿ ಅಧ್ಯಕ್ಷ ಕೆ.ಶೇಷಾದ್ರಿ, ದೊಡ್ಡ ವೀರಗೌಡ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ರಾಜು, ಚೇತನ್ ಕುಮಾರ್, ನಾಗಣ್ಣ ಮತ್ತಿತರರು ಇದ್ದರು.