ಜೆಡಿಎಸ್, ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ ಜಾಲಹಳ್ಳಿ ಗ್ರಾಮಸ್ಥರು

ಅರಕೇರಾ,ಮಾ.೧೪- ದೇವದುರ್ಗ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಜಾಲಹಳ್ಳಿ ಗ್ರಾಮದ ವಾರ್ಡ್ ನಂ.೫ರ ೨೦ಕ್ಕೂ ಹೆಚ್ಚು ಕಾರ್ಯಕರ್ತರು ಜೆಡಿಎಸ್ ಮತ್ತು ಕಾಂಗ್ರೆಸ್ ತೊರೆದು ದೇವದುರ್ಗ ಕ್ಷೇತ್ರದ ಶಾಸಕರಾದ ಕೆ.ಶಿವನಗೌಡ ನಾಯಕ ಅವರ ನೇತೃತ್ವದಲ್ಲಿ ಭಾರತೀಯ ಜನತಾ ಪಕ್ಷಕ್ಕೆ ಸೇರ್ಪಡೆಯಾದರು.
ಅರಕೇರಾ ಪಟ್ಟಣದ ಶಾಸಕರ ನಿವಾಸದಲ್ಲಿಂದು ಹಮ್ಮಿಕೊಂಡಿದ್ದ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಅಧಿಕೃತವಾಗಿ ಸೇರ್ಪಡೆಯಾದರು. ಶಾಸಕರಾದ ಕೆ.ಶಿವನಗೌಡ ನಾಯಕ ಅವರು ನೂತನ ಕಾರ್ಯಕರ್ತರಿಗೆ ಬಿಜೆಪಿ ಪಕ್ಷದ ಶಾಲು ಹಾಕುವ ಮೂಲಕ ಆತ್ಮೀಯವಾಗಿ ಬಿಜೆಪಿ ಪಕ್ಷಕ್ಕೆ ಸ್ವಾಗತಿಸಿದರು.
ಇದೇ ವೇಳೆ ಶಾಸಕರು ಮಾತನಾಡಿ, ಕ್ಷೇತ್ರದ ಜನರ ಪ್ರತಿಯೊಂದು ಸಮಸ್ಯೆಗಳಿಗೆ ಸ್ಪಂದಿಸುವುದರ ಜೊತೆಗೆ ನಿರಂತರವಾಗಿ ಜನಸೇವೆಯಲ್ಲಿ ತೊಡಗಿರುವುದನ್ನು ಮನಗಂಡು ತಾವುಗಳು ನಮ್ಮ ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾಗುತ್ತಿರುವುದು ಹೆಮ್ಮೆಯ ಸಂಗತಿ. ಎಲ್ಲಾ ಕಾರ್ಯಕರ್ತರು ನಿಷ್ಠೆ ಹಾಗೂ ಪ್ರಾಮಾಣಿಕತೆಯಿಂದ ಕೆಲಸ ಮಾಡಿ ನಮ್ಮ ಪಕ್ಷವನ್ನು ಮತ್ತೊಮ್ಮೆ ಅಧಿಕಾರಕ್ಕೆ ತರುವ ಮೂಲಕ ತಾಲೂಕಿನ ಸರ್ವಾಂಗೀಣ ಅಭಿವೃದ್ಧಿಗೆ ಸಹಕಾರ ನೀಡಬೇಕು ಎಂದು ಕಾರ್ಯಕರ್ತರಲ್ಲಿ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಜಾಲಹಳ್ಳಿಯ ಬಿಜೆಪಿ ಪಕ್ಷದ ಮುಖಂಡರಾದ ಶ್ರೀಧರ ದೇಸಾಯಿ, ಶಿವಪುತ್ರ, ರಂಗನಾಥ, ಬಸವರಾಜ, ಚನ್ನಪ್ಪ ತ್ಯಾಪಲೆ, ವೆಂಕೋಬ, ನಾಗರಾಜ, ಕಿಷ್ಟಪ್ಪ, ಹನ್ಮಂತ್ರಾಯ, ಬಸನಗೌಡ, ರಾಮಸ್ವಾಮಿ ಸೇರಿದಂತೆ ಗ್ರಾಮದ ಮುಖಂಡರು ಮತ್ತು ಯುವಕರು ಇದ್ದರು.